ರಾಜ್ಯಪಾಲರಿಗೆ ಬಿಜೆಪಿ ದೂರು

ಈ ಸುದ್ದಿಯನ್ನು ಶೇರ್ ಮಾಡಿ

BJP--0144

ಬೆಂಗಳೂರು, ಸೆ.1- ಪ್ರವಾಸ ಹಾಗೂ ದಿನಭತ್ಯೆ ದುರುಪಯೋಗಪಡಿಸಿಕೊಂಡ ಹಿನ್ನೆಲೆಯಲ್ಲಿ ವಿಧಾನಪರಿಷತ್‍ನ ಎಂಟು ಮಂದಿ ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ಪ್ರತಿಪಕ್ಷ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿದೆ. ಇದೇ ವೇಳೆ ಇಂದು ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿರುವ ಸದಸ್ಯ ಆರ್.ಬಿ.ತಿಮ್ಮಾಪುರ್ ಅವರಿಗೆ ಯಾವುದೇ ಕಾರಣಕ್ಕೂ ಅಧಿಕಾರ ಗೌಪ್ಯತೆ ಬೋಧಿಸಬಾರದೆಂದು ರಾಜ್ಯಪಾಲ ವಿ.ಆರ್.ವಾಲಾ ಅವರಿಗೆ ದಾಖಲೆಗಳ ಸಮೇತ ದೂರು ಸಲ್ಲಿಸಿದೆ.

ಇಂದು ಬೆಳಗ್ಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಮುನಿರಾಜು, ನಾರಾಯಣಸ್ವಾಮಿ, ವಿಜಯ್‍ಕುಮಾರ್, ಕೃಷ್ಣಪ್ಪ, ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಸೇರಿದಂತೆ ಮತ್ತಿತರ ಮುಖಂಡರು ರಾಜ್ಯಪಾಲರನ್ನು ಭೇಟಿ ಮಾಡಿ ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ಮನವಿ ಮಾಡಿದರು. ದೂರು ಸ್ವೀಕರಿಸಿದ ರಾಜ್ಯಪಾಲರು ಈ ಬಗ್ಗೆ ದಾಖಲೆ ಪರಿಶೀಲಿಸಿ ಕಾನೂನು ತಜ್ಞರ ಜತೆ ಚರ್ಚಿಸಿ ಸೂಕ್ತ ಕ್ರಮ ಜರುಗಿಸುವ ಭರವಸೆ ಕೊಟ್ಟಿದ್ದಾರೆ.

ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ಸದಸ್ಯರಾದ ಆರ್.ಬಿ.ತಿಮ್ಮಾಪುರ್, ಬೋಸರಾಜ್, ಅಲ್ಲಂ ವೀರಭದ್ರಪ್ಪ, ರಘು ಆಚಾರ್, ಎಸ್.ರವಿ, ಎಂ.ಡಿ.ಲಕ್ಷ್ಮಿನಾರಾಯಣ, ಸಿ.ಆರ್.ಮನೋಹರ್ ಮತ್ತು ಅಪ್ಪಾಜಿಗೌಡ ಅವರುಗಳು ಸುಳ್ಳು ವಿಳಾಸ ನೀಡಿ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ವಂಚನೆ ಮಾಡಿದ್ದಾರೆಂದು ದೂರಿದರು. ಇತ್ತೀಚೆಗೆ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಅವರು ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ಈ ಎಂಟು ಮಂದಿ ಸದಸ್ಯರು ಮೇಯರ್ ಚುನಾವಣೆಗಾಗಿಯೇ ಸುಳ್ಳು ವಿಳಾಸ ನೀಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಹೀಗಾಗಿ ಇವರ ಸದಸ್ಯತ್ವವನ್ನು ರಾಜ್ಯಪಾಲರು ತಕ್ಷಣವೇ ಅನರ್ಹಗೊಳಿಸುವಂತೆ ದೂರು ನೀಡಿರುವುದಾಗಿ ಹೇಳಿದರು.

ಮೇಯರ್ ಚುನಾವಣೆ ಸಂದರ್ಭದಲ್ಲಿ ಬೆಂಗಳೂರಿನ ವಿಳಾಸ ನೀಡುವುದು, ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಅಲ್ಲಿನ ವಿಳಾಸ ನೀಡಿರುವುದು ಜನಪ್ರತಿನಿಧಿ ಕಾಯ್ದೆ ಪ್ರಕಾರ, ಶಿಕ್ಷಾರ್ಹ ಅಪರಾಧ. ಇಂತಹವರು ಮೇಲ್ಮನೆ ಸದಸ್ಯರಾಗಲು ಅರ್ಹರಲ್ಲ ಎಂದು ಶೆಟ್ಟರ್ ಕಿಡಿಕಾರಿದರು.  ಹಣ ದುರುಪಯೋಗಪಡಿಸಿಕೊಂಡಿರುವುದರಿಂದ ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಈಗಾಗಲೇ ಚುನಾವಣಾ ಆಯೋಗಕ್ಕೆ ನಾವು ದಾಖಲೆಗಳನ್ನು ನೀಡಿದ್ದೇವೆ. ಇದೇ ದಾಖಲೆಗಳನ್ನು ರಾಜ್ಯಪಾಲರಿಗೂ ನೀಡಿರುವುದರಿಂದ ಸೂಕ್ತ ನ್ಯಾಯ ಸಿಗುವ ಭರವಸೆ ಇದೆ ಎಂದರು.
ನಾಲಾಯಕ್ ತಿಮ್ಮಾಪುರ್: ಇಂದು ಸಂಪುಟಕ್ಕೆ ಸೇರ್ಪಡೆಯಾಗಲಿರುವ ಆರ್.ಬಿ.ತಿಮ್ಮಾಪುರ್ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ. ಇಂತಹವರು ಸಂಪುಟಕ್ಕೆ ಸೇರ್ಪಡೆಗೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಯಾವ ಕಾರಣಕ್ಕೂ ರಾಜ್ಯಪಾಲರು ಅಧಿಕಾರ ಗೌಪ್ಯತೆ ಬೋಧಿಸಬಾರದು ಎಂದು ಮನವಿ ಮಾಡಿರುವುದಾಗಿ ಹೇಳಿದರು.

