ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ ಇವಿಎಂ ಹಗರಣ : ಕಲಾಪಕ್ಕೆ ವಿಘ್ನ
ನವದೆಹಲಿ,ಏ.5-ಆಡಳಿತಾರೂಢ ಬಿಜೆಪಿಗೆ ಅನುಕೂಲವಾಗುವಂತೆ ಮತ ಯಂತ್ರಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ವಿಷಯವು ಇಂದು ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿ ಕಲಾಪವನ್ನು ಮುಂದೂಡುವಂತೆ ಮಾಡಿತು. ವಿರೋಧ ಪಕ್ಷಗಳಾದ ಕಾಂಗ್ರೆಸ್, ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷಗಳು ಇಂದು ಬೆಳಗ್ಗೆ ಸದನದ ಕಲಾಪ ಆರಂಭವಾಗುತ್ತಿದ್ದಂತೆ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ವಿದ್ಯುನ್ಮಾನ ಮತ ಯಂತ್ರಗಳ(ಇವಿಎಂ)ನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಗದ್ದಲ ಎಬ್ಬಿಸಿದರು.
ಗದ್ದಲ ಜಾಸ್ತಿಯಾದಾಗ ಉಪಸಭಾಪತಿ ಪಿ.ಜೆ.ಕುರಿಯನ್ ಅವರು ಕಲಾಪವನ್ನು ಮುಂದೂಡಿದರು. ಪುನಃ ಕಲಾಪ ಸಮಾವೇಶಗೊಂಡಾಗಲು ಇದೇ ಗದ್ದಲವನ್ನು ವಿಪಕ್ಷಗಳು ಮುಂದುವರೆಸಿದವರು. ಆಗ ನಿಯಮ 267ರಡಿ ಕಲಾಪವನ್ನು ಅಮಾನತ್ತಿನಲ್ಲಿಟ್ಟು ಈ ವಿಷಯದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ವಿಪಕ್ಷ ನಾಯಕರು ಸರ್ಕಾರಕ್ಕೆ ನೋಟಿಸ್ ನೀಡಿದರು. ಈ ಸಂದರ್ಭ ಮಾತನಾಡಿದ ಬಿಎಸ್ಪಿ ನಾಯಕಿ ಮಾಯಾವತಿ, ಆಡಳಿತಾರೂಢ ಬಿಜೆಪಿಯನ್ನು ವಂಚಕ, ಮೋಸಗಾರ ಎಂದು ಆರೋಪಿಸಿದರು.
ಚುನಾವಣೆಯಲ್ಲಿ ಮತಯಂತ್ರಗಳನ್ನು ದುರ್ಬಳಕೆ ಮಾಡಿಕೊಂಡು ಎಲ್ಲಾ ಮತಗಳನ್ನು ತನ್ನ ಪರವಾಗಿ ಪರಿವರ್ತಿಸಿಕೊಂಡು ಬಿಜೆಪಿ ವಂಚನೆ ಮಾಡಿದೆ. ಇದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ದೊಡ್ಡ ಕಪ್ಪು ಚುಕ್ಕೆ ಎಂದು ಆರೋಪಿಸಿದರು. ದೇಶದ ಜನತೆಗೆ ಬಿಜೆಪಿ ಮಾಡಿರುವ ವಂಚನೆ ಅಕ್ಷಮ್ಯ ಎಂದು ಅವರು ಟೀಕಿಸಿದರು. ಈ ವೇಳೆ ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್ ಮತ್ತು ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಮಧ್ಯೆ ಮಾತಿನ ಜಟಾಪಟಿಯು ನಡೆಯಿತು.
ಕಾಂಗ್ರೆಸ್ ನಾಯಕ ದಿಗ್ವಿಜಯ್ ಸೇರಿದಂತೆ ಹಲವರು ಸರ್ಕಾರದ ವಿರುದ್ದ ಕಿಡಿಕಾರಿದರು.
ನಂತರ ಉಪಸಭಾಪತಿ ಪಿ.ಜೆ.ಕುರಿಯನ್ ಅವರು ಈ ವಿಷಯವು ಚುನಾವಣಾ ಆಯೋಗಕ್ಕೆ ಸಂಬಂಧಪಟ್ಟಿರುವುದರಿಂದ ಇದನ್ನು ಆಯೊಗದ ಬಳಿಗೆ ಕೊಂಡೊಯ್ಯಬೇಕು ಎಂದು ವಿರೋಧ ಪಕ್ಷಗಳ ನಾಯಕರಿಗೆ ಸಲಹೆ ನೀಡಿದರು. ಇದರಿಂದ ಕೆರಳಿದ ವಿಪಕ್ಷಗಳು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದಾಗ ಮತ್ತೆ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS