ರಾಜ್ಯ ಸರ್ಕಾರಿ ನೌಕರರಿಗೊಂದು ಸೂಪರ್ ಸುದ್ದಿ..!
ಮಳವಳ್ಳಿ, ಜ.13- ಆರನೆ ವೇತನ ಆಯೋಗದ ವರದಿ ಬಂದ ನಂತರ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ್ ಮೂರ್ತಿ ಅವರ ನೇತೃತ್ವದ ಆಯೋಗ ಪರಿಶೀಲನೆ ನಡೆಸುತ್ತಿದೆ. ಈ ತಿಂಗಳ ಅಂತ್ಯದಲ್ಲಿ ವರದಿ ಸರ್ಕಾರದ ಕೈ ಸೇರುವ ಸಾಧ್ಯತೆ ಇದ್ದು, ಇದರ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ರಾಜ್ಯದ 5.45 ಲಕ್ಷ ಸರ್ಕಾರಿ ನೌಕರರಿಗೆ ಗಣನೀಯ ಪ್ರಮಾಣದಲ್ಲಿ ವೇತನ ಹೆಚ್ಚಳವಾಗಲಿದೆ. ಡಿ ಗ್ರೂಪ್ ನೌಕರರಿಗೆ ಕನಿಷ್ಠ ವೇತನ 16 ಸಾವಿರಕ್ಕೂ ಮೇಲ್ಪಟ್ಟು ಏರಿಕೆಯಾಗಲಿದ್ದು, ಸಿ ಗ್ರೂಪ್ ಸಿಬ್ಬಂದಿಗೆ 19 ಸಾವಿರ, ಬಿ ಗ್ರೂಪ್ ಅಧಿಕಾರಿಗಳಿಗೆ 39 ಸಾವಿರ, ಎ ಗ್ರೂಪ್ ಅಧಿಕಾರಿಗಳಿಗೆ 48 ಸಾವಿರ ಏರಿಕೆಯಾಗಲಿದೆ. ವಾರದಲ್ಲಿ ಐದು ದಿನ ಮಾತ್ರ ಕೆಲಸ ನಿಗದಿ ಮಾಡಿ ಶನಿವಾರ-ಭಾನುವಾರ ರಜೆ ಘೋಷಣೆಯಾಗಲಿದೆ ಎಂಬ ಮಾಹಿತಿಗಳಿದ್ದು, ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ಮುಖ್ಯಮಂತ್ರಿಯವರು ವರದಿ ಕೈ ಸೇರಿದ ಬಳಿಕವೇ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು.
ಮಹದಾಯಿ ವಿಷಯದಲ್ಲಿ ಆಶಾಭಾವನೆ:
ಮುಂದುವರೆದು ಮಾತನಾಡಿದ ಅವರು, ಮಹದಾಯಿ ವಿವಾದ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಕರ್ನಾಟಕದ ಪರವಾಗಿ ತೀರ್ಪು ಬರುವ ಆಶಾಭಾವನೆ ಇದೆ. ಕುಡಿಯುವ ನೀರಿನ ಯೋಜನೆಗೆ ಕಾನೂನಿನ ಸಮ್ಮತಿ ಸಿಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯಾದ್ಯಂತ ನಡೆದ ಸಾಧನಾ ಸಮಾವೇಶಕ್ಕೆ ಜನ ನಿರೀಕ್ಷೆಗೂ ಮೀರಿ ಸ್ಪಂದಿಸಿದರು. ಸಾವಿರಾರು ಜನ ಸ್ವಯಂಪ್ರೇರಿತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಮ್ಮ ಮೊದಲ ಹಂತದ ರಾಜ್ಯ ಪ್ರವಾಸ ಅತ್ಯಂತ ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಚುನಾವಣೆ ಸಮೀಪಿಸುತ್ತಿರುವುದರಿಂದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಯಾರೂ ಬೇಕಾದರೂ ಕಾಂಗ್ರೆಸ್ ಟಿಕೆಟ್ ಕೇಳಬಹುದು. ಆದರೆ ಕಾಂಗ್ರೆಸ್ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು. ಜೆಡಿಎಸ್ ತೊರೆದು ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ಏಳು ಮಂದಿ ಬಂಡಾಯ ಶಾಸಕರ ಸೇರ್ಪಡೆ ಕುರಿತು ದೆಹಲಿಗೆ ಹೋಗಿ ಚರ್ಚೆ ನಡೆಸಲಾಗುವುದು. ಅವರಿಗೆ ಇರುವ ಕ್ಷೇತ್ರದಲ್ಲೇ ಟಿಕೆಟ್ ನೀಡುವಂತೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.