ರಾಷ್ಟ್ರಮಟ್ಟದಲ್ಲಿ ಬಸವ ಜಯಂತಿ ಆಚರಣೆ, ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ

ಈ ಸುದ್ದಿಯನ್ನು ಶೇರ್ ಮಾಡಿ

basava-jayanti

ಬೆಂಗಳೂರು, ಏ.26-ಪ್ರಥಮ ಬಾರಿಗೆ ರಾಷ್ಟ್ರಮಟ್ಟದಲ್ಲಿ ಬಸವ ಜಯಂತಿ  ಆಚರಿಸಲಾಗುತ್ತಿದ್ದು, ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಬಹುಭಾಷಾ ವಚನಗಳ ಸಂಪುಟಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಬೇಲಿಮಠದ ಶ್ರೀ ಶಿವರುದ್ರಮಹಾಸ್ವಾಮೀಜಿ ತಿಳಿಸಿದ್ದಾರೆ.
ಬೆಂಗಳೂರಿನ ಬಸವಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏ.29ರಂದು ದೆಹಲಿಯ ವಿಜ್ಞಾನ ಭವನದಲ್ಲಿ ಪ್ರಥಮ ಬಾರಿಗೆ ರಾಷ್ಟ್ರಮಟ್ಟದಲ್ಲಿ ಬಸವಜಯಂತಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಬಸವ ಸಮಿತಿಯ ಸುವರ್ಣ ಮಹೋತ್ಸವವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ಸಾಂದರ್ಭಿಕವಾಗಿ ಬಸವಸಮಿತಿಯು ಬಹುಭಾಷಾ ವಚನ ಅನುವಾದ ಯೋಜನೆಯಡಿ ಸಿದ್ಧಪಡಿಸಿರುವ 23 ವಚನ ಸಂಪುಟಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. 

 

ಕಳೆದ 10 ವರ್ಷಗಳ ಹಿಂದೆ ಬಸವ ಸಮಿತಿ ಬಹುಭಾಷಾ ವಚನ ಅನುವಾದ ಯೋಜನೆ ಯನ್ನು ಕೈಗೆತ್ತಿಕೊಂಡಿತ್ತು. ಸಂಶೋಧಕರಾಗಿದ್ದ ಎಂ.ಎಂ.ಕಲಬುರ್ಗಿ ಇದರ ನೇತೃತ್ವ ವಹಿಸಿದ್ದರು. ಇತ್ತೀಚೆಗೆ ಅವರು ಅಕಾಲಿಕ ಸಾವಿಗೀಡಾಗಿದ್ದು, ಆನಂತರವೂ ವಚನ ಅನುವಾದ ಯೋಜನೆ ಮುಂದುವರೆದಿದೆ.ರಾಷ್ಟ್ರದ ಪ್ರಮುಖ ಭಾಷೆಗಳಾದ ಕನ್ನಡ, ಇಂಗ್ಲೀಷ್, ಹಿಂದಿ, ತಮಿಳು, ತೆಲುಗು, ಉರ್ದು, ಸಂಸ್ಕೃತ , ಮರಾಠಿ, ಬೆಂಗಾಲಿ, ಪಂಜಾಬಿ, ಸಿಂಧಿ, ಗುಜರಾತಿ,ಕೊಂಕಣಿ ಮೈಥಿಲಿ, ಕಾಶ್ಮೀರಿ, ಒರಿಯಾ, ಸಂತಾಲಿ, ರಾಜಸ್ಥಾನಿ, ಮಲಯಾಳಂ, ತುಳು, ಭೋಜ್‍ಪುರಿ, ಕೊಡವ, ಅಸ್ಸಾಮಿ ಹೀಗೆ 23 ಭಾಷೆಗಳಿಗ 173 ಬಸವಾದಿ ಶರಣರ 2,500 ವಚನಗಳು ಭಾಷಾಂತರಗೊಂಡಿವೆ.

ಒಟ್ಟು 15 ಸಾವಿರಕ್ಕೂ ಹೆಚ್ಚು ವಚನಗಳ ಪೈಕಿ ಅನುವಾದಕ್ಕೆ ನಿಲುಕುವ 2,500 ವಚನಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು. 23 ಭಾಷೆಗಳ ಸುಮಾರು 200 ತಜ್ಞ ವಿದ್ವಾಂಸರ ಸಹಾಯ ಪಡೆದು ಯಶಸ್ವಿಯಾಗಿ ಅನುವಾದ ಮಾಡ ಲಾಗಿದೆ. ಈ ಯೋಜನೆಗೆ ಸುಮಾರು 2.5 ಕೋಟಿ ಖರ್ಚಾಗಿದ್ದು, ರಾಜ್ಯ ಸರ್ಕಾರ ಒಂದು ಕೋಟಿ ಅನುದಾನ ನೀಡಿದೆ ಎಂದರು.ಬಸವ ಸಮಿತಿಯನ್ನು 1964ರಲ್ಲಿ ಭಾರತದ ಮಾಜಿ ಉಪರಾಷ್ಟ್ರಪತಿ ಡಾ.ಬಿ.ಡಿ.ಜತ್ತಿ ಸ್ಥಾಪಿಸಿದರು. ಇದರ ಸುವರ್ಣಮಹೋತ್ಸವ ನಡೆಯುತ್ತಿದೆ. ಸುದೀರ್ಘ ಇತಿಹಾಸದಲ್ಲಿ ಬಸವಸಮಿತಿ ಸಾಕಷ್ಟು ಕೆಲಸಗಳನ್ನು ಮಾಡಿದೆ ಎಂದು ಮಾಹಿತಿ ನೀಡಿದರು. ಇದೇ ಮೊದಲ ಬಾರಿಗೆ ರಾಷ್ಟ್ರಮಟ್ಟದಲ್ಲಿ ಬಸವ ಜಯಂತಿ ಆಚರಣೆ ನಡೆಯುತ್ತಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳಿಂದಲೂ ಬಸವಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.

ವಚನ ಕಾಲದ ಆದರ್ಶಮಯ ಸಾಹಿತ್ಯ ಮತ್ತು ಬಸವಣ್ಣ ಅವರ ತತ್ವಗಳು ನಿಧಾನವಾಗಿ ದೇಶದ ಗಮನ ಸೆಳೆಯುತ್ತಿವೆ. ಮಹಾರಾಷ್ಟ್ರ ಸರ್ಕಾರ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸುವಂತೆ ಆದೇಶಿಸಿದೆ.ಕೇರಳ ಸರ್ಕಾರ 7ನೆ ತರಗತಿಗೆ ಬಸವಣ್ಣ ಅವರ ಜೀವನಚರಿತ್ರೆಯ ಪಠ್ಯಕ್ರಮ ಅಳವಡಿಸಿದೆ. ಹಂತಹಂತವಾಗಿ ಬಸವ ತತ್ವ ವ್ಯಾಪಿಸುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಬಸವ ಸಮಿತಿಯ ಉಪಾಧ್ಯಕ್ಷರಾದ ಹನುಮಂತರೆಡ್ಡಿ ಮುದ್ನಾಳ್, ಪ್ರಧಾನಕಾರ್ಯದರ್ಶಿ ಎಚ್.ಎಸ್.ದೇವಾಡಿಗ, ಖಜಾಂಚಿ ಡಿ.ಎನ್.ಶ್ರೀಧರ್, ಕಾರ್ಯಕಾರಿ ಸಮಿತಿಯ ಕೃಷ್ಣರಾಜು ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ :

‘ಸರ್ಕಾರಿ ಕಚೇರಿಗಳಲ್ಲಿ ಜಗಜ್ಯೋತಿ ಬಸವಣ್ಣನವರ ಭಾವಚಿತ್ರ ಅಳವಡಿಸುವ ಸಂಬಂಧ ಸುತ್ತೋಲೆ ಹೊರಡಿಸಲು ಸೂಚಿಸಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇಲ್ಲಿನ ಮಹದೇವ ಪ್ರಸಾದ್ ನಗರದಲ್ಲಿ ಬುಧವಾರ ನಡೆದ ಮತದಾರರಿಗೆ ಕೃತಜ್ಞತಾ ಸಮರ್ಪಣಾ ಸಲ್ಲಿಕೆ ಸಮಾವೇಶದಲ್ಲಿ ಅವರು ಮಾತನಾಡಿದರು.  ನಿನ್ನೆಯಷ್ಟೆ ಮಹಾರಾಷ್ಟ್ರ ಸರ್ಕಾರವು ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಅಳವಡಿಸುವ ಸಂಬಂಧ ಆದೇಶ ಹೊರಡಿಸಿತ್ತು. ಇದರಿಂದ ಬಸವಣ್ಣನ ತವರು ರಾಜ್ಯವಾದ ಕರ್ನಾಟಕದಲ್ಲೂ ಇಂಥ ಕ್ರಮಕೈಗೊಳ್ಳಬೇಕು ಎಂಬ ಕೂಗು ವಿವಿಧ ಸ್ತರಗಳಿಂದ ಕೇಳಿ ಬಂದಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin