ರಾಜ್ಯಸಭೆಯಲ್ಲಿ ಜಿಎಸ್ಟಿ ಮಸೂದೆ ಪಾಸ್ : 2017ರ ಏಪ್ರಿಲ್ ನಿಂದ ಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

GST ಹೊಸದಿಲ್ಲಿ ಆ.04: “ಒಂದು ದೇಶ-ಒಂದೇ ರೀತಿಯ ತೆರಿಗೆ’ ಎಂಬ ಧ್ಯೇಯ ಹೊಂದಿರುವ “ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಸೂದೆ’ಗೆ ಕೊನೆಗೂ ರಾಜ್ಯಸಭೆಯ ಅನುಮೋದನೆ ಸಿಕ್ಕಿದೆ. ಬುಧವಾರ ಮಧ್ಯಾಹ್ನ ಮಂಡಿಸಲಾದ ಐತಿಹಾಸಿಕ ಮಸೂದೆ ಕುರಿತು ಸತತ 7 ಗಂಟೆಗಳ ಚರ್ಚೆ ನಡೆದು, ಬಳಿಕ ಮಸೂದೆಯನ್ನು ಮತಕ್ಕೆ ಹಾಕಿದಾಗ, ಮಸೂದೆ ಪರ 203 ಮತ್ತು ವಿರುದ್ಧವಾಗಿ 0 ಮತ ಚಲಾವಣೆಯಾದವು. ಈ ಮೂಲಕ ಮಸೂದೆಗೆ ಸದನವು ಬಹುಮತದ ಅನುಮೋದನೆ ನೀಡಿತು. ಮಸೂದೆಗೆ ಎಐಎಡಿಎಂಕೆ ಮಾತ್ರವೇ ವಿರೋಧ ವ್ಯಕ್ತಪಡಿಸಿತ್ತು. ಆದರೆ ಕಾಂಗ್ರೆಸ್ ಕೂಡಾ ಬೆಂಬಲ ವ್ಯಕ್ತಪಡಿಸಿದ್ದರಿಂದ ಯಾವುದೇ ಅಡ್ಡಿ ಇಲ್ಲದೆ ಮಸೂದೆ ಅಂಗೀಕಾರ ಪಡೆದುಕೊಂಡಿತು. ಇದರೊಂದಿಗೆ 16 ವರ್ಷಗಳ ಹಿಂದೆ ಕಂಡಿದ್ದ ಕನಸು ಸಾಕಾರ ರೂಪ ಕಂಡಿದ್ದು, ದೇಶದಲ್ಲಿ ಹೊಸ ತೆರಿಗೆ ವ್ಯವಸ್ಥೆ ಯುಗಾರಂಭವಾಗಿದೆ.

ಸಂವಿಧಾನಕ್ಕೆ 122ನೇ ತಿದ್ದುಪಡಿ ತರುವ ಈ ಮಸೂದೆಯನ್ನು ಈ ಹಿಂದೆಯೇ ಲೋಕಸಭೆ ಅಂಗೀಕರಿಸಿತ್ತಾದರೂ ಲೋಕಸಭೆಯ ಅಂಗೀಕಾರದ ಬಳಿಕ ಅದರಲ್ಲಿ ಮತ್ತಷ್ಟು ತಿದ್ದುಪಡಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮಸೂದೆಯನ್ನು ಗುರುವಾರ ಮತ್ತೂಮ್ಮೆ ಲೋಕಸಭೆಯಲ್ಲಿ ಮಂಡಿಸಿ, ಅಲ್ಲಿ ಒಪ್ಪಿಗೆ ಪಡೆಯಲಾಗುವುದು. ಬಳಿಕ ದೇಶದ ಒಟ್ಟು ರಾಜ್ಯಗಳ ಪೈಕಿ ಕನಿಷ್ಠ ಅರ್ಧದಷ್ಟು ರಾಜ್ಯಗಳು ವಿಧಾನಸಭೆಯಲ್ಲಿ ಈ ಮಸೂದೆಯನ್ನು ಅಂಗೀಕರಿಸ ಬೇಕು. ಈ ಪ್ರಕ್ರಿಯೆ ಮುಗಿದು, ಅದಕ್ಕೆ ರಾಷ್ಟ್ರಪತಿಗಳ ಸಹಿ ಬಿದ್ದ ಬಳಿಕ ದೇಶದಲ್ಲಿ ಸರಳೀಕೃತ ತೆರಿಗೆ ವ್ಯವಸ್ಥೆ ಎಂದೇ ಹೇಳಲಾದ ಜಿಎಸ್ಟಿ ಜಾರಿಗೆ ಬರಲಿದೆ.

ಜಿಎಸ್ಟಿ ಜಾರಿಗೆ ಪ್ರಮುಖ ಅಡ್ಡಿಯಾಗಿದ್ದ, ಜಿಎಸ್ಟಿ ದರದ ಕುರಿತು ಸರಕಾರದ ಯಾವುದೇ ಖಚಿತ ಮಾಹಿತಿ ನೀಡಿಲ್ಲವಾದರೂ, ಅದನ್ನು ವಿಪಕ್ಷಗಳ ಬೇಡಿಕೆಯಂತೆ ಆದಷ್ಟು ಕನಿಷ್ಠ ಪ್ರಮಾಣದಲ್ಲಿ ಇಡುವ ಭರವಸೆ ನೀಡಿತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಹಿತ ಬಹುತೇಕ ಎಲ್ಲ ಪಕ್ಷಗಳು ಮಸೂದೆಗೆ ಬೆಂಬಲ ವ್ಯಕ್ತಪಡಿಸಿದವು. ಸಹಕರಿಸಿದ ಎಲ್ಲರಿಗೂ ಮೋದಿ ಧನ್ಯವಾದ ಹೇಳಿದ್ದಾರೆ.

 ಏಪ್ರಿಲ್ನಿಂದ ಜಾರಿ? :

2017ರ ಏಪ್ರಿಲ್ನಿಂದ ಜಿಎಸ್ಟಿ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ ಅದಕ್ಕೂ ಮೊದಲು 29 ರಾಜ್ಯಗಳ ಪೈಕಿ ಕನಿಷ್ಠ 15 ರಾಜ್ಯಗಳು (ಶೇ 50ರಷ್ಟು) ಮಸೂದೆಗೆ ಅನುಮೋದನೆ ನೀಡಬೇಕಿದೆ.
ಜತೆಗೆ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ರಾಜ್ಯಗಳು ಸಜ್ಜಾಗಬೇಕಿವೆ. ವರಮಾನ ಹಂಚಿಕೆ ಮುಂತಾದ ವಿಚಾರಗಳ ಪೂರಕ ಮಸೂದೆಗಳು ಸಂಸತ್ತಿನ ಅಂಗೀಕಾರ ಪಡೆಯಬೇಕಿವೆ. ಹಾಗಾಗಿ ಏಪ್ರಿಲ್ ಒಂದರಿಂದಲೇ ಜಾರಿಗೆ ತರುವುದು ಕಷ್ಟ ಎಂಬ ಮಾತು ಕೇಳಿ ಬರುತ್ತಿದೆ. 2017ರ ಅಕ್ಟೋಬರ್ ನಂತರವೇ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ಬರಬಹುದು ಎನ್ನಲಾಗಿದೆ. * ತಯಾರಕರಿಗೆ ಲಾಭ, ಸೇವಾ ವಲಯಕ್ಕೆ ಹೊರೆ ಸಂಭವ ಜಿಎಸ್ಟಿ ಜಾರಿಗೆ ಬರುವುದರೊಂದಿಗೆ ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ, ಸೇವಾ ತೆರಿಗೆ, ಐಷಾರಾಮ ತೆರಿಗೆ ಮತ್ತು ಆಕ್ಟ್ರಾಯ್ ಸೇರಿದಂತೆ ಎಲ್ಲ ಪರೋಕ್ಷ ತೆರಿಗೆಗಳು ರದ್ದಾಗಲಿವೆ.

ಸರ್ಕಾರವು ಜಿಎಸ್ಟಿ ದರವನ್ನು ಶೇ 18ಕ್ಕೆ ನಿಗದಿಪಡಿಸಿದರೆ, ತಯಾರಕರು ಮತ್ತು ಗ್ರಾಹಕರು ಈ ಹೊಸ ತೆರಿಗೆ ವ್ಯವಸ್ಥೆಯಡಿ ಲಾಭ ಪಡೆಯಲಿದ್ದಾರೆ. ಅಬಕಾರಿ ಸುಂಕ, ವ್ಯಾಟ್ ಮತ್ತು ಕೇಂದ್ರ ಮಾರಾಟ ತೆರಿಗೆ ನೀಡಬೇಕಿರುವುದರಿಂದ ಗ್ರಾಹಕರು ಈಗ ವಸ್ತುವೊಂದರ ಉತ್ಪಾದನಾ ವೆಚ್ಚಕ್ಕಿಂತ ಅಂದಾಜು ಶೇ 25 ರಷ್ಟು ಅಧಿಕ ಬೆಲೆ ನೀಡುತ್ತಿದ್ದಾರೆ. ಜಿಎಸ್ಟಿ ಅನುಷ್ಠಾನಗೊಂಡರೆ ಗ್ರಾಹಕನ ಹೊರೆ ಕಡಿಮೆಯಾಗಲಿದೆ.
ಅಬಕಾರಿ, ವ್ಯಾಟ್ ಮತ್ತು ಸೇವಾ ತೆರಿಗೆ ಪಾವತಿಸುತ್ತಿರುವ ತಯಾರಕರು ಇನ್ನು ಮುಂದೆ ಏಕರೂಪದ ತೆರಿಗೆ ವ್ಯವಸ್ಥೆಯಡಿ ಬರಲಿದ್ದಾರೆ. ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಗ್ರಾಹಕರು ತೆರಿಗೆಯ ಜತೆಗೆ ಇತರ ಕೆಲವು ಸೆಸ್ಗಳನ್ನೂ ಪಾವತಿಸುತ್ತಾರೆ. ಆದರೆ ಇನ್ನು ಮುಂದೆ ತೆರಿಗೆಯ ಮೇಲೆ ಉಪಕರ ಇರುವುದಿಲ್ಲ.

