ರಾತ್ರೋರಾತ್ರಿ ‘ಮಾಸ್ತಿಗುಡಿ’ ನಿರ್ಮಾಪಕ ಸುಂದರ್ ಪಿ.ಗೌಡ ಬಂಧನ ಸೃಷಿಸಿದೆ ಅನುಮಾನ..!

ಈ ಸುದ್ದಿಯನ್ನು ಶೇರ್ ಮಾಡಿ

Mastigudi-shoot

ಬೆಂಗಳೂರು, ನ.9-ಮಾಸ್ತಿ ಗುಡಿ  ಸಿನಿಮಾದ ಚಿತ್ರೀಕರಣದ ವೇಳೆ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಹೆಲಿಕಾಪ್ಟರ್‍ನಿಂದ ಜಿಗಿದು ಪ್ರಾಣ ಕಳೆದುಕೊಂಡ ಇಬ್ಬರು ಖಳನಟರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಸುಂದರ್ ಪಿ.ಗೌಡ ಅವರನ್ನು ಬಂಧಿಸಿರುವ ಪೊಲೀಸರ ಕ್ರಮ ಸಾರ್ವಜನಿಕ ವಲಯದಲ್ಲಿ ಅನೇಕ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಘಟನೆ ನಡೆದ ಬಳಿಕ ತಾವರೆಕೆರೆ ಠಾಣೆ ಪೊಲೀಸರು ಮಾಸ್ತಿ ಗುಡಿ ಚಿತ್ರತಂಡದ ವಿರುದ್ಧ ಐಪಿಸಿ ಸೆಕ್ಷನ್ 304 (ಉದ್ದೇಶಪೂರ್ವಕವಲ್ಲದ ಹತ್ಯೆ) ರಡಿ  ಪ್ರಕರಣ ದಾಖಲಿಸಿದ್ದರು. ಈ ನಿಯಮದ ಪ್ರಕಾರವೇ ಮಾಸ್ತಿ ಗುಡಿ ಚಿತ್ರದ ನಿರ್ದೇಶಕ ನಾಗಶೇಖರ್, ಸಹ ನಿರ್ದೇಶಕ ಸಿದ್ದು, ಸಾಹಸ ನಿರ್ದೇಶಕ ರವಿವರ್ಮಾ, ಯುನಿಟ್ ಮ್ಯಾನೇಜರ್ ಎಸ್.ಭರತ್ ಹಾಗೂ ಇತರರ ವಿರುದ್ಧ ಐಪಿಸಿ ಸೆಕ್ಷನ್  304, 188, ಸಹ ಕಲಂ 34ರಡಿ ದೂರು ದಾಖಲಾಗಿತ್ತು.

ಆದರೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ನಿರ್ಮಾಪಕ ಸುಂದರ್ ಪಿ.ಗೌಡ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಮೂಲಭೂತ ಪ್ರಶ್ನೆಯೆಂದರೆ ಪ್ರಕರಣದ ಪ್ರಮುಖ ಆರೋಪಿಗಳಾದ ನಿರ್ದೇಶಕ ನಾಗಶೇಖರ್, ಸಹ ನಿರ್ದೇಶಕ ಸಿದ್ದು, ಸಾಹಸ ನಿರ್ದೇಶಕ ರವಿವರ್ಮಾ, ಯುನಿಟ್ ಮ್ಯಾನೇಜರ್ ಎಸ್.ಭರತ್ ಹಾಗೂ ಸ್ಟಂಟ್ ಮಾಸ್ಟರ್‍ಗಳನ್ನು ಬಂಧಿಸದೆ ಕೇವಲ ನಿರ್ಮಾಪಕರನ್ನು ಮಾತ್ರ ಬಂಧಿಸಿರುವುದು ಏಕೆ ಎಂಬ ಯಕ್ಷಪ್ರಶ್ನೆ ಎದುರಾಗಿದೆ. ಘಟನೆ ನಡೆದು ಎರಡು ದಿನ ಕಳೆದರೂ ಈವರೆಗೂ ನಿರ್ದೇಶಕ ಸೇರಿದಂತೆ ಇತರರು ಎಲ್ಲಿ ಇದ್ದಾರೆ ಎಂಬುದು ಯಾರೊಬ್ಬರಿಗೂ ತಿಳಿದಿಲ್ಲ.

ತಲೆ ಮರೆಸಿಕೊಂಡರೇ?:

ಸೋಮವಾರ ಮಧ್ಯಾಹ್ನ ತಿಪ್ಪಗೊಂಡನಹಳ್ಳಿ ಜಲಾಶಯ ಬಳಿ  ಚಿತ್ರೀಕರಣದ ನಡೆಯುತ್ತಿತ್ತು. ಈ ವೇಳೆ ನಟರಾದ ಅನಿಲ್, ಉದಯ್, ನಾಯಕ ನಟ ವಿಜಯ್ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಚಿತ್ರೀಕರಿಸಲು ಹೆಲಿಕಾಪ್ಟರ್‍ನಿಂದ ಜಿಗಿಯುವ ದೃಶ್ಯ ಚಿತ್ರೀಕರಿಸಬೇಕಾಗಿತ್ತು. ಅನಿಲ್ ಮತ್ತು ಉದಯ್ ನೀರಿನ ಧುಮುಕಿದ ನಂತರ ನೀರಿನಲ್ಲಿ ಮುಳುಗಿ ಈವರೆಗೂ ಮೃತ ದೇಹಗಳು ಪತ್ತೆಯಾಗಿಲ್ಲ. ವಿಜಯ್ ಮಾತ್ರ ಹರಸಾಹಸಪಟ್ಟು ಪ್ರಾಣಾಪಾಯದಿಂದ ಪಾರಾದರು. ಈ ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿ ಚಿತ್ರ ತಂಡದ ನಿರ್ದೇಶಕರು, ನಿರ್ಮಾಪಕರು, ಸ್ಟಂಟ್ ಮಾಸ್ಟರ್, ಸಿಬ್ಬಂದಿ ಇದ್ದಕ್ಕಿದ್ದಂತೆ ಎಲ್ಲರೂ ನಾಪತ್ತೆಯಾಗಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ಪೊಲೀಸರಿಂದ ರಕ್ಷಣೆ?

ಮೂಲಗಳ ಪ್ರಕಾರ ಸುಂದರ್ ಪಿ.ಗೌಡ ಹೊರತುಪಡಿಸಿ ಉಳಿದ ಚಿತ್ರ ತಂಡಕ್ಕೆ ಪೊಲೀಸರಿಂದಲೇ ರಕ್ಷಣೆ ನೀಡಲಾಗುತ್ತಿದೆ ಎಂಬ ಗುಮಾನಿ ಕೇಳಿ ಬರುತ್ತಿದೆ. ಸರ್ಕಾರದ ಮಟ್ಟದಲ್ಲಿ ಪ್ರಭಾವ ಬೀರುವ ಇವರನ್ನು ಪೊಲೀಸರೇ ರಕ್ಷಣೆ ಮಾಡಲು ಮುಂದಾಗಿದ್ದಾರೆಯೇ  ಎಂಬ ಸಂಶಯ ವ್ಯಕ್ತವಾಗುತ್ತಿದೆ. ಏಕೆಂದರೆ ಘಟನೆ ನಡೆದು ಸರಿಸುಮಾರು 48 ಗಂಟೆ ಕಳೆದರೂ ಈ ತಂಡ ಎಲ್ಲಿದೆ ಎಂಬುದನ್ನು  ಪೊಲೀಸರು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ನಿರ್ದೇಶಕರನ್ನೇ ಮೊದಲ ಆರೋಪಿಯನ್ನಾಗಿಸಿ ಪೊಲೀಸರು ಬಂಧಿಸಬೇಕಿತ್ತು. ಕೇವಲ ನಿರ್ಮಾಪಕ  ಸುಂದರ್ ಪಿ.ಗೌಡ ಅವರನ್ನು ಬಂಧಿಸಿ ಉಳಿದವರನ್ನು  ಮಾತ್ರ ಏಕೆ ಬಂಧಿಸಿಲ್ಲ ಎಂಬ ಮಾತು ಚಿತ್ರರಂಗದಿಂದಲೇ ಕೇಳಿಬರುತ್ತಿದೆ.

