ರಾಜ್ಯಸಭಾ ಚುನಾವಣೆಯಲ್ಲಿ ಅಕ್ರಮ : ಚುನಾವಣಾಧಿಕಾರಿಗಳಿಗೆ ಜೆಡಿಎಸ್ ದೂರು

ಈ ಸುದ್ದಿಯನ್ನು ಶೇರ್ ಮಾಡಿ

JDS-Elec

ಬೆಂಗಳೂರು, ಮಾ.23-ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ದ್ವೈವಾರ್ಷಿಕ ಚುನಾವಣೆ ಮತದಾನ ಸಂದರ್ಭದಲ್ಲಿ ಅಕ್ರಮ ಹಾಗೂ ಕಾನೂನು ಬಾಹಿರವಾದ ಘಟನೆಗಳು ನಡೆದಿದ್ದು, ಚುನಾವಣೆ ರದ್ದುಪಡಿಸಬೇಕೆಂದು ಜೆಡಿಎಸ್ ರಾಜ್ಯಸಭಾ ಚುನಾವಣಾಧಿಕಾರಿಗಳಿಗೆ ದೂರು ನೀಡಿದೆ. ರಾಜ್ಯಸಭೆ ಚುನಾವಣೆಗೆ ಮತದಾನ ಮಾಡುವ ವೇಳೆ ಕಾಂಗ್ರೆಸ್ ಪಕ್ಷದ ಶಾಸಕರಾದ ಬಾಬುರಾವ್ ಚಿಂಚನಸೂರ್ ಮತ್ತು ಕಾಗೋಡು ತಿಮ್ಮಪ್ಪ ಅವರು ಒಮ್ಮೆ ಚುನಾವಣಾಧಿಕಾರಿಗಳು ನೀಡಿದ ಮತ ಪತ್ರದಲ್ಲಿ ಮತ ಚಲಾಯಿಸಿದ ನಂತರವೂ ಮತ್ತೆ ಹೊಸದಾಗಿ ಮತಪತ್ರ ಪಡೆದು ಮತ ಚಲಾಯಿಸಿರುವುದು ಅಕ್ರಮವಾಗಿದೆ. ಇದು ಚುನಾವಣಾ ಪಾವಿತ್ರತೆಗೆ ಧಕ್ಕೆ ತಂದಂತಾಗಿದೆ ಎಂದು ಜೆಡಿಎಸ್ ಅಭ್ಯರ್ಥಿ ಬಿ.ಎಂ.ಫಾರೂಕ್ ದೂರು ಸಲ್ಲಿಸಿದ್ದಾರೆ.

ಕಾಗೋಡು ತಿಮ್ಮಪ್ಪ ಹಾಗೂ ಚಿಂಚನಸೂರ್ ಅವರು ಮತ ಚಲಾಯಿಸಿದ ನಂತರ ತಮ್ಮ ಪಕ್ಷದ ಏಜೆಂಟರಿಗೆ ತೋರಿಸಿದಾಗ ಅವರು ತಪ್ಪಾಗಿದೆ ಎಂದು ಹೇಳಿದ್ದಾರೆ. ಚುನಾವಣಾಧಿಕಾರಿಗಳು ಆ ಇಬ್ಬರು ಶಾಸಕರಿಗೆ ಹೊಸ ಮತಪತ್ರ ನೀಡಿ ಮತ್ತೊಮ್ಮೆ ಮತ ಚಲಾಯಿಸಲು ಅವಕಾಶ ನೀಡಿರುವುದು ಅಕ್ರಮವಾಗಿದ್ದು, ನ್ಯಾಯಸಮ್ಮತವಾಗಿ ನಡೆದಿಲ್ಲ. ಚುನಾವಣಾ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು ಹಾಗೂ ಇಬ್ಬರ ಮತಗಳನ್ನು ಗಣನೆಗೆ ತೆಗೆದುಕೊಳ್ಳದಂತೆ ದೂರು ನೀಡಿದ್ದಾರೆ.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ವೈ.ಎಸ್.ವಿ.ದತ್ತ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕ ಬಾಬುರಾವ್ ಚಿಂಚನಸೂರ್ ಅವರಿಗೆ ಎರಡು ಬಾರಿ ಮತ ಪತ್ರ ನೀಡಿ ಮತದಾನ ಮಾಡಲು ಅವಕಾಶ ನೀಡಿರುವುದು ಅಕ್ರಮವಾಗಿದೆ ಎಂದು ಆರೋಪಿಸಿದರು. ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಮಾಡುವಾಗ ಕಾಗೋಡು ತಿಮ್ಮಪ್ಪ, ಬಾಬು ಚಿಂಚನಸೂರ್ ರಹಸ್ಯವಾಗಿಯೇ ಮತ ಚಲಾಯಿಸಿ, ಕಾಂಗ್ರೆಸ್ ಪಕ್ಷದ ಏಜೆಂಟರಿಗೆ ಮತದಾನ ಮಾಡಿರುವುದನ್ನು ತೋರಿಸಿದ್ದಾರೆ. ತಪ್ಪಾಗಿ ಮತ ಚಲಾಯಿಸಿದ್ದೀರಿ ಎಂದು ಏಜೆಂಟರು ಹೇಳಿದ್ದಾರೆ. ಆಗ ಮತ್ತೆ ಹೊಸ ಮತಪತ್ರ ಪಡೆದು ಮತ ಚಲಾಯಿಸಿರುವುದು ಚುನಾವಣೆ ನಿಯಮಾವಳಿ 39(ಎಎ) ಪ್ರಕಾರ ಅಕ್ರಮವಾಗಿದೆ. ಹೀಗಾಗಿ ಚುನಾವಣೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಚುನಾವಣಾಧಿಕಾರಿಗಳಿಗೆ ನಮ್ಮ ಪಕ್ಷದ ವತಿಯಿಂದ ದೂರು ನೀಡಲಾಗಿದೆ ಎಂದು ಹೇಳಿದರು.

Facebook Comments

Sri Raghav

Admin