ರಾಮಕೃಷ್ಣ ಹೆಗಡೆಯರವರನ್ನು ನೆನೆದು ಕಣ್ಣೀರಿಟ್ಟ ರಮೇಶ್ ಜಿಗಜಿಣಗಿ

ಈ ಸುದ್ದಿಯನ್ನು ಶೇರ್ ಮಾಡಿ

jigajigani
ಬೆಂಗಳೂರು,ಆ.29- ಜಾತಿ ಹಾಗೂ ಧರ್ಮದ ಭೇದವಿಲ್ಲದೆ ಎಲ್ಲಾ ಸಮುದಾಯಗಳಲ್ಲೂ ಹೊಸ ನಾಯಕತ್ವವನ್ನು ಬೆಳೆಸಿದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಜನ್ಮ ದಿನೋತ್ಸವದಲ್ಲಿ ಕೇಂದ್ರದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವ ರಮೇಶ್ ಚಂದಪ್ಪ ಜಿಗಜಿಣಗಿ ಭಾವುಕರಾಗಿ ಕಣ್ಣೀರಿಟ್ಟರು.  ನಗರದ ಭಾರತೀಯ ವಿದ್ಯಾಭವನದಲ್ಲಿ ರಾಷ್ಟ್ರೀಯ ನವ ನಿರ್ಮಾಣ ವೇದಿಕೆಯಿಂದ ಹೆಗಡೆ ಅವರ 90 ನೇ ಜನ್ಮ ದಿನೋತ್ಸವ ಕಾರ್ಯಕ್ರಮ ಈ ಘಟನೆಗೆ ಸಾಕ್ಷಿಯಾಯಿತು.  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಲು ನಿಂತ ರಮೇಶ್ ಜಿಗಜಿಣಗಿ ಅವರು, ಹೆಗಡೆ ಅವರನ್ನು ನೆನೆಸಿ ಕೊಂಡರೆ ನನ್ನ ಮನಸ್ಸು ನೋಯುತ್ತದೆ. ಹೀಗಾಗಿ ಅವರ ಹೆಸರಿನಲ್ಲಿ ನಡೆಯುವ ಯಾವ ಕಾರ್ಯಕ್ರಮದ್ಲಲೂ ನಾನು ಭಾಗಹಿಸುವುದಿಲ್ಲ. ಇಂದು ತೀವ್ರ ಒತ್ತಡಕ್ಕೆ ಮಣಿದು ಬಂದಿದ್ದೇನೆ. ದಿನ ಬೆಳಗ್ಗೆ ಹೇಳುವಾಗ ನಾನು ಮನೆ ದೇವರು, ತಂದೆ-ತಾಯಿಗಳನ್ನು ನೆನೆಯುವ ವೇಳೆ ರಾಮಕೃಷ್ಣಹೆಗಡೆ ಅವರನ್ನು ನೆನಪಿಸಿಕೊಳ್ಳುತ್ತೇನೆ ಎಂದರು.
ರಾಮಕೃಷ್ಣಹೆಗಡೆ ಅವರ ಜತೆ ಸಾವಿರಾರು ಅನುಭವ ಗಳಿವೆ. ಜಾತಿ, ಧರ್ಮವೆಂಬ ಭೇದವಿಲ್ಲದೆ ಎಲ್ಲರನ್ನೂ ಬೆಳೆಸಿದರು. ಒಂದು ವೇಳೆ ಜಾತಿವಾದಿಯಾಗಿದ್ದರೆ ನನಂಥ ದಲಿತ ಅಮಾಯಕ ನಾಯಕರು ಈ ಮಟ್ಟಕ್ಕೆ ಬೆಳೆಯಲು ಆಗುತ್ತಿರಲಿಲ್ಲ ಎಂದು ತಿಳಿಸಿದರು.

1978ರಲ್ಲಿ ಹೆಗಡೆ ಅವರ ಜತೆ ಗುರುತಿಸಿಕೊಳ್ಳಲು 10-15ಜನರೂ ಮುಂದೆ ಬರುತ್ತಿರಲಿಲ್ಲ. ಅಂತಹ ಕಷ್ಟ ಕಾಲದಲ್ಲಿ ರಾಜ್ಯ ಸುತ್ತಿ ಪಕ್ಷ ಕಟ್ಟಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಕಾಂಗ್ರೆಸೇತರ ಸರ್ಕಾರವನ್ನು ಅಕಾರಕ್ಕೆ ತಂದರು. ಜನರಿಗೆ ಏನು ಮಾಡಿದರೋ ಗೊತ್ತಿಲ್ಲ. ನನಗಂತೂ ಬಹಳ ಉಪಕಾರ ಮಾಡಿದ್ದಾರೆ. ನನಗೆ ಒಳ್ಳೆಯ ಮಾತುಗಳನ್ನಾಡಿ ಬುದ್ದಿವಾದ ಹೇಳಿದ್ದಾರೆ. ಯಾವುದೋ ಅಪವಾದಕ್ಕೆ ಸಿಲುಕಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವ ಸಂದರ್ಭ ಬಂದಾಗ ಅವರ ಜತೆ ಯಾರೂ ಇರಲಿಲ್ಲ. ನಾನೂ, ರಘುಪತಿ ಹಾಗೂ ಕಾರಿನ ಚಾಲಕ ಜಾನಕಿ ಮಾತ್ರ ಉಳಿದಿದ್ದೆವು.  ಇಡೀ ದಿನ ಅವರ ಜತೆ ನಾನು ಕಾರಿನಲ್ಲಿ ಸುತ್ತಾಡಿ ಸಂಜೆ ರಾಜೀನಾಮೆ ನೀಡಲು ರಾಜಭವನಕ್ಕೆ ಹೋಗುತ್ತಿದ್ದಾಗ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆ ಬಳಿ ಸಮಯ ನೋಡಿಕೊಂಡರು. ಇನ್ನು 20 ನಿಮಿಷ ಕಾಲಾವಕಾಶವಿದೆ. ಹಾಗಾಗಿ ಸ್ಟೇಡಿಯಂ ಒಳಗೆ ನಡಿ ಎಂದು ಕಾರಿನ ಚಾಲಕನಿಗೆ ಆದೇಶ ನೀಡಿದರು.

ಅಲ್ಲಿ ಹೋಗಿ ನೋಡಿದಾಗ ಜಾನಕಿ ಅವರನ್ನು ಹೊರಗೆ ಕಳುಹಿಸಿ ನೀನು ಯಾವತ್ತೂ ಬದಲಾಗಬೇಡ, ಜನರ ನಡುವೆ ಇದೇ ರೀತಿ ಬೆರೆಯುವುದನ್ನು ಮುಂದುವರೆಸು. ರಾಜಕೀಯದಲ್ಲಿ ಏನಾದರೂ ಸಾಧನೆ ಮಾಡುವುದನ್ನು ನಾನು ನೋಡಬೇಕು ಎಂದು ಅತ್ಯಂತ ಪ್ರೀತಿಯಿಂದ ನನಗೆ ಹೇಳಿದರು. ನನ್ನ ತಂದೆಯೂ ಕೂಡ ಇಂತಹ ಮಾತುಗಳನ್ನು ಹಾಡಲಿಲ್ಲ ಎನ್ನುತ್ತಿಂದ್ದಂತೆ ರಮೇಶ್ ಜಗಜಿಣಗಿ ಭಾವುಕರಾದರು. ಮುಂದೆ ಮಾತನಾಡಲ್ಲಾಗದೆ ಕ್ಷಮೆ ಕೇಳಿ ವಾಪಸ್ ಹೋಗಿ ಕುರ್ಚಿಯಲ್ಲಿ ಹೋಗಿ ಕುಳಿತರು. ಆಗಲೂ ಅವರ ಕಣ್ಣಲ್ಲಿ ನೀರು ಬರುತ್ತಿತ್ತು. ಪಕ್ಕದಲ್ಲಿದ್ದ ಎಂ.ಸಿ.ನಾಣಯ್ಯ ಅವರು ನೀರು ಕೊಟ್ಟು ಸಂತೈಸಿದರು. ಇನ್ನೊಂದು ಬದಿಯಲ್ಲಿ ಕುಳಿತಿದ್ದ ರಾಮಕೃಷ್ಣ ಅವರ ಪುತ್ರಿ ಮಮತಾ ನಿಚ್ಚಾಣಿ ಅವರು ಜಿಗಜಿಣಗಿ ಅವರನ್ನು ಸಮಾಧಾನಪಡಿಸಿದರು. ಈ ಭಾವುಕ ಸನ್ನಿವೇಶದಲ್ಲಿ ಜೆಡಿಯುನ ರಾಜ್ಯಾಧ್ಯಕ್ಷ ಎಂ.ಪಿ.ನಾಡಗೌಡ ಕೂಡ ಕಣ್ಣೀರು ಹಾಕಿದರು.

ಮುಂದುವರೆದು ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಲ್.ಶಂಕರ್, ಹೆಗಡೆ ಅವರ ರಾಜಕೀಯ ಮುತ್ಸದಿತನವನ್ನು ಹೊಗಳಿದರು. ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಗುಣ ಅವರಲ್ಲಿತ್ತು. ಇಂದು ಪ್ರತಿಭಾವಂತರನ್ನು ತುಳಿಯುವ ಪ್ರಕ್ರಿಯೆ ಹೆಚ್ಚಾಗಿದೆ. ರಾಜ್ಯ ಅಥವಾ ಕೇಂದ್ರ ಸರ್ಕಾರಗಳಾಗಲಿ ಪ್ರಮುಖ ಸಂಸ್ಥೆಯೊಂದಕ್ಕೆ ರಾಮಕೃಷ್ಣ ಹೆಗಡೆ ಅವರ ಹೆಸರನ್ನು ಇಡಬೇಕೆಂದು ಸಲಹೆ ನೀಡಿದರು. ಎಂ.ಸಿ.ನಾಣಯ್ಯ ಅವರು ರಾಮಕೃಷ್ಣ ಹೆಗಡೆ ಅವರ ನಿಷ್ಟೂರತೆ ಮತ್ತು ರಾಜನೀತಿಯ ಬಗ್ಗೆ ಮಾತನಾಡಿದರು. ನವ ನಿರ್ಮಾಣ ವೇದಿಕೆ ಅಧ್ಯಕ್ಷ ಟಿ.ಪ್ರಭಾಕರ್, ಸಚಿವ ರಮೇಶ್‌ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin