ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ವಿಧಿಸಲು ತೀರ್ಮಾನ..?

ಈ ಸುದ್ದಿಯನ್ನು ಶೇರ್ ಮಾಡಿ

Toll--01

ಬೆಂಗಳೂರು, ಮಾ.17- ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಸಂಸ್ಥೆಗಳಿಂದ ಅಭಿವೃದ್ಧಿಪಡಿಸಿರುವ ಹಾಗೂ ಅಭಿವೃದ್ಧಿ ಪಡಿಸಲಾಗುತ್ತಿರುವ ರಾಜ್ಯ ಹೆದ್ದಾರಿಗಳಲ್ಲಿ ಬಳಕೆದಾರರ ಶುಲ್ಕ (ಟೋಲ್) ಸಂಗ್ರಹಣೆ ಮಾಡಲು ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡುವ ಸಾಧ್ಯತೆಗಳಿವೆ. ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಸಂಪುಟ ಸಭೆ ನಡೆಯಲಿದ್ದು, ಟೋಲ್ ವಿಧಿಸುವ ವಿಚಾರ ಚರ್ಚೆಗೆ ಬರಲಿದೆ.

ಬೆಂಗಳೂರು ನಗರದ ಮೇಯೋಹಾಲ್ ಬಳಿ ಇರುವ ದಕ್ಷಿಣ ಅಗ್ನಿಶಾಮಕ ಠಾಣೆ ಆವರಣದಲ್ಲಿ 06 ಬೇ. ಅಗ್ನಿ ಶಾಮಕ ಠಾಣೆ ಕಟ್ಟಡ ಹಾಗೂ ನಿರ್ಮಾಣ ಕೇಂದ್ರವನ್ನು 12.93 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಆಡಳಿತಾತ್ಮಕ ಒಪ್ಪಿಗೆ ನೀಡುವ ಸಾಧ್ಯತೆಗಳಿವೆ. ಕೋರಮಂಗಲದ ನೂರು ಅಡಿ ವರ್ತುಲ ರಸ್ತೆಯ ಜಂಕ್ಷನ್‍ನಿಂದ ಕೇಂದ್ರೀಯ ಸದನ ಜಂಕ್ಷನ್ ಹಾಗೂ ಈಜಿಪುರ ಮುಖ್ಯರಸ್ತೆವರೆಗೆ ಎಲಿವೇಟೆಡ್ ಕಾರಿಡಾರ್ ಕಾಮಗಾರಿಗಳಿಗಾಗಿ 204 ಕೋಟಿ ರೂ. ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆಯುವ ನಿರೀಕ್ಷೆಯಿದೆ.

ಧಾರವಾಡ ತಾಲೂಕಿನ ತಡಕೋಡ, ಬೋಕ್ಯಾಪುರ, ಗರಗ, ಹಳೇತೇಗೂರ, ಬೋಗೂರ ಮತ್ತು ನೀರಲಕಟ್ಟಿ ಗ್ರಾಮಗಳ ಕೆರೆಗಳಿಗೆ ತುಪ್ಪರಿ ಹಳ್ಳದಿಂದ ನೀರು ತುಂಬಿಸುವ ಯೋಜನೆಯ 22.50 ಕೋಟಿ ರೂ.ಗಳ ಕಾಮಗಾರಿಗೆ ಆಡಳಿತಾತ್ಮಕ ಒಪ್ಪಿಗೆ ತರುವ ಸಾಧ್ಯತೆಗಳಿವೆ.   ವಿವಿಧ ಬೆಳೆಗಳ ಗುಣಮಟ್ಟದ ಬಿತ್ತನೆ ಬೀಜ ಪೂರೈಸಲು ಸರ್ಕಾರಿ ಸ್ವಾಮ್ಯದ ಬೀಜೋತ್ಪಾದಕ ಸಂಸ್ಥೆಗಳೊಂದಿಗೆ ಮೂರು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಲು ಕೃಷಿ ಇಲಾಖೆಗೆ ಅನುಮೋದನೆ ನೀಡಲಾಗುತ್ತಿದೆ.   ಚಿಕ್ಕಬಳ್ಳಾಪುರ, ಉಡುಪಿ, ಧಾರವಾಡ, ಬೀದರ್ ಜಿಲ್ಲೆಗಳಲ್ಲಿ 79.71 ಕೋಟಿ ರೂ. ವೆಚ್ಚದಲ್ಲಿ ಭೂ ಸಮೃದ್ಧಿ ಯೋಜನೆ ಅನುಷ್ಠಾನಗೊಳಿಸಲು ತೀರ್ಮಾನಿಸುವ ಸಾಧ್ಯತೆಯಿದೆ.

ನೇಕಾರರ ವಸತಿ ಕಾರ್ಯಾಗಾರ ನಿರ್ಮಿಸಲು ನೀಡಲಾಗಿದ್ದ 33.41 ಕೋಟಿ ರೂ.ಗಳ ಸಾಲ ಮತ್ತು ಬಡ್ಡಿ ಮನ್ನಾ ಮಾಡುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತದೆ. ನಂಜನಗೂಡು-ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಮಾದರಿ ನೀತಿ ಸಂಹಿತೆ ಪಾಲಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.
ಬೆಂಗಳೂರು ನಗರದಲ್ಲಿ ಬಿ ಟ್ರ್ಯಾಕ್ ಕಾರ್ಯಯೋಜನೆಗೆ ಪ್ರಸಕ್ತ ಸಾಲಿನಲ್ಲಿ ಲಭ್ಯವಿರುವ ಅನುದಾನ ಬಳಸಿಕೊಳ್ಳುವುದು, ಮಂಡ್ಯ, ಹಾಸನ, ಶಿವಮೊಗ್ಗ, ರಾಯಚೂರು, ಬೀದರ್, ಬೆಳಗಾವಿ ವೈದ್ಯಕೀಯ ಕಾಲೇಜುಗಳ ಎಂಬಿಬಿಎಸ್ ಪ್ರವೇಶ ಮಿತಿಯನ್ನು 100 ರಿಂದ 150ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರದ ನೆರವಿನೊಂದಿಗೆ 354.91 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ನೆಫ್ರೋ ಯುರಾಜಲಿ ಸಂಸ್ಥೆಗೆ ವಿಸ್ತರಣಾ ಕಟ್ಟಡ ನಿರ್ಮಾಣ ಕಾಮಗಾರಿಗೆ 16 ಕೋಟಿ ರೂ. ಹಾಗೂ ಅಗತ್ಯ ಉಪಕರಣ, ಪೀಠೋಪಕರಣ ಖರೀದಿಗಾಗಿ 425 ಲಕ್ಷ ರೂ.ಗಳನ್ನು ನೀಡಲು ಆಡಳಿತಾತ್ಮಕ ಅನುಮೋದನೆ ದೊರೆಯುವ ಸಂಭವವಿದೆ.
ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ನೆಫ್ರೋ ಯುರಾಲಜಿ ಘಟಕವನ್ನು 11.71 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲು ಅನುಮೋದನೆ ದೊರೆಯುವ ಸಂಭವವಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin