ರಾಜ್ಯಪಾಲರ ಅಂಗಳದಲ್ಲಿ ಸರ್ಕಾರ ರಚನೆಯ ಚಂಡು

ಈ ಸುದ್ದಿಯನ್ನು ಶೇರ್ ಮಾಡಿ

Vajubhai-wala

ಬೆಂಗಳೂರು,ಮೇ16- ದೇಶದ ಗಮನವನ್ನೇ ತನ್ನತ್ತ ಸೆಳೆದಿರುವ ಕರ್ನಾಟಕದಲ್ಲಿ ಸರ್ಕಾರ ರಚನೆ ಕುರಿತು ಹಗ್ಗ ಜಗ್ಗಾಟ ಎರಡೂ ಕಡೆಯಿಂದಲೂ ಇಂದು ಮುಂದುವರೆದಿದೆ. ಸರ್ಕಾರ ರಚನೆಗೆ ಬಿಜೆಪಿ ಶತ ಪ್ರಯತ್ನ ನಡೆಸುತ್ತಿದೆ.ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಜೆಡಿಎಸ್ ಕೂಡ ನಮಗೆ ಆಹ್ವಾನ ನೀಡಬೇಕೆಂದು ರಾಜ್ಯಪಾಲರಿಗೆ ಒತ್ತಡ ಹೇರುತ್ತಿದೆ. ಇದೀಗ ರಾಜ್ಯಪಾಲರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ರಾಜ್ಯ ರಾಜಕಾರಣದ ಭವಿಷ್ಯ ನಿಂತಿದೆ.

ಇಂದು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿ ಬೆಳಗಿನಿಂದಲೇ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದವು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನಿವಾಸದಲ್ಲಿ ಮುಖಂಡರು ಸಭೆ ನಡೆಸಿದರು. ಬಳಿಕ ಪಕ್ಷದ ಕಚೇರಿಯಲ್ಲಿ ಶಾಸಕಾಂಗ ಸಭೆ ನಡೆಸಲಾಯಿತು. ಇತ್ತ ಕಾಂಗ್ರೆಸ್ ಕೆಪಿಸಿಸಿ ಕಚೇರಿಯಲ್ಲಿ ಹಂಗಾಮಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಶಾಸಕಾಂಗ ಸಭೆ ನಡೆಸಲಾಯಿತು.

ಮತ್ತೊಂದೆಡೆ ಜೆಡಿಎಸ್ ಕೂಡ ಖಾಸಗಿ ಹೋಟೆಲ್‍ನಲ್ಲಿ ಪಕ್ಷದ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಶಾಸಕಾಂಗ ಸಭೆ ನಡೆಸಿ ಸರ್ಕಾರ ರಚನೆಗೆ ಹಕ್ಕು ಮಂಡಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು. ರಾಣಿ ಬೆನ್ನೂರಿನ ಪಕ್ಷೇತರ ಶಾಸಕ ಆರ್.ಶಂಕರ್ ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿರುವುದು ಇಂದಿನ ಹೊಸ ಬೆಳವಣಿಗೆ.

ಆಪರೇಷನ್ ಭೀತಿ:
ಈಗ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳಲ್ಲೂ ಆಪರೇಷನ್ ಭೀತಿ ಎದುರಾಗಿದೆ. ಮೂಲಗಳ ಪ್ರಕಾರ ಬಿಜೆಪಿ ಕಾಂಗ್ರೆಸ್‍ನ ಒಂದು ಡಜನ್ ಶಾಸಕರನ್ನು ಪಕ್ಷದತ್ತ ಸೆಳೆಯಲು ಮುಂದಾಗಿದೆ. ಇದರ ಸುಳಿವು ಅರಿತಿರುವ ಕಾಂಗ್ರೆಸ್ ತನ್ನ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡುವಂತೆ ಜಿಲ್ಲಾಧ್ಯಕ್ಷರಿಗೆ ಸೂಚನೆ ಕೊಟ್ಟಿದೆ. ಆಪರೇಷನ್ ಕಮಲ ನಡೆಯಬಹುದೆಂಬ ಪುಷ್ಟಿಗೆ ಇಂಬು ಕೊಡುವಂತೆ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಗೆ ಕೆಲವು ಶಾಸಕರು ಗೈರು ಹಾಜರಾಗಿದ್ದರು.

ಜೆಡಿಎಸ್‍ನ ಕೆಲ ಶಾಸಕರನ್ನು ಸೆಳೆಯಲು ಬಿಜೆಪಿ ನಾಯಕರು ನಡೆಸಿದ ಪ್ರಯತ್ನ ಫಲ ಕೊಟ್ಟಿಲ್ಲ. ಶಿರಾದ ಸತ್ಯನಾರಾಯಣ, ಚಾಮುಂಡೇಶ್ವರಿಯ ಜಿ.ಟಿ.ದೇವೇಗೌಡ, ನೆಲಮಂಗಲದ ಡಾ.ಶ್ರೀನಿವಾಸಮೂರ್ತಿ ಅವರನ್ನು ಸಂಪರ್ಕಿಸಿ ಪಕ್ಷಕ್ಕೆ ಬರುವಂತೆ ಆಹ್ವಾನಿಸಲಾಗಿತ್ತು. ಆದರೆ ತಾವು ಯಾವುದೇ ಕಾರಣಕ್ಕೂ ಜೆಡಿಎಸ್ ಬಿಟ್ಟು ಬಿಜೆಪಿಗೆ ಬರುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರೆಸಾರ್ಟ್‍ನತ್ತ ಶಾಸಕರು:
ಆಪರೇಷನ್ ಭೀತಿಗೆ ಒಳಗಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ತನ್ನೆಲ್ಲ ಶಾಸಕರನ್ನು ರೆಸಾರ್ಟ್‍ಗೆ ಕರೆದೊಯ್ಯಲು ಮುಂದಾಗಿದ್ದಾರೆ. ಬಿಡದಿ ಸಮೀಪವಿರುವ ಈಗಲ್‍ಟನ್ ರೆಸಾರ್ಟ್‍ಗೆ ಉಭಯ ಪಕ್ಷಗಳ ಶಾಸಕರನ್ನು ಕರೆದೊಯ್ಯಲು ತೀರ್ಮಾನಿಸಲಾಗಿದೆ. ಶಾಸಕ ಜಮೀರ್ ಅಹಮ್ಮದ್ ಅವರ ಬಸ್‍ನಲ್ಲಿ ಈ ಎಲ್ಲ ಶಾಸಕರು ಸಂಜೆ ವೇಳೆಗೆ ರೆಸಾರ್ಟ್ ತಲುಪಲಿದ್ದಾರೆ. ರಾಜ್ಯಪಾಲರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ರಾಜ್ಯ ರಾಜಕಾರಣದ ಭವಿಷ್ಯ ನಿಂತಿದೆ.

Facebook Comments

Sri Raghav

Admin