ಒಂದು ವೇಳೆ ಸಚಿವರಾಗಿ ನಾಳೆ ಅನರ್ಹಗೊಂಡರೆ ಸರ್ಕಾರ ಮುಜುಗರಕ್ಕೆ ಸಿಲುಕುತ್ತದೆ. ಇಷ್ಟೆಲ್ಲ ರಾದ್ಧಾಂತಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಹೊಣೆಯಾಗಿದ್ದಾರೆ. ಮೊದಲು ಅವರು ನೈತಿಕ ಹೊಣೆ ಹೊರಬೇಕೆಂದು ಕಿಡಿಕಾರಿದರು. ಬಿಜೆಪಿ ಮುಖಂಡ ಆರ್.ಅಶೋಕ್ ಮಾತನಾಡಿ, ಎಂಟು ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ರಾಜ್ಯಪಾಲರಿಗೆ ದೂರು ನೀಡಲಾಗಿದೆ.  ಟಿಎಡಿಎ ದುರುಪಯೋಗಪಡಿಸಿಕೊಂಡಿರುವ ಇವರು ಮೇಲ್ಮನೆ ಸದಸ್ಯರಾಗಲು ಅರ್ಹತೆ ಹೊಂದಿಲ್ಲ. ಬಿಬಿಎಂಪಿ ಚುನಾವಣೆಯಲ್ಲಿ ಬಹುಮತ ಬಾರದಿದ್ದರೂ ಸುಳ್ಳು ವಿಳಾಸ ನೀಡಿ ಮೇಯರ್ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ. ಜನಪ್ರತಿನಿಧಿ ಕಾಯ್ದೆ ಪ್ರಕಾರ ಇದು ಅತ್ಯಂತ ಘೋರ ಅಪರಾಧ ಎಂದು ಹೇಳಿದರು.

ನಾಳೆ ನಾವು ವಿಧಾನಪರಿಷತ್ ಸಭಾಪತಿಗಳಾದ ಡಿ.ಎಚ್.ಶಂಕರಮೂರ್ತಿಯವರಿಗೆ ಸದಸ್ಯರ ಅನರ್ಹತೆಗೊಳಿಸಲು ದೂರು ನೀಡಲಿದ್ದೇವೆ. ಈಗಾಗಲೇ ಚುನಾವಣಾ ಆಯೋಗಕ್ಕೂ ಅನರ್ಹಗೊಳಿಸುವಂತೆ ಮನವಿ ಮಾಡಲಾಗಿದೆ. ಅಧಿಕಾರ ಹಿಡಿಯಲು ಸುಳ್ಳು ವಿಳಾಸ ನೀಡಿರುವ ಇವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು. ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಸಿದ್ದರಾಮಯ್ಯ ಸರ್ಕಾರದಲ್ಲಿ ಮೋಸ ಮಾಡುವವರು, ಸಾರ್ವಜನಿಕರಿಗೆ ವಂಚನೆ ಮಾಡುವವರಿಗೆ ಮಂತ್ರಿಸ್ಥಾನ ಸಿಗುತ್ತದೆ. ಟಿಎಡಿಎ ದುರುಪಯೋಗಪಡಿಸಿಕೊಂಡ ತಿಮ್ಮಾಪುರ್‍ಗೆ ಮಂತ್ರಿಯಾಗುವ ಯೋಗ್ಯತೆಯಿಲ್ಲ ಎಂದು ಕಿಡಿಕಾರಿದರು.

ಜನಪ್ರತಿನಿಧಿ ಕಾಯ್ದೆ ಪ್ರಕಾರ, ಸುಳ್ಳು ಮಾಹಿತಿ ನೀಡುವುದು ಭ್ರಷ್ಟಾಚಾರ ಎಸಗಿದಷ್ಟೆ ಅಪರಾಧ. ಇಂತಹವರು ಸಚಿವರಾಗುವುದಾಗಲಿ, ಇಲ್ಲವೆ ಮೇಲ್ಮನೆ ಸದಸ್ಯರಾಗುವುದು ನಾಚಿಕೆಗೇಡಿನ ಸಂಗತಿ. ರಾಜ್ಯಪಾಲರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನಮಗಿದೆ ಎಂದು ಹೇಳಿದರು.

Facebook Comments

Sri Raghav

Admin