ರಾತ್ರಿ ವೇಳೆ ಮನೆಯವರನ್ನು ಕಟ್ಟಿ ಹಾಕಿ ಭಾರೀ ಪ್ರಮಾಣದ ನಗನಾಣ್ಯ ಲೂಟಿ

ಈ ಸುದ್ದಿಯನ್ನು ಶೇರ್ ಮಾಡಿ

Rob-1
ಕೋಲಾರ, ಸೆ.25-
ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ಡಕಾಯಿತರ ಗುಂಪೊಂದು ಮನೆಯ ಯಜಮಾನನನ್ನು ಥಳಿಸಿ ಮನೆ ಮಂದಿಯನ್ನೆಲ್ಲ ಕಟ್ಟಿ ಹಾಕಿ ಭಾರೀ ಪ್ರಮಾಣದ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಅಕ್ಕಮ್ಮನದಿಣ್ಣೆ ಗ್ರಾಮದಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.  ರಾತ್ರಿ ಸುಮಾರು 12.30ರ ಸುಮಾರಿನಲ್ಲಿ ರಾಮಕೃಷ್ಣಪ್ಪ ಎಂಬುವರ ಮನೆ ಮುಂದೆ ಕೆಲವರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಆಗ ರಾಮಕೃಷ್ಣಪ್ಪ ಕಿಟಕಿಯಲ್ಲಿ ಇದನ್ನು ನೋಡಿ ನೀವು ಯಾರು ಎಂದು ಪ್ರಶ್ನಿಸಿದರು.

Rob-2

ಕುಡಿಯಲು ನೀರು ಬೇಕಿತ್ತು ಎಂದು ಕಳ್ಳರು ಕೇಳಿದ್ದಾರೆ. ರಾಮಕೃಷ್ಣಪ್ಪ ನೀರು ಕೊಡಲು ಬಾಗಿಲು ತೆರೆದಿದ್ದಾರೆ. ಬಾಗಿಲು ತೆರೆಯುತ್ತಿದ್ದಂತೆ ಒಳಕ್ಕೆ ನುಗ್ಗಿದ ಸುಮಾರು 8-10 ಮಂದಿ ಇದ್ದ ಗುಂಪು ರಾಮಕೃಷ್ಣಪ್ಪನನ್ನು ಬಲವಾಗಿ ಹೊಡೆದಿದ್ದಾರೆ. ಆಗ ನಡುರಾತ್ರಿ 1 ಗಂಟೆ ಸಮಯ. ಅವರು ಕೆಳಗೆ ಬೀಳುತ್ತಿದ್ದಂತೆ ಪತ್ನಿ ಪ್ರಮೀಳಾ ಮತ್ತು ಸೊಸೆ ಶ್ವೇತಾ ಎಲ್ಲರನ್ನು ಕಟ್ಟಿ ಹಾಕಿ ಮನೆಯಲ್ಲಿದ್ದ ಸುಮಾರು 450 ಗ್ರಾಂ ಚಿನ್ನಾಭರಣ ಹಾಗೂ 5 ಲಕ್ಷ ರೂ. ನಗದನ್ನು ದೋಚಿದ್ದಾರೆ.  ಇದಾದ ನಂತರ ಇನ್ನೊಂದು ಮನೆಯಲ್ಲೂ ಕಳವು ಮಾಡಲು ಯತ್ನಿಸುತ್ತಿರುವಾಗಲೇ ರಾಮಕೃಷ್ಣಪ್ಪ ಅವರು ಎಚ್ಚರಗೊಂಡು ಕೂಗಾಡಿದ್ದಾರೆ. ಆಗ ಜನ ನೆರೆದಿದ್ದರಿಂದ ದರೋಡೆಕೋರರು ಅಲ್ಲಿಂದ ಕಾಲ್ತಿಕ್ಕಿತ್ತಿದ್ದಾರೆ. ಸುಮಾರು 8ರಿಂದ 10 ಜನ ಇದ್ದರು ಎಂದು ರಾಮಕೃಷ್ಣಪ್ಪ (ನಲ್ಲಪ್ಪ) ತಿಳಿಸಿದ್ದಾರೆ.

Rob-3

ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಗೋಪಿನಾಥ್, ಡಿವೈಎಸ್ಪಿ ಪುಟ್ಟ ಮಾದಯ್ಯ, ವೃತ್ತ ನಿರೀಕ್ಷಕ ದಿನೇಶ್, ಬಂಗಾರಪೇಟೆ ಠಾಣೆ ಅಧೀಕ್ಷಕ ರವಿಕುಮಾರ್ ಮತ್ತು ತಂಡದವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಬಂಗಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಮುಂದಿನ ಕ್ರಮ ಕೈಗೊಳ್ಳಲಾಗುವುದು. ಶೀಘ್ರವೇ ಖದೀಮರನ್ನು ಪತ್ತೆಹಚ್ಚಿ ಬಂಧಿಸಲಾಗುವುದು ಎಂದು ವರಿಷ್ಠಾಧಿಕಾರಿ ದಿವ್ಯ ಗೋಪಿನಾಥ್ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin