ರಾಹುಲ್‍ ಜನಾಶೀರ್ವಾದ ಯಾತ್ರೆಗೆ ಗುಜರಾತ್ ನಿಂದ ಬಂತು ಹೈ ಟೆಕ್ ಬಸ್

ಈ ಸುದ್ದಿಯನ್ನು ಶೇರ್ ಮಾಡಿ

Rahul-Bus

ಬಳ್ಳಾರಿ, ಫೆ.10- ಇಂದಿನಿಂದ ಆರಂಭವಾಗಿರುವ ರಾಹುಲ್‍ಗಾಂಧಿ ಅವರ ಜನಾಶೀರ್ವಾದ ಯಾತ್ರೆಗೆ ಗುಜರಾತ್‍ನಲ್ಲಿ ಬಳಸಿದ್ದ ಅತ್ಯಾಧುನಿಕವಾದ ಬಸ್ಸನ್ನೇ ಬಳಕೆ ಮಾಡಲಾಗುತ್ತಿದೆ.  ಕಳೆದ ಎರಡು ತಿಂಗಳ ಹಿಂದೆ ಗುಜರಾತ್ ವಿಧಾನಾಸಭೆ ಚುನಾವಣೆಗೆ ರಾಹುಲ್‍ಗಾಂಧಿ ಅವರು ಇದೇ ಬಸ್ ಬಳಸಿ ಪ್ರವಾಸ ಮಾಡಿದ್ದರು. ಆ ಬಸನ್ನು ಗುಜರಾತ್‍ನಿಂದ ಇಲ್ಲಿಗೆ ತರಲಾಗಿದೆ.   12 ಸೀಟುಗಳ ಅತ್ಯಾಧುನಿಕವಾದ ಈ ಬಸ್ ವಿಶ್ರಾಂತಿಗಾಗಿ ಒಂದು ಹಾಸಿಗೆ ಹಾಗೂ ಇ -ಟಾಯ್ಲೆಟ್‍ಅನ್ನು ಹೊಂದಿದೆ. ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲು ಅನುಕೂಲವಾಗುವಂತೆ ಹೈಡ್ರೋಲಿಕ್ ವೇದಿಕೆಯನ್ನು ಹೊಂದಿದೆ.

ಸಿದ್ದರಾಮಯ್ಯ, ಪರಮೇಶ್ವರ್, ವೇಣುಗೋಪಾಲ್ ಸೇರಿದಂತೆ ಆಯ್ದ ಮುಖಂಡರಿಗೆ ಮಾತ್ರ ಈ ಬಸ್‍ನಲ್ಲಿ ಕೂರಲು ಅವಕಾಶ ನೀಡಲಾಗುತ್ತಿದೆ.
ಮೊದಲ ಹಂತದ ಜನಾಶೀರ್ವಾದ ಯಾತ್ರೆ ಇಂದಿನಿಂದ ಶುರುವಾಗಿ ನಾಲ್ಕು ದಿನಗಳ ಕಾಲ ಹೈದಾರಾಬಾದ್ ಕರ್ನಾಟಕ ಭಾಗಗಳಲ್ಲಿ ನಡೆಯಲಿವೆ. ಮೊದಲ ದಿನ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ರಾಹುಲ್ ಪ್ರವಾಸ ಮಾಡಿ ಮಧ್ಯಾಹ್ನ ಹೊಸಪೇಟೆಯ ಮುನ್ಸಿಪಲ್ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ರಾಹುಲ್‍ಗಾಂಧಿ ಮಾತನಾಡಿದರು.