ಕಚ್ಚಾ ಅಹಾರ ಪದಾರ್ಥ ಸೇರಿದಂತೆ ಕೆಲವು ಅಗತ್ಯ ವಸ್ತುಗಳ ತೆರಿಗೆ ದರ ಪ್ರಸ್ತುತ ಶೇ 6 ರಿಂದ ಶೇ 8ರಷ್ಟಿದೆ. ಜಿಎಸ್ಟಿ ದರವನ್ನು ಶೇ 18ಕ್ಕೆ ನಿಗದಿಪಡಿಸಿದರೆ ಎಲ್ಲ ಅಗತ್ಯ ಸಾಮಗ್ರಿಗಳ ಬೆಲೆ ಏರಿಕೆಯಾಗಲಿದೆ. ಪ್ರಸ್ತುತ ಕಡಿಮೆ ತೆರಿಗೆ ಹೊಂದಿರುವ ವಸ್ತುಗಳ ಬೆಲೆ ಏರಿಕೆಯಾಗುವ ಸಂಭವ ಇದೆ. ಉದಾಹರಣೆಗೆ ಸಣ್ಣ ಕಾರುಗಳಿಗೆ ಈಗ ಶೇ 8 ರಷ್ಟು ಅಬಕಾರಿ ಸುಂಕ ವಿಧಿಸಲಾಗುತ್ತದೆ. ಜೆಎಸ್ಟಿ ಜಾರಿಯಾದರೆ ಸಣ್ಣ ಕಾರುಗಳು ದುಬಾರಿಯಾಗಲಿವೆ. ಎಸ್ಯುವಿ, ಐಷಾರಾಮಿ ಕಾರುಗಳು ಮತ್ತು ಭಾರಿ ವಾಹನಗಳಿಗೆ ಈಗ ಶೇ 27 ರಿಂದ 30 ರಷ್ಟು ಅಬಕಾರಿ ಸುಂಕ ವಿಧಿಸಲಾಗುತ್ತಿದೆ. ಶೇ 18 ರಿಂದ ಶೇ 20 ರಷ್ಟು ದರದಲ್ಲಿ ಜಿಎಸ್ಟಿ ಜಾರಿಯಾದರೆ ಈ ವಾಹನಗಳ ಬೆಲೆ ಇಳಿಕೆಯಾಗಲಿವೆ.

ಆದರೆ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಅವರ ಸೂತ್ರವನ್ನು ಅಳವಡಿಸಿದರೆ, ಜಿಎಸ್ಟಿ ಬಳಿಕ ಐಷಾರಾಮಿ ಕಾರುಗಳು ದುಬಾರಿಯಾಗಲಿವೆ. ಏಕೆಂದರೆ ಅರವಿಂದ ಸುಬ್ರಮಣಿಯನ್ ಅವರು ಐಷಾರಾಮಿ ಕಾರುಗಳಿಗೆ ಶೇ 40 ರಷ್ಟು ತೆರಿಗೆಗೆ ಶಿಫಾರಸು ಮಾಡಿದ್ದಾರೆ. * ದುಬಾರಿ * ಪ್ರಸ್ತುತ ಶೇ 6 ರಿಂದ ಶೇ 8 ರಷ್ಟು ತೆರಿಗೆ ಇರುವ ಕಚ್ಚಾ ಆಹಾರ ಪದಾರ್ಥ

* ಸಣ್ಣ ಕಾರುಗಳು * ಪ್ರವಾಸ * ವಿಮಾನ ಪ್ರಯಾಣ * ಆಂಬುಲೆನ್ಸ್ ಸೇವೆ * ಸಾಂಸ್ಕೃತಿಕ ಚಟುವಟಿಕೆ * ಕೆಲವು ತೀರ್ಥಯಾತ್ರೆ * ಹೋಟೆಲ್ನಲ್ಲಿ ಸೇವಿಸುವ ಆಹಾರ

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin