ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಅಭ್ಯಥಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Rajyasabha--01

ಬೆಂಗಳೂರು, ಮಾ.12- ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಇಂದು ಬಿಜೆಪಿ ಅಭ್ಯರ್ಥಿಯಾಗಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸಾಹಿತಿ ಡಾ.ಎನ್.ಹನುಮಂತಯ್ಯ, ಡಾ.ಸಯ್ಯದ್‍ನಾಸೀರ್ ಹುಸೇನ್ ಹಾಗೂ ಜಿ.ಸಿ.ಚಂದ್ರಶೇಖರ್ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೆ ಕಡೆ ದಿನವಾಗಿದ್ದ ಇಂದು ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ರಾಜ್ಯಸಭೆ ಚುನಾವಣೆ ಅಧಿಕಾರಿಯೂ ಆಗಿರುವ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಅವರಿಗೆ ಸಲ್ಲಿಸಿದರು.

ಇದರಿಂದ ನಾಲ್ಕನೇ ಅಭ್ಯರ್ಥಿ ಆಯ್ಕೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಸ್ಪರ್ಧೆ ಏರ್ಪಟ್ಟಂತಾಗಿದೆ. ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಕಾಂಗ್ರೆಸ್‍ನ ಮೂರನೇ ಅಭ್ಯರ್ಥಿ ಕಣದಲ್ಲಿ ಉಳಿದಿದ್ದೇ ಆದರೆ ಗೆಲುವಿಗಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ.
ರಾಜ್ಯಸಭೆ ಸದಸ್ಯರಾದ ಕೆ.ರೆಹಮಾನ್‍ಖಾನ್, ರಾಜೀವ್ ಚಂದ್ರುಶೇಖರ್, ರಂಗಸಾಯಿ ರಾಮಕೃಷ್ಣ, ಬಸವರಾಜಪಾಟೀಲ್ ಅವರು ಏಪ್ರಿಲ್ 2ರಂದು ನಿವೃತ್ತಿಯಾಗುತ್ತಿದ್ದು, ಇದರಿಂದ ತೆರವಾಗುವ ನಾಲ್ಕೂ ಸ್ಥಾನಗಳಿಗೆ ಮಾ.23ರಂದು ಮತದಾನ ನಡೆಯಲಿದೆ.

ಈಗಾಗಲೇ ಜೆಡಿಎಸ್ ಅಭ್ಯರ್ಥಿಯಾಗಿ ಬಿ.ಎಂ.ಫಾರೂಕ್ ನಾಮಪತ್ರ ಸಲ್ಲಿಸಿದ್ದಾರೆ. ಕಳೆದ ಬಾರಿ ಕೂಡ ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಫಾರೂಕ್ ಸ್ಪರ್ಧಿಸಿ ಪರಾಭವಗೊಂಡಿದ್ದರು. ವಿಧಾನಸಭೆಯಲ್ಲಿ ಹೊಂದಿರುವ ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ರಾಜ್ಯಸಭೆಯ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಕಾಂಗ್ರೆಸ್‍ಗೂ ಕೂಡ ಮೂರನೇ ಅಭ್ಯರ್ಥಿ ಆಯ್ಕೆಗೆ ಬೇರೆ ಪಕ್ಷ ಇಲ್ಲವೇ ಪಕ್ಷೇತರ ಶಾಸಕರ ಬೆಂಬಲ ಅನಿವಾರ್ಯವಾಗಿದೆ. ಹೀಗಾಗಿ ಪಕ್ಷೇತರ ಶಾಸಕರಿಗೆ ಎಲ್ಲಿಲ್ಲದ ಬೇಡಿಕೆ ಈ ಚುನಾವಣೆಯಲ್ಲಿ ಉಂಟಾಗಿದೆ.