ಅಲ್ಲಿಂದ ಕೊಪ್ಪಳ ಜಿಲ್ಲೆಯ ಮುನಿರಾಬಾದ್‍ಗೆ ತೆರಳಿ ಅಲ್ಲಿ ಜಿಲ್ಲಾ ಮುಖಂಡರ ಜತೆ ಚರ್ಚೆ ನಡೆಸಿದರು. ನಂತರ ಆ ಭಾಗದಲ್ಲೇ ಅತ್ಯಂತ ಪ್ರಖ್ಯಾತವಾಗಿರುವ ಹುಲಿಗಮ್ಮ ದೇವಸ್ಥಾನಕ್ಕೆ ತೆರಳಿದರು. ಸಂಜೆ ಮತ್ತೆ ಮತ್ತೊಂದು ಸುತ್ತು ಜಿಲ್ಲಾ ಮುಖಂಡರ ಜತೆ ಚರ್ಚೆ ನಡೆಸಿ ನಂತರ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದರು. ಕೊಪ್ಪಳದ ಕಾರ್ಪೊರೇಷನ್  ಮೈದಾನದಲ್ಲಿ ಆಯ್ದ ಮುಖಂಡ ಜತೆ ಸಮಾಲೋಚನೆ ಸಭೆ ನಡೆಸಿದರು. ಬಳಿಕ ಕುಕ್ಕನೂರಿನಲ್ಲಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಭಾಷಣ ಮಾಡಿದರು.

ರಾತ್ರಿ ಕುಕ್ಕನೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ತಂಗಲಿರುವ ರಾಹುಲ್‍ಗಾಂಧಿ ಕೊಪ್ಪಳ ಜಿಲ್ಲೆಯ ಕುಷ್ಟಗಿ, ಗಂಗಾವತಿ, ಕಾರಟಗಿ ಮೂಲಕ ಹಾದಿಯುದ್ದಕ್ಕೂ ಜನಸಾಮಾನ್ಯರನ್ನು ಮಾತನಾಡಿಸಲಿದ್ದಾರೆ.  ಸಂಜೆ 4 ಗಂಟೆಗೆ ರಾಯಚೂರಿನ ಸಿಂಧನೂರಿನಲ್ಲಿ ಯುವ ಕಾಂಗ್ರೆಸ್ ಮುಖಂಡರ ಜತೆ ಮಾತುಕತೆ ನಡೆಸಿ, 6 ಗಂಟೆಗೆ ರೈತರ ಜತೆ ಚರ್ಚೆ ನಡೆಸಲಿದ್ದಾರೆ. ನಂತರ ಸಿಂಧನೂರಿಗೆ ರಾಹುಲ್‍ಗಾಂಧಿ ತೆರಳಲಿದ್ದಾರೆ. ಭಾನುವಾರ ರಾಯಚೂರು ಮತ್ತು ಕೊಪ್ಪಳದಲ್ಲಿ ಹಾಗೂ ಸೋಮವಾರ ಬೆಳಗ್ಗೆ ಯಾದಗಿರಿ, ಕಲಬುರ್ಗಿ ಜಿಲ್ಲೆಗಳಲ್ಲಿ ಪ್ರವಾಸಕೈಗೊಳ್ಳಲಿದ್ದು, ರಾಯಚೂರಿನ ಗುಂಜು ಸರ್ಕಲ್, ಕಲ್ಮಲಾಲ್, ಗಬ್ಬೂರು, ದೇವದುರ್ಗದಲ್ಲಿ ಯಾತ್ರೆ ಮುಂದುವರೆಸಿ ಯಾದಗಿರಿಗೆ ತೆರಳಲಿದ್ದಾರೆ.

ಯಾದಗಿರಿಯ ಶಹಪುರ ನಗರದಲ್ಲಿ ಎರಡು ಸಭೆಗಳನ್ನು ನಡೆಸಿ ಕಲಬುರ್ಗಿಗೆ ತೆರಳಲಿದ್ದು, ಅಲ್ಲಿ ಜೇವರ್ಗಿಯ ಕ್ರೀಡಾ ಮೈದಾನದಲ್ಲಿ ಮತ್ತು ಕಲಬುರ್ಗಿಯಲ್ಲಿ ಬೃಹತ್ ಸಾರ್ವಜನಿಕ ಸಮಾವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಂಜೆ 6.30ಕ್ಕೆ ಕಲಬುರ್ಗಿಯ ಪ್ರಖ್ಯಾತ ಖ್ವಾಜಬಂದೇ ನವಾಜ್‍ದರ್ಗಾಕ್ಕೆ ಭೇಟಿ ನೀಡಲಿದ್ದಾರೆ. ರಾತ್ರಿ ಕಲಬುರ್ಗಿಯಲ್ಲಿ ತಂಗಲಿದ್ದು, ಮರುದಿನ ಮಂಗಳವಾರ ಇತ್ತೀಚೆಗೆ ನಿಧನರಾದ ಮಾಜಿ ಸಚಿವ ಹಾಗೂ ಶಾಸಕ ಖಮರುಲ್ಲಾ ಇಸ್ಲಾಮ್ ಅವರ ಮನೆಗೆ ಭೇಟಿ ನೀಡಲಿದ್ದಾರೆ.

ಗುಲ್ಬರ್ಗಾದ ಎಚ್‍ಕೆಇಎಸ್ ಆಡಿಟೋರಿಯಂ ಸಭಾಂಗಣದಲ್ಲಿ ವೃತ್ತಿಪರರು ಹಾಗೂ ವಾಣಿಜ್ಯೋದ್ಯಮಿಗಳ ಜತೆ ಸಮಾಲೋಚನೆ ನಡೆಸಲಿದ್ದಾರೆ. ಅಲ್ಲಿಂದ ಬೀದರ್‍ಗೆ ತೆರಳಲಿದ್ದು, ಬಸವ ಕಲ್ಯಾಣದ ಅನುಭವ ಮಂಟಪಕ್ಕೆ ಭೇಟಿ ನೀಡಲಿದ್ದಾರೆ. ಮೊದಲ ಹಂತದ ಯಾತ್ರೆ ಇದಾಗಿದ್ದು, ಇದನ್ನು ಯಶಸ್ವಿಗೊಳಿಸಲು ಕಾಂಗ್ರೆಸ್ ಪಣತೊಟ್ಟು ನಿಂತಿದೆ. ಹಿರಿಯ ನಾಯಕರು ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ರಾಹುಲ್‍ಯಾತ್ರೆಗೆ ಶ್ರಮಿಸುತ್ತಿದ್ದಾರೆ. ರಾಹುಲ್‍ಗಾಂಧಿ ಹಾಗೂ ಸಿದ್ದರಾಮಯ್ಯ ಸರ್ಕಾರಗಳನ್ನು ಹೊಗಳುವ ಹಾಡುಗಳನ್ನು ಸಿದ್ದಪಡಿಸಲಾಗಿದ್ದು, ಕಾರ್ಯಕ್ರಮದುದ್ದಕ್ಕೂ ಪ್ರಚಾರ ಮಾಡಲಾಗುತ್ತಿದೆ.

ಮೊದಲ ಹಂತದ ಜನಾಶೀರ್ವಾದ ರ್ಯಾಲಿಯಲ್ಲಿ ಬಸ್‍ನಲ್ಲೇ ಸಂಚರಿಸಲಿದ್ದು, ಜನರನ್ನು ಹತ್ತಿರದಿಂದ ಭೇಟಿ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ವೇದಿಕೆ ಕಾರ್ಯಕ್ರಮಗಳ ಭಾಷಣಕ್ಕೆ ಟಾಂಗ್ ನೀಡಲಿದ್ದಾರೆ. ನಾಲ್ಕು ದಿನಗಳ ರಾಹುಲ್‍ಗಾಂಧಿ ಪ್ರವಾಸ ಮುಗಿಯುವ ಬೆನ್ನಲ್ಲೇ ಮುಂದಿನ ಹಂತದಲ್ಲಿ ಬೆಳಗಾವಿ ಒಳಗೊಂಡಂತೆ ಮುಂಬೈ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಎರಡನೇ ಹಂತದ ಜನಾಶೀರ್ವಾದ ಯಾತ್ರೆ ನಡೆಯಲಿದೆ. ಬಹುತೇಕ ಫೆ.22ರಿಂದ ಎರಡನೇ ಹಂತದ ಯಾತ್ರೆ ನಡೆಯುವ ಸಾಧ್ಯತೆ ಇದೆ.  ಅನಂತರ ಮೈಸೂರುವಿಭಾಗ ಮತ್ತು ಕರಾವಳಿ ವಿಭಾಗದಲ್ಲೂ ಯಾತ್ರೆಗಳನ್ನು ಆಯೋಜಿಸಲು ಚಿಂತನೆ ನಡೆದಿದೆ.

Facebook Comments

Sri Raghav

Admin