ತಾವರೆಕೆರೆ ಪೊಲೀಸರು ಮಂಗಳವಾರ ಬೆಳಗ್ಗೆ ಪ್ರಕರಣ ದಾಖಲಿಸುತ್ತಿದ್ದಂತೆ ಚಿತ್ರತಂಡವನ್ನು ವಶಕ್ಕೆ ತೆಗೆದುಕೊಳ್ಳಬೇಕಿತ್ತು. ಒಬ್ಬ ನಿರ್ಮಾಪಕ ಚಿತ್ರಕ್ಕೆ ಹಣ ಹೂಡಿಕೆ ಮಾಡಬಹುದೇ ಹೊರತು ಉಳಿದೆಲ್ಲ ಕ್ಯಾಪ್ಟನ್ ಆಫ್ ದಿ ಶಿಪ್ ಎಂದೇ ಗುರುತಿಸಿಕೊಂಡಿರುವ  ಚಿತ್ರದ ನಿರ್ದೇಶಕರದ್ದೇ ಆಗಿರುತ್ತದೆ. ಅಲ್ಲದೆ, ಕೆಲವು  ಅಪಾಯಕಾರಿ ಸಾಹಸಗಳನ್ನು ಮಾಡುವಾಗ ಸಾಹಸ ನಿರ್ದೇಶಕನೂ ಜವಾಬ್ದಾರಿಯಾಗುತ್ತಾನೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಕೇವಲ ಸುಂದರ್ ಪಿ.ಗೌಡ ಅವರನ್ನು ಮಾತ್ರ ಬಂಧಿಸಿ ಉಳಿದವರನ್ನು ಏಕೆ ಬಂಧಿಸುತ್ತಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ತನಿಖೆಗೆ ಸಹಕರಿಸಿದ್ದರು : 

ಇನ್ನು ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಸುಂದರ್ ಪಿ.ಗೌಡ ಪೊಲೀಸರ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಿದ್ದರು. ತಾವರೆಕೆರೆ ಪೊಲೀಸರು ವಿಚಾರಣೆಗೆ ಕರೆದಾಗ ಎಲ್ಲಾ ರೀತಿಯ ಸಹಕಾರ  ನೀಡುವುದಾಗಿ ಹೇಳಿದ್ದರು. ವಿಚಾರಣೆಗೆಂದು ಕರೆದ ಪೊಲೀಸರು ಯಾವುದೇ ಮಾಹಿತಿ ಪಡೆಯದೆ ರಹಸ್ಯ ಸ್ಥಳಕ್ಕೆ ಕರೆದೊಯ್ದು ರಾತ್ರಿ ಇದ್ದಕ್ಕಿದ್ದಂತೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದು ಪೊಲೀಸರ ಕ್ರಮವನ್ನೇ ಪ್ರಶ್ನಿಸುವಂತಾಗಿದೆ. ಒಟ್ಟಿನಲ್ಲಿ ಮಾಸ್ತಿ ಗುಡಿ ಚಿತ್ರದ ಚಿತ್ರೀಕರಣದ ನಂತರ ನಡೆದ ಘಟನೆಗಳು  ಪೊಲೀಸರು ನಡೆದುಕೊಳ್ಳುತ್ತಿರುವ ನಡವಳಿಕೆಗಳು ಸಾರ್ವಜನಿಕ ವಲಯದಲ್ಲಿ ಸಂಶಯ ಹುಟ್ಟಿಸಿರುವುದಂತೂ ದಿಟ.

► Follow us on –  Facebook / Twitter  / Google+

Facebook Comments

Sri Raghav

Admin