ರಾಜ್ಯಾದ್ಯಂತ ಡಬ್ಬಿಂಗ್ ವಿರುದ್ಧ ಭಾರೀ ಹೋರಾಟ, ಬೀದಿಗಿಳಿದ ಕನ್ನಡ ಸಂಘಟನೆಗಳು

ಈ ಸುದ್ದಿಯನ್ನು ಶೇರ್ ಮಾಡಿ

Vatal-Nagaraj--01

ಬೆಂಗಳೂರು,ಮಾ.3-ಡಬ್ಬಿಂಗ್ ವಿರುದ್ದ ರಾಜ್ಯಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದೆ.  ತಮಿಳಿನ ನಟ ಅಜಿತ್ ಹಾಗೂ ತ್ರಿಶಾ ಅಭಿನಯದ ಎನ್ನೈ ಅರಿಂದಾಳ್ ಎಂಬ ಚಿತ್ರ ಸತ್ಯದೇವ್ ಐಪಿಎಸ್ ಟೈಟಲ್ ಆಗಿ ಕನ್ನಡಕ್ಕೆ ನೇರವಾಗಿ ಡಬ್ಬಿಂಗ್ ಆಗಿ ಇಂದು ಬಿಡುಗಡೆಗೊಳಿಸಲು ಮುಂದಾಗಿದ್ದನ್ನು ಖಂಡಿಸಿ ನೂರಾರು ಕನ್ನಡಪರ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಚಿತ್ರ ಪ್ರದರ್ಶನವನ್ನು ರದ್ದುಗೊಳಿಸಿವೆ.   ಕಳೆದ ಎಂಟು ದಶಕಗಳಿಂದ ಡಬ್ಬಿಂಗ್ ವಿರುದ್ದ ಹೋರಾಟ ಮಾಡಿಕೊಂಡು ಬರಲಾಗಿತ್ತು. ಈಗ ಏಕಾಏಕಿ ಡಬ್ಬಿಂಗ್ ಚಿತ್ರ ಬಿಡುಗಡೆಗೆ ಮುಂದಾದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡಪರ ಸಂಘಟನೆಯ ಮುಖಂಡರು ವಾಣಿಜ್ಯ ಮಂಡಳಿ ಎದುರು ಪ್ರತಿಭಟನೆ ನಡೆಸಿ ಅವರ ಪ್ರತಿಕೃತಿ ದಹಿಸಿದರು.

ವಾಣಿಜ್ಯ ಮಂಡಳಿ ಎದುರು ಪ್ರತಿಭಟನೆ ನಡೆಸಿದ ಕನ್ನಡ ಒಕ್ಕೂಟದ ಪದಾಧಿಕಾರಿಗಳಾದ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಕನ್ನಡಸೇನೆಯ ಕೆ.ಆರ್.ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ , ಸಾರ್ವಜನಿಕ ಜಾಗೃತಿ ವೇದಿಕೆಯ ಮಂಜುನಾಥ್ ದೇವು, ಗಿರಿಗೌಡ, ಶಿವರಾಮೇಗೌಡ ಮುಂತಾದವರು ಡಬ್ಬಿಂಗ್ ಮಾಡಲು ಮುಂದಾಗುವ ಮೂಲಕ ಕನ್ನಡ ಸಿನಿಮೋದ್ಯಮದ ಕಾರ್ಮಿಕರನ್ನು ಬೀದಿಪಾಲು ಮಾಡಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.   ವಾಟಾಳ್ ನಾಗರಾಜ್ ಮಾತನಾಡಿ, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಡಬ್ಬಿಂಗ್ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ. ನಟರಾದ ಶಿವರಾಜ್‍ಕುಮಾರ್, ಸುದೀಪ್ ಸೇರಿದಂತೆ ಹಲವು ಹಿರಿಯ ನಟರು ಡಬ್ಬಿಂಗ್ ವಿರುದ್ದವಾಗಿ ಹೇಳಿಕೆ ಕೊಟ್ಟರೆ ಸಾಲದು ಬೀದಿಗಿಳಿದು ಹೋರಾಟ ಮಾಡಬೇಕು.

ಮಾರ್ಚ್ 6ರಂದು ಮಹತ್ವದ ಸಭೆ ನಡೆಸಿ, 11ರಂದು ಬೃಹತ್ ಹೋರಾಟ ಹಮ್ಮಿಕೊಂಡಿದ್ದೇವೆ. ಈ ಹೋರಾಟದಲ್ಲಿ ಚಲನಚಿತ್ರ ಕಲಾವಿದರು, ತಂತ್ರಜ್ಞರು, ನಿರ್ದೇಶಕರು, ನಿರ್ಮಾಪಕರು, ಕಾರ್ಮಿಕರು, ಕಿರುತೆರೆಯ ಕಲಾವಿದರು ಸೇರಿದಂತೆ ಎಲ್ಲರೂ ಪಾಲ್ಗೊಂಡು ಡಬ್ಬಿಂಗ್ ಭೂತವನ್ನು ಓಡಿಸಬೇಕು ಎಂದು ಕರೆ ನೀಡಿದರು.  ನಮ್ಮ ಒಕ್ಕೂಟದ ಮುಖಂಡರಾಗಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ.ರಾ.ಗೋವಿಂದ್ ಅವರು ಕೂಡ ಡಬ್ಬಿಂಗ್‍ಗೆ ವಿರೋಧವಾಗಿದ್ದಾರೆ. ಆದರೆ ಅವರು ಅಧ್ಯಕ್ಷ ಸ್ಥಾನದಲ್ಲಿರುವುದರಿಂದ ಹೋರಾಟದಲ್ಲಿ ಪಾಲ್ಗೊಂಡಿಲ್ಲ ಎಂದು ವಾಟಾಳ್ ತಿಳಿಸಿದರು.   ಅಗತ್ಯಬಿದ್ದರೆ ಅವರ ಸ್ಥಾನಕ್ಕೆ ರಾಜೀನಾಮೆ ನೀಡಿ ನಮ್ಮ ಹೋರಾಟದಲ್ಲಿ ಪಾಲ್ಗೊಳ್ಳಲು ಅವರು ಸಿದ್ದರಾಗಿದ್ದಾರೆ ಎಂದು ಹೇಳಿದರು.

ವರನಟ ಡಾ.ರಾಜ್‍ಕುಮಾರ್ ಡಬ್ಬಿಂಗ್ ವಿರೋಧಿಸಿ ಬೀದಿಗಿಳಿದು ಹೋರಾಟ ಮಾಡಿದ್ದರು. ಆದರೆ ಈಗ ಕೆಲವರು ಡಬ್ಬಿಂಗ್ ಚಿತ್ರಗಳನ್ನು ಬಿಡುಗಡೆ ಮಾಡಲು ಹೊರಟಿರುವುದು ನೋವು ತಂದಿದೆ. ಇದಕ್ಕೆ ಆರಂಭದಲ್ಲೇ ಅಂತ್ಯ ಹಾಡಬೇಕು. ಇಲ್ಲದಿದ್ದರೆ ಕನ್ನಡ ಚಿತ್ರೋದ್ಯಮ ಅವನತಿಯತ್ತ ಸಾಗುತ್ತದೆ ಎಂದರು.   ಮೈಸೂರು ಬ್ಯಾಂಕ್ ವೃತ್ತದಲ್ಲಿ ಕಸ್ತೂರಿ ಕನ್ನಡ ಜನಪರ ವೇದಿಕೆಯ ಮುಖಂಡರು ಪ್ರತಿಭಟನೆ ನಡೆಸಿದರು. ಅತ್ತ ಮೈಸೂರಿನಲ್ಲಿ ಡಬ್ಬಿಂಗ್ ವಿರೋಧಿಸಿ ಸ್ನೇಕ್ ಶ್ಯಾಮ್ ಒಬ್ಬಂಟಿಯಾಗಿ ಪ್ರತಿಭಟಿಸಿದರು.   ಹುಬ್ಬಳ್ಳಿ , ಚಿತ್ರದುರ್ಗ, ಮಂಗಳೂರು ಬಹುತೇಕ ಕಡೆ ಸತ್ಯದೇವ್ ಐಪಿಎಸ್ ಚಿತ್ರದ ಪೋ ಸ್ಟರ್ ಬ್ಯಾನರ್‍ಗಳನ್ನು ಹರಿದುಹಾಕಿ ಪ್ರತಿಭಟಿಸಲಾಯಿತು. ಯಾವುದೇ ಚಿತ್ರಮಂದಿರಗಳಲ್ಲಿ ಡಬ್ಬಿಂಗ್ ಚಿತ್ರ ಪ್ರದರ್ಶನವಾಗಲಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin