ರಾಹುಲ್ ಗಾಂಧಿ- ಅಮಿತ್ ಷಾ ದಾಳಿ-ಪ್ರತಿದಾಳಿ, ಕೈ-ಕಮಲದಲ್ಲಿ ರಣೋತ್ಸಾಹ

ಈ ಸುದ್ದಿಯನ್ನು ಶೇರ್ ಮಾಡಿ

Amit-Shah--Rahul--01

ಬೆಂಗಳೂರು/ರಾಯಚೂರು, ಆ.12- ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ, ರಾಷ್ಟ್ರೀಯ ಪಕ್ಷಗಳು ರಣೋತ್ಸವ ಮೊಳಗಿಸಿವೆ. ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆದು ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕರೆ ನೀಡಿದರೆ, ಸಮರ್ಥವಾಗಿ ಆಡಳಿತ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ಪಕ್ಷವನ್ನು ಟೀಕಿಸಲು ಬಿಜೆಪಿಗೆ ಯಾವುದೇ ನೈತಿಕತೆ ಇಲ್ಲ. ಮತ್ತೆ ರಾಜ್ಯದಲ್ಲಿ ನಾವೇ ಅಧಿಕಾರಕ್ಕೆ ಬರುವುದು ಎಂದು ರಾಯಚೂರಿನಲ್ಲಿ ಕಾಂಗ್ರೆಸ್ ಉದ್ಘೋಷ ಮೊಳಗಿಸಿದೆ.

ಬಿಜೆಪಿ ಮತ್ತು ಕಾಂಗ್ರೆಸ್‍ನಲ್ಲಿ ರಾಜಕೀಯ ಚಟುವಟಿಕೆಗಳು ಈಗಿನಿಂದಲೇ ಗರಿಗೆದರಿದ್ದು, ಎರಡೂ ಪಕ್ಷಗಳ ಘಟಾನುಘಟಿ ನಾಯಕರು ಪೈಪೋಟಿಯಲ್ಲಿ ತೊಡಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮೂರು ದಿನಗಳ ಭೇಟಿಗಾಗಿ ಬೆಂಗಳೂರಿಗೆ ಆಗಮಿಸಿದ್ದು, ಪಕ್ಷದಲ್ಲಿ ಹೊಸ ಸ್ಫೂರ್ತಿಯ ಚಿಲುಮೆ ಹರಿದಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‍ಗಾಂಧಿಯವರು ಕೂಡ ಇಂದು ರಾಯಚೂರಿಗೆ ಆಗಮಿಸಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಬೃಹತ್ ಕಾಂಗ್ರೆಸ್ ಸಮಾವೇಶವನ್ನು ಹಮ್ಮಿಕೊಂಡಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳ ಸವಾಲು-ಪ್ರತಿ ಸವಾಲು ಎಂಬಂತಾಗಿದೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ಅಧಿಕಾರದ ಗದ್ದುಗೆ ಹಿಡಿಯಲು ನಾ ಮುಂದು ತಾ ಮುಂದು ಎನ್ನುವಂತೆ ಎರಡೂ ಪಕ್ಷಗಳು ಹೋರಾಟವನ್ನು ಆರಂಭಿಸಿವೆ.  ಅಮಿತ್ ಷಾ ಅವರು ಪಕ್ಷವನ್ನು ಮುಂದಿನ ಚುನಾವಣೆಗೆ ಸಜ್ಜುಗೊಳಿಸಲು ಮೂರು ದಿನಗಳ ಕಾಲ ಇಲ್ಲೇ ವಾಸ್ತವ್ಯ ಹೂಡಲಿದ್ದು, ಪಕ್ಷದ ವಿವಿಧ ಸಂಘಟನೆಗಳ ನಾಯಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಇಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿಗೆ ಆಗಮಿಸಿದ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರೇ ಮುಂದಿನ ಸಿಎಂ ಎಂದು ಅಮಿತ್ ಷಾ ಅವರು ಪುನರುಚ್ಚರಿಸಿದರು. ಬಿಜೆಪಿ ಕಚೇರಿಗೆ ಆಗಮಿಸಿ ಅವರು, ವಿವಿಧ ವಲಯಗಳಲ್ಲಿನ ಸಾಧಕರು, ಚಿಂತಕರೊಂದಿಗೆ ಬಿಡುವಿಲ್ಲದ ಚರ್ಚೆಯಲ್ಲಿ ಪಾಲ್ಗೊಂಡರು. ಪಕ್ಷದ ಆಂತರಿಕ ಭಿನ್ನಾಭಿಪ್ರಾಯ, ಅಸಮಾಧಾನಗಳನ್ನು ತೊಡೆದುಹಾಕಲು ಮತ್ತು ಎಲ್ಲರನ್ನೂ ಒಗ್ಗಟ್ಟಾಗಿ ಕೊಂಡೊಯ್ಯುವ ಪ್ರಯತ್ನ ಪಟ್ಟರು.  ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂಬ ಪಣ ತೊಟ್ಟಿರುವ ಉದ್ದೇಶದಿಂದ ರಾಹುಲ್‍ಗಾಂಧಿಯವರು ಉತ್ತರ ಕರ್ನಾಟಕದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲೂ ಕೂಡ ಭವ್ಯ ಸ್ವಾಗತ ಕೋರಲಾಯಿತು.

ಈ ಕಾರ್ಯಕ್ರಮದಲ್ಲಿ ಸಹಸ್ರಾರು ಕಾರ್ಯಕರ್ತರು ಭಾಗವಹಿಸಿ ಪಕ್ಷದ ಶಕ್ತಿಪ್ರದರ್ಶನ ಮಾಡಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹರಿಹಾಯ್ದರು. ಪ್ರಧಾನಿ ಮೋದಿ ಅವರ ಜನವಿರೋಧಿ ನೀತಿಗಳನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳೇ ನಮಗೆ ಶ್ರೀರಕ್ಷೆಯಾಗುತ್ತವೆ. ಪ್ರತಿಪಕ್ಷಗಳು ವಿನಾಕಾರಣ ಮಾಡುವ ಆರೋಪಗಳಿಗೆ ಜನ ಮನ್ನಣೆ ನೀಡುವುದಿಲ್ಲ ಎಂಬುದನ್ನು ಮನದಟ್ಟು ಮಾಡುವ ಪ್ರಯತ್ನ ಮಾಡಿದರು.

Facebook Comments

Sri Raghav

Admin