ರಾಜ ಕಾಲುವೆ ಒತ್ತುವರಿ ಮಾಡಿ ಪ್ರತಿಷ್ಠಿತರು ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಿ

ಈ ಸುದ್ದಿಯನ್ನು ಶೇರ್ ಮಾಡಿ

NR-Ramesh

ಬೆಂಗಳೂರು, ಆ.30- ರಾಜ ಕಾಲುವೆ ಒತ್ತುವರಿ ಪ್ರಕರಣದಲ್ಲಿ ಬಿಲ್ಡರ್ ಮಾಫಿಯಾ ಮತ್ತು ಸ್ವಪಕ್ಷದ ಕೆಲ ಶಾಸಕರ ಒತ್ತಡಗಳಿಗೆ ಮಣಿದು ಮುಖ್ಯಮಂತ್ರಿಗಳು ಕಾನೂನು ಬಾಹಿರ ನಿರ್ಣಯಗಳನ್ನು ಕೈಗೊಂಡಿ ದ್ದಾರೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ದೂರಿದ್ದಾರೆ.  ಬೊಮ್ಮನಹಳ್ಳಿ ವಿಭಾಗದ ಆವನಿ ಶೃಂಗೇರಿ, ಬ್ಯಾಟರಾಯನಪುರ ವಿಭಾಗದ ದೊಡ್ಡಬೊಮ್ಮ ಸಂದ್ರ ಬಡಾವಣೆ ವ್ಯಾಪ್ತಿಯಲ್ಲಿ ಬಡ ಹಾಗೂ ಮಧ್ಯಮವರ್ಗದ ಜನರು ನಿರ್ಮಿಸಿಕೊಂಡಿದ್ದ ಮನೆಗಳನ್ನು ನೆಲಸಮಗೊಳಿಸಿದ್ದು, ಸುಮಾರು 120ಕ್ಕೂ ಹೆಚ್ಚು ಕುಟುಂಬಗಳನ್ನು ಬೀದಿ ಪಾಲು ಮಾಡಲಾಗಿದೆ ಎಂದಿದ್ದಾರೆ.

ವಂಚಕ ಲ್ಯಾಂಡ್ ಡೆವಲಪರ್‌ಗಳು ತಾವು ರಚಿಸಿರುವ ಬಡಾವಣೆಗಳಲ್ಲಿ ಬಡಪಾಯಿ ಜನರಿಗೆ ಸರಿಯಾದ ಮಾಹಿತಿ ನೀಡದೆ ನಿವೇಶನ ಗಳನ್ನು ಮಾರಾಟ ಮಾಡಿ ವಂಚಿಸಿದ್ದಾರೆ. ಇಂತಹ ಲ್ಯಾಂಡ್ ಡೆವಲಪರ್‌ಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳದೆ ಅಮಾಯಕ ಜನರನ್ನು ಬೀದಿ ಪಾಲು ಮಾಡುವ ತಾರತಮ್ಯ ಧೋರಣೆ ಅನುಸರಿಸುತ್ತಿದ್ದೀರಿ ಎಂದು ಎನ್.ಆರ್. ರಮೇಶ್ ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ.  ಆವನಿ ಶೃಂಗೇರಿ, ದೊಡ್ಡ ಬೊಮ್ಮಸಂದ್ರ ಬಡಾವಣೆಗಳಲ್ಲಿ ರಾಜಕಾಲುವೆ ಒತ್ತುವರಿ ತೆರವುಗೊಳಿಸುವ ಹೆಸರಿನಲ್ಲಿ ಬುಲ್ಡೋಜರ್ ನುಗ್ಗಿಸಿ ಮನೆ ಕೆಡವಿಸುವ ತಮ್ಮ ಆಡಳಿತವರ್ಗವು ಒರಾಯನ್ ಮಾಲ್, ಮಂತ್ರಿಮಾಲ್, ಎಸ್‌ಎಸ್ ಹಾಸ್ಪಿಟಲ್‌ನಂತಹ ಪ್ರಭಾವಿ ವ್ಯಕ್ತಿಗಳ ಕಟ್ಟಡಗಳನ್ನು ರಕ್ಷಿಸುತ್ತಿದ್ದೀರಿ. ಇವರುಗಳು ರಾಜಕಾಲುವೆ ಒತ್ತುವರಿ ಮಾಡಿರುವ ಸ್ಪಷ್ಟ ದಾಖಲೆಗಳಿದ್ದರೂ ತೆರವುಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಎನ್.ಆರ್.ರಮೇಶ್ ದೂರಿದ್ದಾರೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಕಣಿವೆ ಯಿಂದ ಕಣಿವೆಗೆ ಸಂಪರ್ಕ ಕಲ್ಪಿಸುವ ಪ್ರೈಮರಿ ಡ್ರೈನ್‌ಗಳು, ಕಣಿವೆಯಿಂದ ಕೆರೆಗೆ ಸಂಪರ್ಕ ಕಲ್ಪಿಸುವ ಸೆಕೆಂಡರಿ ಡ್ರೈನ್‌ಗಳನ್ನು ಒತ್ತುವರಿ ಮಾಡಿಕೊಂಡಿರುವ ಪ್ರತಿಷ್ಠಿತ ಬಿಲ್ಡರ್‌ಗಳ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ಅವರು ಒತ್ತುವರಿ ಮಾಡಿ ನಿರ್ಮಿಸಿರುವ ಬೃಹತ್ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಲಿಖಿತ ಸ್ಪಷ್ಟ ಆದೇಶವನ್ನು ಸಂಬಂಧಪಟ್ಟ ಅಕಾರಿಗಳಿಗೆ ನೀಡಬೇಕೆಂದು ಎನ್.ಆರ್.ರಮೇಶ್ ಪತ್ರದಲ್ಲಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin