ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ : ಮೋದಿಯಿಂದ ಎಡಕ್ಕೆ ತೋರಿಸಿ ಬಲಕ್ಕೆ ಹೊಡೆಯುವ ತಂತ್ರ..!

ಈ ಸುದ್ದಿಯನ್ನು ಶೇರ್ ಮಾಡಿ

Modi-Eesanje

ನವದೆಹಲಿ, ಜೂ.10- ಎಡಕ್ಕೆ ತೋರಿಸಿ ಬಲಕ್ಕೆ ಹೊಡೆಯುವುದು ಎನ್ನುತ್ತಾರಲ್ಲ ಹಾಗೆ… ಇಂತಹ ಟ್ರಿಕ್ಸ್ ಮಾಡುವುದರಲ್ಲಿ ಪ್ರಧಾನಿ ನರೇಂದ್ರ ಮೋದಿ ಎತ್ತಿದ ಕೈ. ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಗಳು ಯಾರು ಎಂಬುದು ಈಗ ದೇಶಾದ್ಯಂತ ರಾಜಕೀಯ ಪಕ್ಷಗಳಲ್ಲಿ ಗರಿಗೆದರಿರುವ ವಿಷಯ.   ಬಿಜೆಪಿಯಿಂದ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಸ್ಪೀಕರ್ ಸುಮಿತ್ರ ಮಹಾಜನ್ ಮತ್ತಿತರರು ಸ್ಪರ್ಧಿಸಬಹುದು ಎಂದು ಆ ಪಕ್ಷ ಭಾವಿಸಿದೆ.

ಅದೇ ರೀತಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಬೇರೆ ಜಾತ್ಯತೀತ ವ್ಯಕ್ತಿಯೊಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡಿ ಕಣಕ್ಕಿಳಿಸುವ ಸನ್ನಾಹ ನಡೆಸಿವೆ. ಆದರೆ, ಪ್ರಧಾನಿ ನರೇಂದ್ರಮೋದಿಯವರ ಲೆಕ್ಕಾಚಾರವೇ ಬೇರೆ. ಜಕೀಯದಿಂದ ಹೊರತಾದವರು, ಶುದ್ಧ ಹಸ್ತರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬೇಕು ಎಂಬುದು ಮೋದಿ ದಾಯ.  ಈ ಹಿನ್ನೆಲೆಯಲ್ಲಿ ಅಭ್ಯರ್ಥಿಯ ಆಯ್ಕೆ ಎಲ್ಲ ಪಕ್ಷಗಳಿಗೂ ಕಾಂಗ್ರೆಸ್, ಡಿಎಂಕೆ, ಎಐಎಡಿಎಂಕೆ ಸೇರಿದಂತೆ ಮತ್ತಿತರರಿಗೆ ಮೆಚ್ಚುಗೆಯಾಗಬೇಕು. ಅಂತಹ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿ ಕಣಕ್ಕಿಳಿಸಿದರೆ ಎಲ್ಲ ಪಕ್ಷಗಳೂ ಬಾಯಿ ಮುಚ್ಚಿಕೊಳ್ಳುತ್ತವೆ ಎಂಬುದು ಮೋದಿಯವರ ಲೆಕ್ಕಾಚಾರ.

ಆದ್ದರಿಂದ ಮೋದಿಯವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಉದ್ಯಮ ದಿಗ್ಗಜ ರತನ್ ಟಾಟಾ ಹಾಗೂ ಇನ್ಫೋಸಿಸ್ ನಾರಾಯಣಮೂರ್ತಿ ಅವರನ್ನು ಕಣಕ್ಕಿಳಿಸಲು ಒಳಗೊಳಗೇ ತಂತ್ರಗಳು ನಡೆಯುತ್ತಿವೆ ಎಂದು ಮೋದಿಯವರ ನಿಕಟ ಮೂಲಗಳು ತಿಳಿಸಿವೆ.  ಏಕೆಂದರೆ, ಇವರಿಬ್ಬರೂ ಶುದ್ಧ ಹಸ್ತರು. ಸಜ್ಜನರನ್ನು ಹೆಸರು ಮಾಡಿದವರು. ಅಂತಾರಾಷ್ಟ್ರೀಯ ಖ್ಯಾತಿಯುಳ್ಳವರು ಮತ್ತು ಸರ್ವ ಪಕ್ಷಗಳಿಗೂ ಸಮ್ಮತವಾದ ಅಭ್ಯರ್ಥಿಗಳು ಎಂಬುದು ಅವರ ಅಂದಾಜು. ಇವರಿಬ್ಬರಲ್ಲಿ ಒಬ್ಬರನ್ನು ಕಣಕ್ಕಿಳಿಸಿದರೆ ಬಿಜೆಪಿ ಕಡೆಯಿಂದಲೇ ಸರ್ವ ಸಮ್ಮತ ಅಭ್ಯರ್ಥಿ ಕಣಕ್ಕಿಳಿದರೆ ಯಾವುದೇ ರಾಜಕೀಯಕ್ಕೆ ಅವಕಾಶವಿರುವುದಿಲ್ಲ ಎಂಬುದು ಅವರ ಲೆಕ್ಕಾಚಾರವಂತೆ.

ಕೇಂದ್ರ ಸಚಿವ ವೆಂಕಯ್ಯನಾಯ್ಡು ಅವರ ಹೆಸರು ಕೂಡ ರಾಷ್ಟ್ರಪತಿ ರೇಸ್‍ನಲ್ಲಿತ್ತು. ಆದರೆ, ಅವರು ನಾನು ರೇಸ್‍ನಲ್ಲಿಲ್ಲ, ನನಗೆ ಆ ಹುದ್ದೆ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.   ಇನ್ನು ಆರ್‍ಎಸ್‍ಎಸ್ ಮುಖಂಡ ಮೋಹನ್ ಭಾಗವತ್ ಅವರನ್ನು ರಾಷ್ಟ್ರಪತಿ ಮಾಡಬೇಕು ಎಂಬ ಆಲೋಚನೆ ಇತ್ತಾದರೂ ಅದಕ್ಕೆ ಬಹುತೇಕ ಅಂಗ ಪಕ್ಷಗಳ ಮತ್ತು ವಿಪಕ್ಷಗಳ ಒಪ್ಪಿಗೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಮೋಹನ್ ಭಾಗವತ್ ಅವರ ಅಭ್ಯರ್ಥಿತನ ಕುರಿತು ಕೇಳಲಾದ ಪ್ರಶ್ನೆಗೆ, ಆರ್‍ಎಸ್‍ಎಸ್ ಮುಖ್ಯಸ್ಥರ ಹುದ್ದೆ ರಾಷ್ಟ್ರಪತಿ ಹುದ್ದೆಗಿಂತಲೂ ದೊಡ್ಡದು ಎನ್ನುತ್ತಾರೆ ಬಿಜೆಪಿ ಹಿರಿಯ ನಾಯಕರು.

ಒಟ್ಟಾರೆ ಪ್ರಧಾನಿಗಿರಿ ತಪ್ಪಿದರೂ ರಾಷ್ಟ್ರಪತಿಯಾದರೂ ಆಗಬಹುದು ಎಂಬ ಆಸೆ ಇಟ್ಟುಕೊಂಡಿದ್ದ ಹಿರಿಯ ನಾಯಕ, ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿಯವರಿಗೆ ಇಲ್ಲೂ ಕೂಡ ನಿರಾಸೆಯಾದಂತಾಗಿದೆ.   ಮೋದಿಯವರ ಈ ಆಲೋಚನೆ ಮತ್ತು ಲೆಕ್ಕಾಚಾರ ನಿಜಕ್ಕೂ ಕಾರ್ಯರೂಪಕ್ಕೆ ಬಂದರೆ ವ್ಯಾಪಾರ ದಿಗ್ಗಜ ರತನ್ ಟಾಟಾ ಹಾಗೂ ದೇಶ-ವಿದೇಶಗಳಲ್ಲಿ ಹೆಸರು ಮಾಡಿರುವ ಐಟಿ ದಿಗ್ಗಜ ಇನ್ಫೋಸಿಸ್ ನಾರಾಯಣಮೂರ್ತಿ ಅವರಲ್ಲೊಬ್ಬರು ರಾಷ್ಟ್ರಪತಿ ಭವನ ಪ್ರವೇಶಿಸುವ ಸಾಧ್ಯತೆ ನಿಚ್ಚಳವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin