ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ‘ಅಕ್ರಮ-ಸಕ್ರಮ’ ಸುಪ್ರೀಂಕೋರ್ಟ್ ತಡೆಯಾಜ್ಞೆ
ನವದೆಹಲಿ, ಜ.13-ರಾಜ್ಯದ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಿಕೊಂಡಿರುವ ಕಟ್ಟಡಗಳನ್ನು ಕಾನೂನುಬದ್ಧಗೊಳಿಸುವ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಅಕ್ರಮ-ಸಕ್ರಮ ಯೋಜನೆಗೆ ಸುಪ್ರೀಂಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ. ಇದರಿಂದ ರಾಜ್ಯ ಸರ್ಕಾರದ ಉದ್ದೇಶಿತ ಯೋಜನೆಗೆ ಹಿನ್ನಡೆಯಾಗಿದೆ. ಕರ್ನಾಟಕ ಹೈಕೋರ್ಟ್ ಅಕ್ರಮ-ಸಕ್ರಮ ಯೋಜನೆಗೆ ನೀಡಿದ್ದ ತೀರ್ಪಿಗೆ ಮುಖ್ಯ ನ್ಯಾಯಮೂರ್ತಿ ಖೆಹರ್ಸಿಂಗ್ ನೇತೃತ್ವದ ಪೀಠ ತಡೆಯಾಜ್ಞೆ ನೀಡಿತ್ತು. ನ್ಯಾಯಾಲಯದ ತಡೆಯಾಜ್ಞೆ ಇರುವವರೆಗೂ ಅಕ್ರಮ-ಸಕ್ರಮ ಯೋಜನೆಯ ಯಾವುದೇ ಅರ್ಜಿಗಳನ್ನು ಸಾರ್ವಜನಿಕರಿಂದ ಯಾವುದೇ ರೀತಿಯ ಅರ್ಜಿಗಳನ್ನು ಸ್ವೀಕರಿಸಬಾರದೆಂದು ಸರ್ಕಾರಕ್ಕೆ ಸೂಚನೆ ಕೊಟ್ಟಿದೆ.
ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಬೆಂಗಳೂರು ಫೌಂಡೇಶನ್ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳ ಪೀಠ ತೀರ್ಪಿಗೆ ತಡೆಯಾಜ್ಞೆ ನೀಡಿ ಇಡೀ ಯೋಜನೆ ಕುರಿತು ಸುದೀರ್ಘ ವಿಚಾರಣೆ ನಡೆಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಅರ್ಜಿದಾರರ ಪರ ಖ್ಯಾತ ವಕೀಲ ಅಭಿಷೇಕ್ ಮನುಸಿಂಗ್ವಿ ವಾದ ಮಂಡಿಸಿ ಸರ್ಕಾರದ ಈ ಯೋಜನೆ ಅವೈಜ್ಞಾನಿಕವಾಗಿದೆ. ಸರ್ಕಾರಿ ಭೂಮಿಯಲ್ಲಿ ಕಟ್ಟಡಗಳನ್ನು ನಿರ್ಮಿಸಿಕೊಳ್ಳುವುದೇ ಕಾನೂನು ಬಾಹಿರ.
ಕೇವಲ ದಂಡ ಪಾವತಿಸಿ ತಕ್ಷಣ ಸಕ್ರಮಗೊಳಿಸುವುದು ಸರಿಯಲ್ಲ. ಇದು ಸುದೀರ್ಘ ವಿಚಾರಣೆ ನಡೆಯಬೇಕೆಂದು ವಾದ ಮಂಡಿಸಿದರು. ಸರ್ಕಾರದ ಪರ ಖ್ಯಾತ ವಕೀಲ ಬಸವ ಪ್ರಭುಪಾಟೀಲ್ ವಾದ ಮಂಡಿಸಿ ಸರ್ಕಾರದ ಈ ಯೋಜನೆ ಸದುದ್ದೇಶದಿಂದ ಕೂಡಿದೆ. ಈಗಾಗಲೇ ನಗರ ಪ್ರದೇಶಗಳಲ್ಲಿ ನಿರ್ಮಿಸಿಕೊಂಡಿರುವ ಕಟ್ಟಡಗಳನ್ನು ತೆರವುಗೊಳಿಸುವ ಬದಲು ಪ್ರದೇಶವಾರು ಶುಲ್ಕ ವಿಧಿಸಿ ಕಾನೂನು ಬದ್ಧಗೊಳಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು. ಆದರೆ ಇದನ್ನು ಒಪ್ಪದ ಅರ್ಜಿದಾರರ ಪರ ವಕೀಲರು ಇದರಲ್ಲಿ ಸಾಕಷ್ಟು ಲೋಪದೋಷಗಳಿರುವುದರಿಂದ ತಡೆಯಾಜ್ಞೆ ನೀಡುವಂತೆ ಕೋರಿದರು. ಎರಡೂ ಕಡೆ ವಾದ-ವಿವಾದ ಆಲಿಸಿದ ಖೆಹರ್ಸಿಂಗ್ ಪೀಠ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪಿಗೆ ತಡೆಯಾಜ್ಞೆ ನೀಡಿತು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS