ರಾಷ್ಟ್ರೀಯ ಆಯ್ಕೆದಾರರ ಹುದ್ದೆಗೆ ಮೊಂಗಿಯಾ, ವೆಂಕಟೇಶ್‌ಪ್ರಸಾದ್ ಅರ್ಜಿ

ಈ ಸುದ್ದಿಯನ್ನು ಶೇರ್ ಮಾಡಿ

Venkatesh-Prasad
ಮುಂಬೈ,ಸೆ.15- ಬಿಸಿಸಿಐ ಭಾರತ ತಂಡದ ಹಿರಿಯರ, ಕಿರಿಯರ ಹಾಗೂ ಮಹಿಳೆಯರ ತಂಡಗಳನ್ನು ಆಯ್ಕೆ ಮಾಡುವ ರಾಷ್ಟ್ರೀಯ ಆಯ್ಕೆದಾರರ ಹುದ್ದೆಗಳಿಗೆ ಇದೇ ಮೊದಲ ಬಾರಿಗೆ ಜಾಹೀರಾತಿನ ಮೂಲಕ ಅರ್ಜಿಗಳನ್ನು ಆಹ್ವಾನಿಸಿದ್ದು ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿನ್ನೆ ಸಂಜೆಯಿಂದ ಆರಂಭ ಗೊಂಡ ಈ ಪ್ರಕ್ರಿಯೆಗೆ ಭಾರತ ತಂಡದ ಹಿರಿಯ ಆಟಗಾರರಾದ ನಯನ್‌ಮೊಂಗಿಯಾ, ಸಮೀರ್ ದಿಗೆ, ನಿಲೇಶ್ ಕುಲಕರ್ಣಿ ಅರ್ಜಿ ಯನ್ನು ಹಾಕಿದ್ದು ಕನ್ನಡಿಗ ವೆಂಕಟೇಶ್ ಪ್ರಸಾದ್ ಕೂಡ ಅಂತಿಮ ಕ್ಷಣದಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ. ಇವರಲ್ಲದೆ ಸ್ಥಳೀಯ ಕ್ರಿಕೆಟ್ ಅಂಗಳದಲ್ಲಿ ಸಾಕಷ್ಟು ಹೆಸರು ಮಾಡಿರುವ ಶಿಶಿರ್ ಅತ್ತಂಗಡಿ, ಸಂತನೂ ಸುಗ್ವೇಕರ್, ರಾಬಿನ್‌ಸಿಂಗ್ (ಜೂ), ಪ್ರೀತಂ ಗಾಂ ಕೂಡ ಆಯ್ಕೆ ಮಂಡಳಿಯ ಹುದ್ದೆಗಳಿಗಾಗಿ ಅರ್ಜಿ ಹಾಕಿದ್ದಾರೆ.

ಸದಸ್ಯತ್ವ ಸ್ಥಾನಕ್ಕೆ ಅರ್ಜಿ ಸಲ್ಲಿಸುವವರು 60 ವರ್ಷಗಳ ವಯೋಮಿತಿ ಮೀರಬಾರದು, ಕ್ರಿಕೆಟ್ ಜೀವನದಿಂದ ನಿವೃತ್ತಿ ಹೊಂದಿ 5 ವರ್ಷಗಳಾಗಿರಬೇಕು ಹಾಗೂ ಐಪಿಎಲ್‌ನೊಂದಿಗೆ ಯಾವುದೇ ಸಂಪರ್ಕ ಹೊಂದಿರಬಾರದು ಎಂಬ ನಿಯಮವನ್ನು ಹೊರಡಿಸಿತ್ತು.  ಈಗ ಅರ್ಜಿ ಸಲ್ಲಿಸಿರುವವರ ಪೈಕಿ 46 ವರ್ಷದ ನಯನ್‌ಮೊಂಗಿಯಾ ಬರೋಡಾದ ಹಿರಿಯರ ಹಾಗೂ ಕಿರಿಯರ ವಿಭಾಗದ ಆಯ್ಕೆ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದು ಈಗ ಭಾರತ ತಂಡದ ಆಯ್ಕೆಗಾರ ರಾಗುವುದು ಬಹುತೇಕ ಖಚಿತ ವಾಗಿದೆ. ಮೊಂಗಿಯಾ ತಮ್ಮ ಕ್ರಿಕೆಟ್ ಜೀವನದಲ್ಲಿ 40 ಟೆಸ್ಟ್ ಹಾಗೂ 140 ಏಕದಿನ ಪಂದ್ಯಗಳನ್ನಾಡಿರುವ ಅನುಭವವನ್ನು ಹೊಂದಿದ್ದಾರೆ. ಇನ್ನು ಆಫ್‌ಸ್ಪಿನ್ನರ್ ಕುಲಕರ್ಣಿ 3 ಟೆಸ್ಟ್ ಹಾಗೂ 10 ಏಕದಿನ ಪಂದ್ಯಗಳು, ಸಮೀರ್ ದಿಘೆ 6 ಟೆಸ್ಟ್ ಹಾಗೂ 23 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಸಿದ್ದರು.

ಆದರೆ ನಯನ್‌ಮೊಂಗಿಯಾಗೆ ಉತ್ತಮ ಪೈಪೋಟಿ ನೀಡಿರುವ ಕನ್ನಡಿಗ ಹಾಗೂ ಮಾಜಿ ವೇಗಿ ವೆಂಕಟೇಶ್‌ಪ್ರಸಾದ್ ಅವರು 33 ಟೆಸ್ಟ್ ಹಾಗೂ 161 ಏಕದಿನ ಪಂದ್ಯಗಳನ್ನು ಆಡಿರುವ ಅನುಭವದ ಜೊತೆಗೆ ಪ್ರಸ್ತುತ ಭಾರತದ ತಂಡದ ಕಿರಿಯರ ತಂಡದ ಮುಖ್ಯ ಆಯ್ಕೆಗಾರರಾಗಿದ್ದಾರೆ.  ಆದ್ದರಿಂದ ಭಾರತ ತಂಡದ ಮುಖ್ಯ ಆಯ್ಕೆಗಾರರ ಹುದ್ದೆಗೆ ನಯನ್‌ಮೊಂಗಿಯಾ ಹಾಗೂ ವೆಂಕಟೇಶ್‌ಪ್ರಸಾದ್ ನಡುವೆ ತೀವ್ರ ಪೈಪೋಟಿ ಉಂಟಾಗಿದ್ದು ಅದೃಷ್ಟ ಯಾರಿಗೆ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

► Follow us on –  Facebook / Twitter  / Google+

Facebook Comments

Sri Raghav

Admin