ರಾಷ್ಟ್ರೀಯ ಉದ್ಯೋಗ ನೀತಿಗೆ ಬರಗೂರು ಸಲಹೆ
ರಾಯಚೂರು, (ಶಾಂತರಸ ಪ್ರಧಾನ ವೇದಿಕೆ) ಡಿ.2- ಶಿಕ್ಷಣ ಕ್ಷೇತ್ರದ ನೇಮಕಾತಿ ಸೇರಿದಂತೆ ಎಲ್ಲ ಇಲಾಖೆಗಳ ಅಗತ್ಯ ಹಾಗೂ ಖಾಲಿ ಹುದ್ದೆಗಳನ್ನು ಗುರುತಿಸಿ ಏಕಕಾಲಕ್ಕೆ ಭರ್ತಿ ಮಾಡುವ ಸಮಾನ ನೀತಿಯನ್ನು ಅನುಷ್ಠಾನಗೊಳಿಸುವುದು ಸರ್ಕಾರದ ಅಗತ್ಯ ಮತ್ತು ಆದ್ಯತೆಯಾಗಬೇಕು ಎಂದು 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ. ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂ ಮಾಡುವುದಿರಲಿ, ಬೇರೆ ರಾಜ್ಯಗಳಲ್ಲಿ ಕೊಡುತ್ತಿರುವಷ್ಟು ಗೌರವಧನವನ್ನೂ ಕೊಡುತ್ತಿಲ್ಲ.
ಅಗತ್ಯವಾದಷ್ಟು ಹುದ್ದೆಗಳನ್ನು ಸೃಷ್ಟಿಮಾಡಿ ಸೇವಾವಧಿ ಮತ್ತು ಅರ್ಹತೆಯ ಆಧಾರದ ಮೇಲೆ ಅತಿಥಿ ಉಪನ್ಯಾಸಕರಿಗೆ ಆದ್ಯತೆ ನೀಡಿ ಹೊಸ ನಿರುದ್ಯೋಗಿಗಳ ಆಯ್ಕೆಗೂ ಅವಕಾಶ ನೀಡುವ ಹೊಸ ನಿಯಮಾವಳಿ ರೂಪಿಸಲು ಸಾಧ್ಯ. ಈ ರೀತಿ ಮಾಡದೆ ಹೋದರೆ ಶಿಕ್ಷಣಕ್ಷೇತ್ರವನ್ನು ಶೋಷಣೆ ಕೇಂದ್ರವಾಗಿಸಿದ ಸತ್ಕೀರ್ತಿ ಸರ್ಕಾರಕ್ಕೆ ಸಿಗುತ್ತದೆ ಎಂದು ಅವರು ತಮ್ಮ ಭಾಷಣದಲ್ಲಿ ಎಚ್ಚರಿಕೆ ನೀಡಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ದೀರ್ಘಕಾಲದಿಂದ ಕೆಲಸ ಮಾಡುತ್ತಿರುವವರ ಪಟ್ಟಿಯನ್ನು ತಯಾರಿಸಿ ಒಟ್ಟಿಗೇ ಬದುಕಿನ ಭದ್ರತೆ ಕೊಡುವ ಉದ್ಯೋಗ ನೀತಿಗೆ ಸರ್ಕಾರ ಮುಂದಾಗಬೇಕು, ಕಡೆ ಪಕ್ಷ, ಒಂದು ಉದ್ಯೋಗ ಪರಿಶೀಲನಾ ಸಮಿತಿ ನೇಮಿಸಿ ಸಮಸ್ತ ವಿವರಗಳೊಂದಿಗೆ ನಿರ್ದಿಷ್ಟ ಪರಿಹಾರಗಳನ್ನು ಪಡೆದು ಕಾರ್ಯ ಪ್ರವೃತ್ತರಾಗಬೇಕು. ಕನ್ನಡಿಗರ ಅನಿಶ್ಚಿತ ವ್ಯಕ್ತಿ ಬದುಕಿಗೆ ಕೊನೆ ಹಾಡಬೇಕು. ಇದು ಮಾನವೀಯ ಸರ್ಕಾರವೊಂದರ ನೈತಿಕ ಜವಾಬ್ದಾರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಉದ್ಯೋಗಕ್ಕೆ ಸಂಬಂಧಿಸಿದಂತೆ ಒಂದು ರಾಷ್ಟ್ರೀಯ ನೀತಿಯ ಅಗತ್ಯವಿದೆ. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಸ್ಥಳೀಯ ಅರ್ಹ ರಿಗೆ ಆದ್ಯತೆಯ ಮೇಲೆ ಉದ್ಯೋಗ ನೀಡುವುದು, ಆಯಾ ರಾಜ್ಯ ಭಾಷೆಯ ಕಲಿಕೆಯನ್ನು ಉದ್ಯೋಗ ನೀಡಿಕೆಗೆ ಕಡ್ಡಾಯ ಮಾಡುವುದು ಈ ರಾಷ್ಟ್ರೀಯ ಉದ್ಯೋಗ ನೀತಿಯ ಕೇಂದ್ರವಾಗಬೇಕು ಎಂದು ಅವರು ಸಲಹೆ ಮಾಡಿದ್ದ್ದಾರೆ. ಖಾಸಗಿ ವಲಯದಲ್ಲಿ ಸ್ಥಳೀಯ ಅರ್ಹರಿಗೆ ಆದ್ಯತೆ ಕೊಡುವುದರ ಜೊತೆಗೆ ಸಂವಿಧಾನದತ್ತ ಮೀಸಲಾತಿಯನ್ನೂ ಅರ್ಹತೆಯ ಆಧಾರದ ಮೇಲೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
> ಅನ್ನದಾತರ ಆತ್ಮಹತ್ಯೆಗೆ ಮರುಗಿದ ಸಮ್ಮೇಳನಾಧ್ಯಕ್ಷರು
ರಾಯಚೂರು, (ಶಾಂತರಸ ಪ್ರಧಾನ ವೇದಿಕೆ)ಡಿ.2-ಕನ್ನಡ ಸಾಹಿತ್ಯವು ರೈತರ ಸಮಸ್ಯೆಗಳಿಗೂ ಸ್ಪಂದಿಸಿ, ರೈತಸಂವೇದನೆಯನ್ನು ಒಳಗೊಂಡಿದೆ. ಅನ್ನದಾತರೆಂದು ಕರೆಸಿಕೊಳ್ಳುವ ರೈತರ ಸಮಸ್ಯೆಗಳು ಇಂದು ಸಂಕೀರ್ಣ ರೂಪತಾಳುತ್ತಿವೆ. ರೈತರು ತತ್ತರಿಸಿದ ಬದುಕಿಗೆ ಬಲಿಯಾಗುತ್ತಿದ್ದಾರೆ. ಸಾವಿರಾರು ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು 82ನೇ ಅಖಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಮಮ್ಮಲ ಮರುಗಿದ್ದಾರೆ. ಸಮ್ಮೇಳಾಧ್ಯಕ್ಷ ಭಾಷಣ ಮಾಡಿದ ಅವರು, ಕನ್ನಡ ಸಾಹಿತ್ಯ ಸಂವೇದನೆ ಯಾವತ್ತೂ ರೈತಪರವಾಗಿದೆ. ಕುವೆಂಪು ಅವರ ನೇಗಿಲಯೋಗಿ ಮತ್ತು ಬೇಂದ್ರೆಯವರ ಭೂಮಿತಾಯಿಯ ಚೊಚ್ಚಲ ಮಗ ಕವಿತೆಗಳನ್ನು ಉಲ್ಲೇಖಿಸಿದರು.
1952ರಲ್ಲಿ ಕೇಂದ್ರ ಸರ್ಕಾರವು ತನ್ನ ಬಜೆಟ್ನಲ್ಲಿ ಶೇ. 12.5ರಷ್ಟು ಹಣವನ್ನು ಕೃಷಿಗಾಗಿ ಒದಗಿಸಿತ್ತು. 2015ರಲ್ಲಿ ಈಗಿನ ಕೇಂದ್ರ ಸರ್ಕಾರವು ತನ್ನ ಬಜೆಟ್ನಲ್ಲಿ ಶೇ. 3.7ರಷ್ಟು ಹಣವನ್ನು ಒದಗಿಸಿದೆ. ಮೊದಲನೇ ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿಗೆ 37.3ರಷ್ಟು ಪಾಲು ಒದಗಿಸಿತ್ತು. ಹತ್ತನೇ ಪಂಚವಾರ್ಷಿಕ ಯೋಜನೆಯ ವೇಳೆಗೆ ಇದು ಶೇ. 10.6ಕ್ಕೆ ಇಳಿದಿದೆ. ನಬಾರ್ಡ್ ಮತ್ತು ರಿಸರ್ವ್ ಬ್ಯಾಂಕ್ ವರದಿಯ ಪ್ರಕಾರ ಶೇ. 69ರಷ್ಟು ಸಣ್ಣ ರೈತರಿಗೆ ಮತ್ತು ಶೇ. 87ರಷ್ಟ್ಟು ಅತಿ ಸಣ್ಣ ರೈತರಿಗೆ ಸರ್ಕಾರಿ ಸಾಲ ಸಿಗುತ್ತಿಲ್ಲ. ರೈತರು ಹೆಚ್ಚಿನ ಬಡ್ಡಿ ತೆತ್ತು ಖಾಸಗಿ ಸಾಲ ನೀಡಿಕೆದಾರರಿಂದ ಸಾಲ ಪಡೆಯುತ್ತಾರೆ ಎಂದು ಡಾ. ಬರಗೂರು ಅಂಕಿ-ಅಂಶ ನೀಡಿದ್ದಾರೆ.
ಇದೇ ವರದಿ ಪ್ರಕಾರ ದೇಶದಲ್ಲಿ ಶೇ. 70ರಷ್ಟು ಖಾಸಗಿ ಸಾಲ ನೀಡಿಕೆದಾರರು ಇದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರು ಯಾರೆಂದು ನೋಡಿ; ಉತ್ತರ ಸ್ಪಷ್ಟ. ಸಣ್ಣರೈತರು ಮತ್ತು ಅತಿ ಸಣ್ಣ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನೂರಾರು ಎಕರೆಯ ಒಡೆಯರಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ರೈತರಿಗೆ ಆಗುತ್ತಿರುವ ಅನ್ಯಾಯದ ಹಿಂದೆ ನಮ್ಮ ದೇಶ ಅಳವಡಿಸಿಕೊಂಡ ಅಮೆರಿಕ ಆರ್ಥಿಕ ನೀತಿಯ ಪಾಲು ಸಾಕಷ್ಟಿದೆ ಎಂದು ಉದಾಹರಣೆ ನೀಡಿದರು.
ಕೃಷಿಗೆ ಸಬ್ಸಿಡಿ ಕಡಿತದ ನೋಟ ಬಂದದ್ದು ಅಲ್ಲಿಂದಲೇ. ಆದರೆ ಅದೇ ಅಮೇರಿಕದಲ್ಲಿ ಶೇ. 5ರಷ್ಟಿರುವ ರೈತರಿಗೆ ಒಟ್ಟು ಶೇ. 26ರಷ್ಟು ಸಬ್ಸಿಡಿ ಸಿಗುತ್ತದೆ. ಶೇ. 60ಕ್ಕೂ ಹೆಚ್ಚು ರೈತರಿರುವ ನಮ್ಮ ದೇಶದಲ್ಲಿ ಶೇ. 2.33 ರಷ್ಟು ಸಬ್ಸಿಡಿ ಕೊಡಲಾಗುತ್ತದೆ. ಎಲ್ಲಕ್ಕೂ ಅಮೆರಿಕಾದ ಕಡೆ ನೋಡುವ ನಮ್ಮ ಸರ್ಕಾರಗಳು ರೈತರ ಸಬ್ಸಿಡಿ ವಿಷಯದಲ್ಲಿ ಅದೇ ಅಮೆರಿಕವನ್ನು ಯಾಕೆ ಅನುಸರಿಸುತ್ತಿಲ್ಲ? ವಿಶ್ವಬ್ಯಾಂಕ್ ಹೆಚ್ಚು ಸಬ್ಸಿಡಿ ಕೊಡುವುದನ್ನು ಒಪ್ಪುತ್ತಿಲ್ಲ. ಇದೇ ಜಾಗತೀ ಕರಣದ ರಹಸ್ಯ ಎಂದು ಅವರು ವಾಸ್ತವಾಂಶವನ್ನು ಬಿಚ್ಚಿಟ್ಟರು.
> ಸಾಮಾಜಿಕ ಪಿಡುಗಿನ ಮೇಲೆ ಸರ್ಜಿಕಲ್ ದಾಳಿ ಮಾಡಿ
ಶಾಂತರಸ ಪ್ರಧಾನ ವೇದಿಕೆ, ರಾಯಚೂರು, ಡಿ.2- ಇಂದು ಧರ್ಮ-ಧರ್ಮಗಳ ನಡುವೆ ತಿಕ್ಕಾಟ ನಡೆಯುತ್ತಿದೆ. ಜಗತ್ತಿನಲ್ಲಿ ಭಯೋತ್ಪಾದನೆ ಮತ್ತು ಯುದ್ಧೋತ್ಪಾದನೆಗಳು ಒಟ್ಟಿಗೆ ವಿಜೃಂಭಿಸುತ್ತಿವೆ ಎಂದು 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪ ನೊಂದು ನುಡಿದಿದ್ದಾರೆ. ನುಡಿಹಬ್ಬವಾದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಷಣ ಮಾಡಿದ ಅವರು ಜಾತಿವಾದ, ಕೋಮುವಾದ, ಲಿಂಗತ್ವ ಅಸಮಾನತೆ, ಆರ್ಥಿಕ ಅಸಮಾನತೆ – ಮುಂತಾದ ಸಾಮಾಜಿಕ ಸರ್ಜಿಕಲ್ ದಾಳಿಗಳನ್ನು ವಿರೋಧಿಸಿ, ಜಾತಿ ವಿನಾಶ, ಧಾರ್ಮಿಕ ಸೌಹಾರ್ದ, ಮಹಿಳಾ ನ್ಯಾಯ, ಸಾಮಾಜಿಕ ನ್ಯಾಯ ಮತ್ತು ಸಮಾನತೆಗಳನ್ನು ಸ್ಥಾಪಿಸುವುದು ಸರ್ಕಾರ ಹಾಗೂ ಸಮಾಜದ ಜವಾಬ್ದಾರಿಯಾಗಬೇಕು ಎಂದು ಹೇಳಿದರು.
ಕೋಮುವಾದದ ವಿರೋಧವೆಂದರೆ ಎಲ್ಲ ಧರ್ಮಗಳ ಮೂಲಭೂತವಾದದ ವಿರೋಧ. ಜನರನ್ನು ಒಡೆಯುವುದಕ್ಕಾಗಿ ಧರ್ಮ, ದೇವರುಗಳನ್ನು ಬಳಸಿಕೊಳ್ಳುವ ಸಂಕುಚಿತ ಧಾರ್ಮಿಕ ಸರ್ಜಿಕಲ್ ದಾಳಿಗಳನ್ನು ನಾವು ಒಟ್ಟಾಗಿ ಹಿಮ್ಮೆಟ್ಟಿಸಬೇಕು ಎಂದು ಕರೆ ನೀಡಿದರು.
ಜನ ಸಾಮಾನ್ಯರ ಸಂಕಷ್ಟದ ಕಾಲವಿದು. ರೈತರು, ಮಹಿಳೆಯರು, ದಲಿತರು, ಕಾರ್ಮಿಕರು, ಎಲ್ಲ ಬಡವರು ವಿವಿಧ ಪ್ರಮಾಣದ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಭಯೋತ್ಪಾದನೆ, ಯುದ್ಧೋತ್ಪಾದನೆಗಳಷ್ಟೇ ಹಿಂಸೆಯಾಗದೆ ನಮ್ಮ ಸಾಮಾಜಿಕ ವ್ಯವಸ್ಥೆಯೊಳಗೇ ಹಿಂಸೆ ಅಂತರ್ಗತವಾಗಿ ಬಿಟ್ಟಿದೆ ಎಂದು ವಿಷಾದಿಸಿದರು. ದೀನ ದಲಿತರ, ಬಡ ಬಗ್ಗರ, ಮಹಿಳೆಯರ, ಮಕ್ಕಳ, ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವುದು ಆದ್ಯತೆಯಾಗಬೇಕು. ಇಂಥ ಆಶಯವು ಕನ್ನಡ ಸಾಹಿತ್ಯ ಸಂವೇದನೆಯ ಭಾಗವಾಗಿದೆ ಎಂದು ಅವರು ಹೇಳಿದರು.
ಇಂದು ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರದ ಪ್ರಕರಣಗಳು ಕ್ರೌರ್ಯದ ಕತೆಗಳಾಗಿ ಕಾಡುತ್ತಿವೆ. ಕಣ್ಣೀರ ಕವಿತೆಗಳು ಎದುರು ನಿಂತಿವೆ. ಅಸಹಾಯಕತೆ ಆಕ್ರೋಶಗಳೊಂದಾದ ವೈರುಧ್ಯಗಳು ಪ್ರಶ್ನಿಸುತ್ತಿವೆ. ಮಹಿಳೆಯುರ ಮೇಲಿನ ದೌರ್ಜನ್ಯ, ಹಾಗೂ ಅತ್ಯಾಚಾರಗಳೆಂಬ ಸರ್ಜಿಕಲ್ ದಾಳಿಗೆ ವಿರುದ್ಧವಾಗಿ ಕನ್ನಡ ಮತ್ತು ಕರ್ನಾಟಕದ ಸಂವೇದನೆ ನಿಲ್ಲಬೇಕು ಎಂದು ಅವರು ಕರೆ ನೀಡಿದರು. ನಾವು ದೇಶದ ಹೊರಗೆ ನಡೆಯುವ ಸೈನಿಕ ಸರ್ಜಿಕಲ್ ದಾಳಿಗಳನ್ನು ಬೆಂಬಲಿಸೋಣ. ದೇಶದೊಳಗಿನ ಸಾಮಾಜಿಕ ಪಿಡುಗಿನ ಸರ್ಜಿಕಲ್ ದಾಳಿಗಳನ್ನು ಸೋಲಿಸೋಣ. ಆರ್ಥಿಕ ಸರ್ಜಿಕಲ್ ದಾಳಿಗಳನ್ನು ಹತ್ತಿಕ್ಕೋಣ ಎಂದು ಡಾ. ಬರಗೂರು ಸಲಹೆ ಮಾಡಿದರು.
> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… : Eesanje News 24/7 ನ್ಯೂಸ್ ಆ್ಯಪ್ – Click Here to Download