ರಾಯಚೂರಿನಲ್ಲಿ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (Live)

ಈ ಸುದ್ದಿಯನ್ನು ಶೇರ್ ಮಾಡಿ

>  ಮಾತೃ ಭಾಷಾ ಶಿಕ್ಷಣ ಕಡ್ಡಾಯಕ್ಕೆ ಸಂವಿಧಾನ ತಿದ್ದುಪಡಿ ಅಗತ್ಯ : ಸಿಎಂ ಅಭಿಪ್ರಾಯ
Raichur-01

ರಾಯಚೂರು, ಡಿ.2- ಮಾತೃಭಾಷೆ ಶಿಕ್ಷಣ ಕಡ್ಡಾಯಕ್ಕೆ ಸಂವಿಧಾನಕ್ಕೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಮಾತೃಭಾಷೆ ಶಿಕ್ಷಣ ಕಡ್ಡಾಯವನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿರುವುದರಿಂದ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಸಂವಿಧಾನಕ್ಕೆ ತಿದ್ದುಪಡಿ ತರುವ ಅಗತ್ಯವಿದೆ ಎಂದರು.  ನ್ಯಾಯಾಲಯದಲ್ಲಿ ನಮ್ಮ ವಾದ ಬಲಗೊಳಿಸಲು ವಿಶ್ವಾಸಾರ್ಹವಾದ ದಾಖಲೆ ಒದಗಿಸಬೇಕು. ಇದಕ್ಕೆ ಬೇಕಾದ ಮಾಹಿತಿ ಸಂಗ್ರಹಣೆಗೆ ತನಿಖಾ ಆಯೋಗದ ಕಾಯ್ದೆಯಡಿ ಸಮಿತಿಯೊಂದನ್ನು ರಚಿಸ ಬೇಕಾಗಿದೆ. ಉದ್ದೇಶಿತ ಸಮಿತಿಯ ದೇಶ-ವಿದೇಶಗಳಲ್ಲಿನ ಮಾತೃಭಾಷಾ ಮಾಧ್ಯಮ ಶಿಕ್ಷಣದ ಸ್ಥಿತಿಗತಿಗಳನ್ನು ಕಲೆ ಹಾಕಿ ವರದಿಯನ್ನು ಸಿದ್ಧಪಡಿಸಬೇಕು. ಆ ವರದಿಯನ್ನು ಸುಪ್ರೀಂಕೋರ್ಟ್‍ನ ಮುಂದಿಡಬೇಕು ಎಂಬ ಸಲಹೆ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿರುವ ಕೇಂದ್ರ ಕಚೇರಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ದೊರಕಿಸಿ ಕೊಡಲು ರಾಷ್ಟ್ರೀಯ ನೀತಿ ರೂಪಿಸಿ ಕನ್ನಡ ಭಾಷಾ ಜ್ಞಾನ ಅಪೇಕ್ಷಣೀಯ ಎಂಬುದನ್ನು ಕಡ್ಡಾಯಗೊಳಿಸಬೇಕೆಂದು ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ರಾಜ್ಯದಲ್ಲಿ ಬರ ಪರಿಸ್ಥಿತಿ ಸಮರ್ಥವಾಗಿ ನಿರ್ವಹಣೆ ಮಾಡುತ್ತಿರುವುದರಿಂದ ಜನರು ದೊಡ್ಡ ಸಂಖ್ಯೆಯಲ್ಲಿ ಗುಳೆ ಹೋಗುತ್ತಿಲ್ಲ. ಮಾನವದಿನಗಳನ್ನು ಸಾಕಷ್ಟು ಸೃಷ್ಟಿ ಮಾಡಿರುವುದರಿಂದ ಕಾರ್ಮಿಕ ಬಜೆಟ್‍ಗಿಂತಲೂ ದುಪ್ಪಟಾಗಿದೆ. ಇದೇ ರಾಷ್ಟ್ರದಲ್ಲೇ ಪ್ರಥಮ ಎಂದು ಸಮರ್ಥಿಸಿಕೊಂಡರು. ಉತ್ತರ, ದಕ್ಷಿಣ ಹೈದರಾಬಾದ್, ಮುಂಬೈ ಕರ್ನಾಟಕಗಳೆಂದು ಕರೆಯುವುದು ಅನುಕೂಲಕ್ಕಾಗಿ ಮಾತ್ರ. ನಮ್ಮಲ್ಲಿರುವುದು ಅಖಂಡ ಕರ್ನಾಟಕ ಒಂದೇ. ಪ್ರತ್ಯೇಕತೆಯ ಕೂಗು ಕೆಲವರ ಹತಾಶ ಮನೋಭಾವನೆ ಅಷ್ಟೆ ಎಂದರು.

Baraguru-01

82ನೇ ಅಖಿಲ ಭಾರತ ಕನ್ನಡ ಸಾಹಿತ್ಯಸಮ್ಮೇಳನಾಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪ ಭಾಷಣದ ಮುಖ್ಯಾಂಶಗಳು


ಬೆಂಗಳೂರು,ಡಿ.2-ಬಿರುಬಿಸಿಲ ನಾಡು, ಭತ್ತದ ಕಣಜ ರಾಯಚೂರು ನಗರದಲ್ಲಿ ಆರಂಭವಾಗಿರುವ 82ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇಲ್ಲಿ ನಡೆಯುತ್ತಿರುವ ಮೂರನೇ ಅಕ್ಷರ ಜಾತ್ರೆ ಎಂಬುದು ವಿಶೇಷ. ಈ ಮೊದಲು 1934ರಲ್ಲಿ ಮತ್ತು 1956ರಲ್ಲಿ ಎರಡು ಸಮ್ಮೇಳನಗಳು ಈ ಗಡಿನಾಡಲ್ಲಿ ನಡೆದಿದೆ. 1934ರಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಸ್ಥಾನವನ್ನು ಪಂಜೇಮಂಗೇಶರಾಯರು ವಹಿಸಿದ್ದರು. ಆನಂತರ 1956ರಲ್ಲಿ ಅಂದರೆ ಕರ್ನಾಟಕ ಏಕೀಕರಣವಾದ ವರ್ಷದಲ್ಲಿ ನಡೆದ 2ನೇ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯನ್ನು ಶ್ರೀರಂಗ ಅವರು ವಹಿಸಿದ್ದರು. ಖ್ಯಾತ ನಾಟಕಕಾರರು ಸಾಹಿತಿಗಳು ಆಗಿದ್ದ ಆದ್ಯ ರಂಗಾಚಾರ್ಯರ ಕಾವ್ಯನಾಮವೇ ಶ್ರೀರಂಗ.  ಇಂದು ಕರ್ನಾಟಕ ಏಕೀಕರಣ ವಜ್ರಮಹೋತ್ಸವ ವರ್ಷದಲ್ಲಿ ರಾಯಚೂರಿನಲ್ಲಿ 60 ವರ್ಷಗಳ ನಂತರ ನಡೆಯುತ್ತಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ನಾಡಿನ ಖ್ಯಾತ ಸಾಹಿತಿ, ಚಿಂತಕ ನಾಡೋಜ ಬರಗೂರು ರಾಮಚಂದ್ರಪ್ಪ ಮುನ್ನಡೆಸುತ್ತಿರುವುದು ವಿಶೇಷ.

Kannada-01
82ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ್ ಧ್ವಜಾರೋಹಣ ನೆರವೇರಿಸಿದರು.ಕಸಾಪ ಅಧ್ಯಕ್ಷ ಮನುಬಳಿಗಾರ್, ಜಿಲ್ಲಾ ಅಧ್ಯಕ್ಷ ಬಸವಪ್ರಭು ಪಾಟೀಲ್ ಬೆಟದೂರು ಮತ್ತಿತರರು ಉಪಸ್ಥಿತರಿದ್ದರು.

ಬರಗಾಲವಿದ್ದರೂ ನಾಡುನುಡಿ, ಜನರ ಅಭಿವೃದ್ದಿಗಾಗಿ ಸಾಹಿತ್ಯ ಸಮ್ಮೇಳನ ನಡೆಸುತ್ತಿದ್ದೇವೆ : ತನ್ವೀರ್ ಸೇಠ್

ರಾಯಚೂರು,ಡಿ.2-ಕಳೆದ ಬಾರಿ ಬರಗಾಲದಿಂದ ಸಾಹಿತ್ಯ ಸಮ್ಮೇಳನ ನೆರವೇರಿಸಲು ಆಗಲಿಲ್ಲ. ಈ ಬಾರಿಯೂ ಸಹ ತೀವ್ರ ಬರಗಾಲವಿದ್ದರೂ ನಾಡು-ನುಡಿ ಅಭಿವೃದ್ದಿಗಾಗಿ ಸಾಹಿತ್ಯ ಸಮ್ಮೇಳನ ನಡೆಸುತ್ತಿದ್ದೇವೆ ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದರು. ಬಿಸಿಲನಾಡು ರಾಯಚೂರಿನ ಕೃಷಿ ವಿವಿ ಆವರಣದಲ್ಲಿ ನಡೆಯುತ್ತಿರುವ ಅಖಿಲ ಭಾರತ 82ನೇ  ಸಾಹಿತ್ಯ ಸಮ್ಮೇಳನದ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಈ ಬಾರಿ ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ ನಾಡುನುಡಿ, ಜನರ ಅಭಿವೃದ್ದಿಗಾಗಿ ಸಾಹಿತ್ಯ ಸಮ್ಮೇಳನವನ್ನು ನಡೆಸುತ್ತಿದ್ದು , ಈ ಬಾರಿ ಸಮ್ಮೇಳನದಲ್ಲಿ ಕನ್ನಡಪರವಾದ ಮಹತ್ವದ ನಿರ್ಣಯಗಳು ಹೊರಬೀಳಲಿವೆ ಎಂದರು.

ರಾಜ್ಯದಲ್ಲಿ ಮಹದಾಯಿ, ಕಳಸಾಬಂಡೂರಿ, ಕಾವೇರಿ, ಕೃಷ್ಣ  ಸೇರಿದಂತೆ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿದ್ದು, ಅವುಗಳನ್ನು ಬಗೆಹರಿಸಲು ಹಾಗೂ  ನಾಡಿನ ಹಿತಕ್ಕಾಗಿ  ನಾವು ಹೋರಾಟ ನಡೆಸಲು ಬದ್ಧರಾಗಿದ್ದೇವೆ ಎಂದರು. ಇದೇ ವೇಳೆ ನಾಡಧ್ವಜವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಬಸವ ಪ್ರಭು ಪಾಟೀಲ್   ಬೆಟದೂರು ಹಾಗೂ ಕರ್ನಾಟಕ ರಾಜ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ನೆರವೇರಿಸಿದರು. ಅಖಿಲ ಭಾರತ 82ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ  ನಾಡೋಜ ಬರಗೂರು ರಾಮಚಂದ್ರಪ್ಪ  ಸಮ್ಮೇಳನದ ಅದ್ಧೂರಿ ಮೆರವಣಿಗೆಯನ್ನು ನಡೆಸಲಾಯಿತು. 30 ವಿವಿಧ ಸಾಂಸ್ಕøತಿಕ ಕಲಾ ತಂಡಗಳು, 82 ಮಹಿಳೆಯರು ಕಳಸಾ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.


>   ಸಮ್ಮೇಳನಾಧ್ಯಕ್ಷರ ವೈಭವದ ಮೆರವಣಿ

 

https://twitter.com/eesanjenews/status/804559378154033153

ರಾಯಚೂರು, ಡಿ.2– ಎಡೆದೊರೆ ನಾಡಲ್ಲಿ ನುಡಿಯಾತ್ರೆಯ ವೈಭವಕ್ಕೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ವಿವಿಧ ಜಾನಪದ ಕಲಾತಂಡಗಳು ಸಾಕ್ಷಿಯಾದವು. ಸಮ್ಮೇಳನದ ಅಧ್ಯಕ್ಷರಾದ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅವರನ್ನು ಕನ್ನಡದ ರಥದಲ್ಲಿ 160ಕ್ಕೂ ಹೆಚ್ಚು ಜಾನಪದ ಕಲಾತಂಡಗಳೊಂದಿಗೆ ಕರ್ನಾಟಕ ಸಂಘದಿಂದ ಆರಂಭಗೊಂಡ ಸಾಲಂಕೃತ ವೈಭವದ ಮೆರವಣಿಗೆ ಮೂಲಕ ಕೃಷಿ ವಿವಿಯಲ್ಲಿ ನಿರ್ಮಿಸಿದ್ದ ಪ್ರಧಾನ ವೇದಿಕೆಗೆ ಕರೆತರಲಾಯಿತು. ನುಡಿಜಾತ್ರೆಗೆ ನವ ವಧುವಿನಂತೆ ಸಿಂಗಾರಗೊಂಡಿದ್ದ ರಾಯಚೂರಿನಲ್ಲಿ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಜನತೆ ನಿಂತು ಅಧ್ಯಕ್ಷರಿಗೆ ಸ್ವಾಗತ ಕೋರಿದರು.  ತಳಿರು-ತೋರಣಗಳಿಂದ ಸಿಂಗರಿಸಿದ್ದರು. ರಸ್ತೆಯುದ್ದಕ್ಕೂ ಸುಮಂಗಲಿಯರು ಬಿಡಿಸಿದ್ದ ರಂಗೋಲಿಗಳು ಕಣ್ಮನ ಸೆಳೆದವು.

ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ಸಾಹಿತ್ಯಾಸಕ್ತರು, ಸಾರ್ವಜನಿಕರು ಕೈಯಲ್ಲಿ ಕನ್ನಡದ ಬಾವುಟಗಳನ್ನು ಹಿಡಿದು ನಾಡಗೀತೆಗಳನ್ನು ಮೊಳಗಿಸುತ್ತ ಜೈಕಾರದ ಘೋಷಣೆಗಳನ್ನು ಕೂಗುತ್ತ ಸಾಗಿದ್ದು ಕಣ್ಮನ ಸೆಳೆಯುತ್ತಿತ್ತು. ಎಲ್ಲೆಡೆ ಕೆಂಪು, ಹಳದಿ ಬಾವುಟಗಳು ರಾರಾಜಿಸುತ್ತಿದ್ದವು.  ಡೊಳ್ಳು ಕುಣಿತ, ಪಟದ ಕುಣಿತ, ವೀರಗಾಸೆ, ಕಂಸಾಳೆ, ಯಕ್ಷಗಾನ, ನಂದಿಧ್ವಜ, ಕೀಲು ಕುದುರೆ ಸೇರಿದಂತೆ ನಾಡಿನ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಮೇಳೈಸಿದವು.  ಸಮ್ಮೇಳನದ ಅಧ್ಯಕ್ಷರಾದ ಬರಗೂರು ರಾಮಚಂದ್ರಪ್ಪ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಅವರಿಗೆ ಮೆರವಣಿಗೆಯುದ್ದಕ್ಕೂ ದಾರಿಯಲ್ಲಿ ನಿಂತ ಜನ ಕೈಯೆತ್ತಿ ಶುಭ ಕೋರುತ್ತಿದ್ದರು.

ಕೆಲವು ಕಡೆ ಮನೆಯ ಮೇಲಿನಿಂದ ಹೂಮಳೆಗರೆಯಲಾಗುತ್ತಿತ್ತು. ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು, ಪದಾಧಿಕಾರಿಗಳು, ವಿಶೇಷವಾಗಿ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು, ಪದಾಧಿಕಾರಿಗಳು ಶ್ವೇತ ಸಮವಸ್ತ್ರಧಾರಿಗಳಾಗಿ ಕೊರಳಲ್ಲಿ ಹಳದಿ, ಕೆಂಪು ಬಣ್ಣದ ಶಾಲು ಧರಿಸಿ ಮೆರವಣಿಗೆಯಲ್ಲಿ ಸಾಗಿದರು. ಎಲ್ಲಾ ಶಾಲಾ ಮಕ್ಕಳು ಸಾಲಿನಲ್ಲಿ ನಿಂತು ಸಮ್ಮೇಳನಾಧ್ಯಕ್ಷರಿಗೆ ಶುಭಾಶಯ ಕೋರಿದರು. ಒಟ್ಟಾರೆ ಬಿಸಿಲ ನಾಡು, ಗಡಿ ನಾಡು ರಾಯಚೂರಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಇಲ್ಲಿನ ಜನ ನುಡಿಜಾತ್ರೆಯನ್ನು ಹಬ್ಬದಂತೆ ಆಚರಿಸುತ್ತಿದ್ದರು. ಸಾಹಿತ್ಯ ಸಮ್ಮೇಳನ ನಡೆಯುವ ಜಾಗಕ್ಕೆ ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದರು.

 

    • ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ್ ಅವರಿಂದ ಧ್ವಜಾರೋಹಣ

    https://twitter.com/eesanjenews/status/804550235091439618


10.20 : ಸಮ್ಮೇಳನದ ಪ್ರಧಾನ ವೇದಿಕೆಯ ಮುಂಭಾಗದಲ್ಲಿ ಧ್ವಜಾರೋಹಣ ಮುಕ್ತಾಯಗೊಂಡಿತು. ಇದೀಗ ನಾಡೋಜ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಭವ್ಯ ಮೆರವಣಿಗೆ ನಗರದ ಕರ್ನಾಟಕ ಸಂಘದಿಂದ ಆರಂಭಗೊಂಡಿದೆ.  ಆರು ದಶಕಗಳ ನಂತರ ರಾಯಚೂರಿನಲ್ಲಿ ಮತ್ತೊಮ್ಮೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಹಜವಾಗಿ ಇಲ್ಲಿನ ಸಾಹಿತ್ಯಾಭಿಮಾನಿಗಳಲ್ಲಿ ಸಂತೋಷ, ಉತ್ಸಾಹ ಮೂಡಿಸಿದೆ.1955ರಲ್ಲಿ ಆದ್ಯ ರಂಗಾಚಾರ್ಯರ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆದಿತ್ತು.  ಇಂದು ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ, ಸಮ್ಮೇಳನಾಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪ ಮಾತನಾಡಲಿದ್ದಾರೆ.

ರಾಯಚೂರು ಡಿ.೦2 : ರಾಯಚೂರಿನಲ್ಲಿ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭಗೊಂಡಿದೆ.   ಕೃಷ್ಣಾ- ತುಂಗೆಯರ ಬೀಡು, ಎಡದೊರೆಯ ನಾಡಿನಲ್ಲಿ ಮೂರು ದಿನಗಳ ಕಾಲ ಆಯೋಜನೆಗೊಂಡಿರುವ ಅಕ್ಷರ ಜಾತ್ರೆಗೆ ಅಕ್ಷರಶಃ ಚಾಲನೆ ದೊರೆತಿದೆ.. ನಗರದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಡಿ.2, 3 ಮತ್ತು 4 ರಂದು ನಡೆಯುವ ನುಡಿಹಬ್ಬದ ರಸದೌತಣ ನೀಡಲು ವಿವಿಧ ವೇದಿಕೆಗಳು ಸಜ್ಜುಗೊಂಡಿವೆ. ಪಂಡಿತ ತಾರಾನಾಥ ಮಹಾಮಂಟಪ, ಶಾಂತರಸ ಪ್ರಧಾನ ವೇದಿಕೆ ಹಾಗೂ ಪಂಡಿತ ಸಿದ್ಧರಾಮ ಜಂಬಲದಿನ್ನಿ ಮಹಾದ್ವಾರ ಎಂಬ ಮೂರು ಮುಖ್ಯ ವೇದಿಕೆಗಳಲ್ಲಿ ಹಾಗೂ ಇನ್ನಿತರ ವೇದಿಕೆಗಳಲ್ಲಿ ಸಾಹಿತ್ಯದ ಸಂವಾದ, ಕಲೆಯ ಅನಾವರಣ ಸೇರಿದಂತೆ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚಿಂತನ-ಮಂಥನ ನಡೆಯಲಿದೆ.(Live Updates)
Kannada-Sahitya-Sammelana--

Kannada-Sahitya-Sammelana-0

01-12-2016

Raichuru-01
ರಾಯಚೂರು ಡಿ.2- ಕೃಷ್ಣಾ- ತುಂಗೆಯರ ಬೀಡು, ಎಡದೊರೆಯ ನಾಡಿನಲ್ಲಿ ಮೂರು ದಿನಗಳ ಕಾಲ ಆಯೋಜನೆಗೊಂಡಿರುವ ಅಕ್ಷರ ಜಾತ್ರೆಗೆ ಅಕ್ಷರಶಃ ಕ್ಷಣಗಣನೆ ಆರಂಭವಾಗಿದೆ. ನಗರದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಡಿ.2, 3 ಮತ್ತು 4 ರಂದು ನಡೆಯುವ ನುಡಿಹಬ್ಬದ ರಸದೌತಣ ನೀಡಲು ವಿವಿಧ ವೇದಿಕೆಗಳು ಸಜ್ಜುಗೊಂಡಿವೆ. ಪಂಡಿತ ತಾರಾನಾಥ ಮಹಾಮಂಟಪ, ಶಾಂತರಸ ಪ್ರಧಾನ ವೇದಿಕೆ ಹಾಗೂ ಪಂಡಿತ ಸಿದ್ಧರಾಮ ಜಂಬಲದಿನ್ನಿ ಮಹಾದ್ವಾರ ಎಂಬ ಮೂರು ಮುಖ್ಯ ವೇದಿಕೆಗಳಲ್ಲಿ ಹಾಗೂ ಇನ್ನಿತರ ವೇದಿಕೆಗಳಲ್ಲಿ ಸಾಹಿತ್ಯದ ಸಂವಾದ, ಕಲೆಯ ಅನಾವರಣ ಸೇರಿದಂತೆ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚಿಂತನ-ಮಂಥನ ನಡೆಯಲಿದೆ.

ನಾಡಿನ ಖ್ಯಾತ ಸಾಹಿತಿ, ಸೃಜನಶೀಲ ಚಿಂತಕ, ಚಲನಚಿತ್ರ ನಿರ್ದೇಶಕರಾದ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅವರು ಸಮ್ಮೇಳನಾಧ್ಯಕ್ಷರಾಗಿದ್ದಾರೆ. ಅವರ ಸಮ್ಮುಖದಲ್ಲಿ ಮೂರು ದಿನಗಳ ಕಾಲ ಆಯೋಜನೆ ಗೊಂಡಿರುವ ಸಮ್ಮೇಳನಕ್ಕೆ ನಾಳೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡುವರು.   ಇದಕ್ಕೂ ಮೊದಲು ಬೆಳಗ್ಗೆ 8.30 ಗಂಟೆಗೆ ಧ್ವಜಾರೋಹಣವಿದೆ. ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು 82ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ತನ್ವೀರ್ ಸೇಠ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು.

Raichuru-02

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನುಬಳಿಗಾರ್ ಅವರು ಪರಿಷತ್ತಿನ ಧ್ವಜಾರೋಹಣ ನೆರವೇರಿಸುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ 82ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು ನಾಡ ಧ್ವಪೊರೋಹಣ ನೆರವೇರಿಸುವರು.  ಬಳಿಕ 9ಕ್ಕೆ ಆಯೋಜನೆ ಗೊಂಡಿರುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಜಿಲ್ಲಾಧಿಕಾರಿಗಳಾದ ಎಸ್.ಸಸಿಕಾಂತ್ ಸೆಂಥಿಲ್ ಚಾಲನೆ ನೀಡುವರು. ಮೆರವಣಿಗೆಯು ನಗರದ ಕರ್ನಾಟಕ ಸಂಘದಿಂದ ಹೊರಟು ನೇತಾಜಿ ವೃತ್ತ, ಪಟೇಲ್ ವೃತ್ತ, ಚಂದ್ರಮಳೇಶ್ವರ ವೃತ್ತ, ಗಾಂಧಿ ವೃತ್ತ, ಬಸವೇಶ್ವರ ವೃತ್ತದ ಮಾರ್ಗವಾಗಿ ಕೃಷಿ ವಿಶ್ವವಿದ್ಯಾಲಯದ ಪ್ರಧಾನ ವೇದಿಕೆಗೆ ತಲುಪುವುದು.

ಮುಖ್ಯ ಅತಿಥಿಗಳಾಗಿ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಎಂ. ಕೂರ್ಮರಾವ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚೇತನ್ ಸಿಂಗ್ ರಾಥೋರ್ ಉಪಸ್ಥಿತರಿರುವರು. ಅತಿಥಿಗಳಾಗಿ ಕೇಂದ್ರದ ಮಾಜಿ ಸಚಿವ ಬಸವರಾಜ್ ಪಾಟೀಲ್ ಅನ್ವರಿ, ಮಾಜಿ ಶಾಸಕ ಸಯ್ಯದ್ ಯಾಸೀನ್, ಮಾಜಿ ಸಚಿವ ಅಮರೇಗೌಡ ಬಯ್ಯಾಪುರ, ಮಾಜಿ ಸಂಸದ ಕೆ. ವಿರುಪಾಕ್ಷಪ್ಪ, ಮಾಜಿ ಶಾಸಕ ಎ. ಪಾಪಾರೆಡ್ಡಿ, ಮುಂತಾದ ಗಣ್ಯರು ಉಪಸ್ಥಿತರಿರುವರು. 81ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ನಾಡೋಜ ಡಾ.ಸಿದ್ದಲಿಂಗಯ್ಯ ಭಾಷಣ ಮಾಡುವರು. ನಂತರ ಸಮ್ಮೇಳನಾಧ್ಯಕ್ಷ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಭಾಷಣ ಮಾಡುವರು. ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸುವರು.

Raichuru-03

ಲೋಕಸಭೆ ಸದಸ್ಯರಾದ ಬಿ.ವಿ ನಾಯಕ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ವಿಧಾನ ಪರಿಷತ್ ಸದಸ್ಯ ಎನ್.ಎಸ್ ಭೋಸರಾಜು ಪುಸ್ತಕ ಮಳಿಗೆಗಳ ಉದ್ಘಾಟಿಸುವರು. ವಾಣಿಜ್ಯ ಮಳಿಗೆಗಳ ಉದ್ಘಾಟನೆಯನ್ನು ನಗರ ಶಾಸಕ ಡಾ.ಎಸ್. ಶಿವರಾಜ್ ಪಾಟೀಲ್ ಮಾಡಲಿದ್ದಾರೆ. ಹಿರಿಯ ಸಾಹಿತಿ ಡಾ. ರಾಜಶೇಖರ್ ನೀರಮಾನ್ವಿ ಪರಿಷತ್ತಿನ ಪುಸ್ತಕಗಳನ್ನು ಬಿಡುಗಡೆ ಮಾಡುವರು. ವಿವಿಧ ಲೇಖಕರ ಪುಸ್ತಕಗಳ ಲೋಕಾರ್ಪಣೆಯನ್ನು ರಾಯಚೂರು ಗ್ರಾಮೀಣ ಶಾಸಕ ತಿಪ್ಪರಾಜ ಹವಾಲ್ದಾರ ನೆರವೇರಿಸುವರು.  ಚಿತ್ರಕಲಾ ಪ್ರದರ್ಶನ, ಕವಿಗೋಷ್ಠಿ, ವಿಶೇಷ ಉಪನ್ಯಾಸ, ಸಾಂಸ್ಕøತಿಕ ಕಾರ್ಯಕ್ರಮಗಳು, ಸಮ್ಮೇಳನದ ನಿಮಿತ್ತ ಡಿಸೆಂಬರ್ 2, 3 ಮತ್ತು 4 ರಂದು ಕೃಷಿ ವಿಶ್ವವಿದ್ಯಾಲಯ ಆವರಣ ಮತ್ತು ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮೂರು ಮುಖ್ಯ ವೇದಿಕೆಗಳಲ್ಲಿ ನೃತ್ಯ ರೂಪಕ, ಸಮೂಹ ನೃತ್ಯಗಳು, ಜÁನಪದ, ಭಾವಗೀತೆ, ದಾಸವಾಣಿ, ವಚನ, ಸಮೂಹ ಗೀತೆ, ಭರತನಾಟ್ಯ, ನಾಟಕ ಪ್ರದರ್ಶನ, ಬಯಲಾಟ, ಕನ್ನಡವೇ ಸತ್ಯ ವಿಶೇಷ ಆಕರ್ಷಣೀಯ ಕಾರ್ಯಕ್ರಮಗಳು ಮತ್ತು ಸಂಗೀತ ನಿರ್ದೇಶಕ ಹಂಸಲೇಖರಿಂದ ವೈವಿಧ್ಯಮಯ ದೇಶಿ ಕಾರ್ಯಕ್ರಮಗಳು ಜರುಗಲಿವೆ.
– ಮಹಾಂತೇಶ್, ಹಿರೇಮಠ್

ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

> ವಿವಿಧ ಸಿದ್ಧತೆಗಳು ಬಹುತೇಕ ಪೂರ್ಣ

ರಾಯಚೂರು, ಡಿ.1- ನಾಳೆಯಿಂದ ಆರಂಭಗೊಳ್ಳುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವಾದ ನುಡಿಹಬ್ಬಕ್ಕೆ ಆಗಮಿಸುವ ಅತಿಥಿಗಳು, ಪ್ರತಿನಿಧಿಗಳು, ಸಾರ್ವಜನಿಕರಿಗೆ ಅಗತ್ಯ ವಸತಿ, ಊಟದ ವ್ಯವಸ್ಥೆ, ಕುಡಿವ ನೀರು ಪೂರೈಕೆ ಒದಗಿಸುವುದು ಸೇರಿದಂತೆ ಸರ್ವ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ವಿವಿಧ ಗೋಷ್ಠಿಗಳು, ಉಪನ್ಯಾಸಗಳು, ಕವಿಗೋಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ರೂಪಿಸಿರುವ ಮೂರು ಮುಖ್ಯವೇದಿಕೆಗಳು ಸಂಪೂರ್ಣ ಸಿದ್ಧಗೊಂಡಿವೆ. ವಿವಿಧೆಡೆ ಅಗತ್ಯ ಕುಡಿವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. ಕಲೆ, ವಾಣಿಜ್ಯ ಹಾಗೂ ಪುಸ್ತಕ ಮಾರಾಟ ಮಳಿಗೆಗಳು ಸಿದ್ಧಗೊಂಡಿವೆ.

ಸಮ್ಮೇಳನಕ್ಕೆಂದು ವಿವಿಧ ಜಿಲ್ಲೆಗಳಿಂದ ನಗರಕ್ಕೆ ಆಗಮಿಸುವ ಪ್ರತಿನಿಧಿಗಳು ಸಮ್ಮೇಳನದ ಸ್ಥಳದಿಂದ ವಸತಿಗೆ ಸಂಚರಿಸಲು ಅಗತ್ಯ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನದ ಪ್ರಚಾರ ಕಾರ್ಯಗಳು ಕೂಡ ಬಹುತೇಕ ಪೂರ್ಣಗೊಂಡಿವೆ.  ಅಧ್ಯಕ್ಷರ ಮೆರವಣಿಗೆಗೆ ಜಿಲ್ಲೆಯಲ್ಲಿ 160ಕ್ಕೂ ಹೆಚ್ಚು ತಂಡಗಳನ್ನು ನಿಯೋಜಿಸಲಾಗಿದ್ದು, ಮೆರವಣಿಗೆ ಸಂಚರಿಸುವ ವಿವಿಧ ಮಾರ್ಗಗಳಲ್ಲಿನ ರಸ್ತೆಗಳ ಗೋಡೆಗೆ ಚಿತ್ರಗಳ ಅಲಂಕಾರ ಮಾಡಲಾಗಿದೆ.

> ಸಾಹಿತ್ಯ ಸಮ್ಮೇಳನ ಮಾಹಿತಿಗೆ  ವಿಶೇಷ ವೆಬ್‍ಸೈಟ್

ರಾಯಚೂರು ಡಿ.1- ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಡಿ.2ರಿಂದ ಆರಂಭಗೊಳ್ಳುವ 82ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಾಹಿತಿಗೆ ಜಿಲ್ಲಾಡಳಿತವು ವಿಶೇಷ ವೆಬ್‍ಸೈಟ್ ರೂಪಿಸಿದೆ.  ಸಮ್ಮೇಳನದ ಬಗ್ಗೆ ತಿಳಿಯಲಿಚ್ಚಿಸುವವರು ಹಾಗೂ ಆಗಮಿಸಬಯಸುವವರು www.82ssraichur.com  ಮೂಲಕ ನಾನಾ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಈ ವೆಬ್‍ಸೈಟ್‍ನಲ್ಲಿ ಸಮ್ಮೇಳನದ ಆಹ್ವಾನ ಪತ್ರಿಕೆಯು ಲಭ್ಯವಿದ್ದು, ಈ ಮೂಲಕ ಸಮ್ಮೇಳನದ ವಿವಿಧ ಕಾರ್ಯಕ್ರಮಗಳ ಸಂಪೂರ್ಣ ವಿವರವನ್ನು ಪಡೆಯಬಹುದಾಗಿದೆ. ರಾಯಚೂರು ನಗರದ ಹಿನ್ನೆಲೆಯನ್ನು ಕೂಡ ಈ ವೆಬ್‍ಸೈಟ್ ಮೂಲಕ ತಿಳಿಯಬಹುದಾಗಿದೆ. ಸಮ್ಮೇಳನಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಹಾಯವಾಣಿ ಸಂಖ್ಯೆಯನ್ನು ಕೂಡ ಆರಂಭಿಸಿದ್ದು, 08532-228536, 225630 ಇದಕ್ಕೆ ಸಾರ್ವಜನಿಕರು ಸಂಪರ್ಕಿಸಬಹುದಾಗಿದೆ.

Facebook Comments

Sri Raghav

Admin