ರಾಷ್ಟ್ರಪತಿ ಚುನಾವಣೆ : ಎನ್‍ಡಿಎ ಅಭ್ಯರ್ಥಿ ಸುಷ್ಮಾ ಸ್ವರಾಜ್..?

ಈ ಸುದ್ದಿಯನ್ನು ಶೇರ್ ಮಾಡಿ

Sushma-Swaraj--000

ನವದೆಹಲಿ, ಜೂ.15- ತೀವ್ರ ಕುತೂಹಲಕ್ಕೆ ಕಾರಣವಾಗಿರುವ ರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಆಡಳಿತಾರೂಢ ಎನ್‍ಡಿಎ ಮತ್ತು ಪ್ರತಿಪಕ್ಷ ಯುಪಿಎ ಮಿತ್ರ ಪಕ್ಷಗಳಲ್ಲಿ ಚಟುವಟಿಕೆ ಬಿರುಸುಗೊಂಡಿದೆ. ಒಮ್ಮತದ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಎನ್‍ಡಿಎ ಇದಕ್ಕಾಗಿ ಸಾಧ್ಯವಿರುವ ಸಕಲ ಮಾರ್ಗೋಪಾಯಗಳನ್ನು ಅನುಸರಿಸುತ್ತಿದೆ.  ಇದರ ಭಾಗವಾಗಿ ಬಿಜೆಪಿ ರಾಷ್ಟ್ರಪತಿ ಆಯ್ಕೆಗಾಗಿ ಎನ್‍ಡಿಎಗೆ 18 ಸಾವಿರ ಮತಗಳ ಕೊರತೆ ಇರುವುದರಿಂದ ಪ್ರಾದೇಶಿಕ ಪಕ್ಷಗಳ ಮನವೊಲಿಕೆ ಪ್ರಯತ್ನದಲ್ಲಿ ತೊಡಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮಹಾರಾಷ್ಟ್ರದ ಶಿವಸೇನೆಯ ಬೆಂಬಲ ಗಳಿಸಲು ಕಾರ್ಯೋನ್ಮುಖರಾಗಿದ್ದಾರೆ.

ಈ ನಿಟ್ಟಿನಲ್ಲಿ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಅವರೊಂದಿಗೆ ಮಾತುಕತೆಗೆ ಷಾ ಮುಂದಾಗಿದ್ದಾರೆ. ಜೂ.18ರಂದು ಬೆಳಗ್ಗೆ 11 ಗಂಟೆಗೆ ಮುಂಬೈನ ಮಾತೋಶ್ರೀ ನಿವಾಸ (ಶಿವಸೇನೆ ಪರಮೋಚ್ಛ ನಾಯಕ ದಿ.ಬಾಳ್‍ಠಾಕ್ರೆ ಅವರ ನಿವಾಸ)ದಲ್ಲಿ ಉದ್ಧವ್ ಠಾಕ್ರೆ ಭೇಟಿಗೆ ಸಮಯ ನಿಗದಿಯಾಗಿದೆ.
ಅಮಿತ್ ಷಾ ಮತ್ತು ಉದ್ಧವ್ ಠಾಕ್ರೆ ಭೇಟಿ ಪ್ರಸ್ತುತ ಸನ್ನಿವೇಶದಲ್ಲಿ ಭಾರೀ ಮಹತ್ವ ಪಡೆದುಕೊಂಡಿದ್ದು, ತಾನು ಆಯ್ಕೆ ಮಾಡುವ ರಾಷ್ಟ್ರಪತಿ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಠಾಕ್ರೆ ಮನವೊಲಿಸಲು ಷಾ ಸರ್ವ ಪ್ರಯತ್ನ ನಡೆಸುತ್ತಿದ್ದಾರೆ.

ಈಗಾಗಲೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಕಮ್ಯುನಿಸ್ಟ್ ನಾಯಕ ಸೀತಾರಾಂ ಯೆಚೂರಿ ಅವರೊಂದಿಗೆ ಬಿಜೆಪಿ ಮುಖಂಡರು ಮಾತುಕತೆ ನಡೆಸಿದ್ದಾರೆ.
ಸುಷ್ಮಾ ಸ್ವರಾಜ್ ಪರ ಒಲವು:

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಅತ್ಯಂತ ಜನಪ್ರಿಯ ಮಂತ್ರಿಯಾಗಿರುವ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಅವರನ್ನೇ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ಬಹುತೇಕ ಬಿಜೆಪಿ ಮುಖಂಡರು ಒತ್ತಾಯಿಸುತ್ತಿದ್ದಾರೆ.  ಕಾರ್ಯದಕ್ಷತೆ ಮತ್ತು ಸಮರ್ಥ ನಿರ್ವಹಣೆ ಮೂಲಕ ಜನಪ್ರಿಯರಾಗಿರುವ ಸುಷ್ಮಾ ಸ್ವರಾಜ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಯುಪಿಎನ ಕೆಲ ಮಿತ್ರಪಕ್ಷಗಳು ಬೆಂಬಲ ಸೂಚಿಸುತ್ತವೆ ಎಂಬ ಲೆಕ್ಕಾಚಾರದ ಬಗ್ಗೆಯೂ ವಿಮರ್ಶೆ ನಡೆಸಲಾಗುತ್ತಿದೆ.  ಒಟ್ಟಾರೆ ರಾಷ್ಟ್ರಪತಿ ಆಯ್ಕೆ ಅತ್ಯಂತ ಕುತೂಹಲ ಮೂಡಿಸಿದ್ದು, ಜು.17ರಂದು ನಡೆಯುವ ಮತದಾನದ ಫಲಿತಾಂಶದ ಬಗ್ಗೆ ಇಡೀ ರಾಷ್ಟ್ರದ ಗಮನ ಕೇಂದ್ರೀಕೃತವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin