ರಾಯ್ಪುರದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲಿನ 14 ಬೋಗಿಗಳು
ರಾಯ್ಪುರ, ನ.20- ಕಾನ್ಪುರದ ಬಳಿ ಇಂದೋರ್-ಪಾಟ್ನಾ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿ 100ಕ್ಕೂ ಹೆಚ್ಚು ಪ್ರಯಾಣಿಕರು ದುರಂತ ಸಾವಿಗೀಡಾದ ಕೆಲವು ಗಂಟೆಗಳಲ್ಲೇ ಛತ್ತೀಸ್ಗಢದ ರಾಯ್ಪುರದಲ್ಲಿ ಗೂಡ್ಸ್ ರೈಲೊಂದರ 14 ಬೋಗಿಗಳು ಹಳಿ ತಪ್ಪಿದ ಘಟನೆ ಇಂದು ಬೆಳಗ್ಗೆ ನಡೆದಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಸಾವು-ನೋವು ಸಂಭವಿಸಿಲ್ಲ. ಗೂಡ್ಸ್ ರೈಲು ಹಳಿ ತಪ್ಪಿದ್ದರಿಂದ ಹೌರಾ-ಮುಂಬೈ ಮಾರ್ಗದ ರೈಲುಗಳ ಸಂಚಾರಕ್ಕೆ ಅಡಚಣೆಯಾಗಿದೆ. ಬಿಲಾಸ್ಪುರ್ನಿಂದ ರಾಯ್ಪುರಕ್ಕೆ ಬೂದಿಯಂಥ ವಸ್ತುವನ್ನು ಸಾಗಿಸುತ್ತಿದ್ದ ಸರಕು-ಸಾಗಣೆ ರೈಲಿನ 14 ಬೋಗಿಗಳು ಬೆಳಗ್ಗೆ ಸಿಲ್ಮರಿ ಮತ್ತು ಮಂಧರ್ ರೈಲ್ವೆ ನಿಲ್ದಾಣಗಳ ನಡುವೆ ಹಳಿ ತಪ್ಪಿತು ಎಂದು ರಾಯ್ಪುರ್ ರೈಲ್ವೆ ವಲಯದ ವಕ್ತಾರರು ತಿಳಿಸಿದ್ದಾರೆ.
ನಿನ್ನೆ ಬೆಳಗ್ಗೆ ರಾಜಸ್ತಾನದ ಭೀವಂಡಿ ಬಳಿ ಪ್ರಯಾಣಿಕರ ರೈಲೊಂದರ ನಾಲ್ಕು ಬೋಗಿಗಳು ಹಳಿ ತಪ್ಪಿ ಕೆಲವರು ಗಾಯಗೊಂಡಿದ್ದರು. ದೇಶದ ವಿವಿಧೆಡೆ ಇತ್ತೀಚಿನ ದಿನಗಳಲ್ಲಿ ರೈಲು ಹಳಿ ತಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದೆ.
► Follow us on – Facebook / Twitter / Google+