ಕಾಂಗ್ರೆಸ್ ಪಕ್ಷ ವಿಧಾನಸಭೆಯಲ್ಲಿ ಹೊಂದಿರುವ ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಎರಡು ರಾಜ್ಯಸಭೆ ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದಾಗಿದೆ. ಬಿಜೆಪಿಗೂ ಕೂಡ ಒಂದು ಸ್ಥಾನವನ್ನು ಗೆಲ್ಲಲು ಕಷ್ಟವಾಗುವುದಿಲ್ಲ. ಬಿಜೆಪಿ ಅಭ್ಯರ್ಥಿಯಾದ ರಾಜೀವ್‍ಚಂದ್ರಶೇಖರ್ ಅವರಿಗೆ ಸೂಚಕರಾಗಿ ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್‍ಶೆಟ್ಟರ್, ಆರ್.ಅಶೋಕ್, ಅರವಿಂದಲಿಂಬಾವಳಿ, ಯು.ಬಿ.ಬಣಾಕಾರ್, ಬಿ.ಎನ್.ವಿಜಯ್‍ಕುಮಾರ್, ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ, ಸಂಯ್‍ಪಾಟೀಲ್, ಅಶ್ವತ್ಥನಾರಾಯಣ್ ಅವರು ಸಹಿ ಹಾಕಿದರು. ಇನ್ನು ಕಾಂಗ್ರೆಸ್ ಪಕ್ಷದ ಪರವಾಗಿ ತಲಾ 10 ಶಾಸಕರು ಸೂಚಕರಾಗಿ ಸಹಿ ಹಾಕಿದರು.

ರಾಜ್ಯಸಭೆ ಚುನಾವಣೆ : ನಂಬರ್ ಗೇಮ್ ಶುರು, ಕುದುರೆ ವ್ಯಾಪಾರ ಜೋರು :  
ಬೆಂಗಳೂರು, ಮಾ.12-ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆಲ್ಲಲು, ಬಿಜೆಪಿ ಒಂದು ಸ್ಥಾನ ಗೆಲ್ಲಲು ಅಗತ್ಯ ಸಂಖ್ಯಾ ಬಲ ಹೊಂದಿದ್ದು, ಜೆಡಿಎಸ್ ಅಭ್ಯರ್ಥಿ ಕಣದಲ್ಲಿ ಮುಂದುವರೆದಿರುವುದರಿಂದ ಚುನಾವಣೆ ಅನಿವಾರ್ಯವಾಗಿರುವುದರಿಂದ ಸಂಖ್ಯಾಬಲದ ಹೊಂದಾಣಿಕೆಯ ಕುದುರೆ ವ್ಯಾಪಾರ ಜೋರಾಗಿದೆ. ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆ ಈಗ 217 ಆಗಿದ್ದು, ಶಾಸಕರಾದ ಪುಟ್ಟಣ್ಣಯ್ಯ, ಖಮರುಲ್ಲಾ ಇಸ್ಲಾಮ್, ಚಿಕ್ಕಮಾದು ಅವರ ನಿಧನ, ಆನಂದ್‍ಸಿಂಗ್, ಮಾನಪ್ಪ ವಜ್ಜಲ್, ಶಿವರಾಜ್‍ಪಾಟೀಲ್, ಹಾಲಾಡಿ ಶ್ರೀನಿವಾಸಶೆಟ್ಟಿ ಅವರ ರಾಜೀನಾಮೆಯಿಂದ ಒಟ್ಟು 7 ಶಾಸಕರ ಸ್ಥಾನಗಳು ತೆರವಾಗಿವೆ. ಉಳಿದ 217 ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಪ್ರತಿಯೊಂದು ರಾಜ್ಯಸಭೆ ಸ್ಥಾನ ಗೆಲ್ಲಲು 45 ಶಾಸಕರ ಅಗತ್ಯವಿದೆ.

ಕಾಂಗ್ರೆಸ್ 122, ಬಿಜೆಪಿ 43, ಜೆಡಿಎಸ್ 37 ಶಾಸಕರನ್ನು ಹೊಂದಿದೆ. ಬಿಜೆಪಿ 43 ಶಾಸಕರ ಜತೆ ಬಿಎಸ್‍ಆರ್ ಕಾಂಗ್ರೆಸ್‍ನ ಪಿ.ರಾಜೀವ್, ಸಿ.ಪಿ.ಯೋಗೇಶ್ವರ್ ಬಿಜೆಪಿ ಜತೆಯಲ್ಲಿರುವುದರಿಂದ ಒಟ್ಟು 45 ಮತಗಳಾಗಿದ್ದು, ಗೆಲುವಿಗೆ ಯಾವುದೇ ತೊಂದರೆ ಇಲ್ಲ. ಕಾಂಗ್ರೆಸ್‍ನ ಒಟ್ಟು 122 ಶಾಸಕರ ಜತೆಗೆ 7 ಮಂದಿ ಜೆಡಿಎಸ್ ಬಂಡಾಯ ಶಾಸಕರು ಜತೆಗಿದ್ದಾರೆ ಎಂದು ಹೇಳಲಾಗುತ್ತಿದೆ. ಉಳಿದಂತೆ ಸತೀಶ್ ಶೈಲ್, ಮಾಂಕಾಳವೈದ್ಯ, ಸುಬ್ಬಾರೆಡ್ಡಿ, ಕೋಲಾರದ ಮಂಜುನಾಥ್, ಕೆಜೆಪಿಯ ಬಿ.ಆರ್.ಪಾಟೀಲ್, ಬಿಎಸ್‍ಆರ್ ಕಾಂಗ್ರೆಸ್‍ನ ನಾಗೇಂದ್ರ ಕಾಂಗ್ರೆಸ್ ಜತೆಗಿದ್ದಾರೆ.

ಒಟ್ಟು 7 ಮಂದಿ ಪಕ್ಷೇತರರು ಸೇರಿ ಕಾಂಗ್ರೆಸ್‍ನ ಸಂಖ್ಯಾಬಲ 136ರಷ್ಟಿರುವುದರಿಂದ ಮೂರು ಸ್ಥಾನಗಳನ್ನು ಗೆಲ್ಲಲು ಯಾವುದೇ ಆತಂಕ ಇಲ್ಲ. ಆದರೂ ಮುಂಜಾಗ್ರತೆಯಾಗಿ ಒಂದೆರಡು ಹೆಚ್ಚುವರಿ ಮತಗಳನ್ನು ಹಾಕಿಸಲು ಕಾಂಗ್ರೆಸ್ ಪಕ್ಷ ಜೆಡಿಎಸ್ ಬುಟ್ಟಿಗೆ ಕೈ ಹಾಕಿದೆ. ಜೆಡಿಎಸ್ ಅಭ್ಯರ್ಥಿ ಫಾರೂಕ್ ಅಬ್ದುಲ್ಲಾ ಅವರನ್ನು ಗೆಲ್ಲಿಸಲು ಇನ್ನೂ 8 ಮತಗಳ ಅಗತ್ಯವಿರುವುದರಿಂದ ಜೆಡಿಎಸ್ ಪಕ್ಷೇತರ ಶಾಸಕರ ಮೇಲೆ ಕಣ್ಣಿಟ್ಟಿದ್ದು, ಮಾತುಕತೆಗಳು ನಡೆಯುತ್ತಿವೆ.

14ನೇ ವಿಧಾನಸಭೆಯ ಅಂತಿಮ ಹಂತದ ರಾಜ್ಯಸಭೆ ಚುನಾವಣೆ ಆಗಿರುವುದರಿಂದ ಎಲ್ಲಾ ಶಾಸಕರು ಹಲವಾರು ನಿರೀಕ್ಷೆಗಳೊಂದಿಗೆ ಚುನಾವಣೆ ಅಭ್ಯರ್ಥಿಗಳನ್ನು ಎದುರು ನೋಡುತ್ತಿದ್ದಾರೆ. ಫಾರೂಕ್ ಅಬ್ದುಲ್ಲಾ ಅವರು ನಾಮಪತ್ರವನ್ನು ಹಿಂಪಡೆಯದೇ ಹೋದರೆ ಚುನಾವಣೆ ಅನಿವಾರ್ಯವಾಗಲಿದೆ. ನಂತರದ ಬೆಳವಣಿಗೆಗಳಲ್ಲಿ ರಾಜಕೀಯ ಮೇಲಾಟಗಳು, ಕುದುರೆ ವ್ಯಾಪಾರಗಳು ಯಥೇಚ್ಚವಾಗಿ ನಡೆಯುವ ನಿರೀಕ್ಷೆ ಇದೆ.

Facebook Comments

Sri Raghav

Admin