ರಿಯಲ್ ಎಸ್ಟೇಟ್ ಕಾಯ್ದೆ ಜಾರಿಗೆ ಮುಂದಾದ ಸರ್ಕಾರ, ಯಾರಿಗೆ, ಹೇಗೆ, ಏನು ಉಪಯೋಗ.? ಇಲ್ಲಿದೆ ವಿವರ

ಈ ಸುದ್ದಿಯನ್ನು ಶೇರ್ ಮಾಡಿ

RERA-Real-Estate

ಬೆಂಗಳೂರು, ಮೇ 12- ರಾಜ್ಯ ಸರ್ಕಾರ ಹೊಸ ರಿಯಲ್ ಎಸ್ಟೇಟ್ ಕಾಯ್ದೆ ‘ರೆರಾ’ವನ್ನು ಜಾರಿಗೊಳಿಸಲು ಸಜ್ಜಾಗಿದೆ. ಕೇಂದ್ರ ಸರ್ಕಾರವು ಮನೆ ಖರೀದಿದಾರರ ಸಹಾಯಕ್ಕೆಂದು 2016ರಲ್ಲಿ ಈ ಕಾಯ್ದೆಯನ್ನು ಪರಿಚಯಿಸಿತ್ತು. ಇದನ್ನು 6 ತಿಂಗಳ ಒಳಗೆ ಎಲ್ಲ ರಾಜ್ಯ ಸರ್ಕಾರಗಳು ಆಯಾ ಪ್ರದೇಶದಲ್ಲಿ ಅಳವಡಿಸಿಕೊಳ್ಳಬೇಕೆಂದು ಆದೇಶ ನೀಡಿತ್ತು. ವಸತಿ ಸಚಿವ ಎಂ. ಕೃಷ್ಣಪ್ಪ ಈ ಕುರಿತು ಒಂದು ವಾರದಲ್ಲಿ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಕರಡು ನಿಯಮದ ಬಗ್ಗೆ ಚರ್ಚೆ ಮಾಡಿ ನಂತರ ಕ್ಯಾಬಿನೆಟ್ ಮುಂದಿಡುವುದಾಗಿ ತಿಳಿಸಿದ್ದಾರೆ. ಇಲ್ಲಿಯವರೆಗೆ ಕೇವಲ ಕೆಲವು ರಾಜ್ಯ ಸರ್ಕಾರಗಳು ಮಾತ್ರ ಈ ಕಾಯ್ದೆಯನ್ನು ಜಾರಿಗೆ ತಂದಿವೆ. ಕರ್ನಾಟಕ ರಾಜ್ಯ ಸರ್ಕಾರವು ಕಳೆದ ವರ್ಷ ರೆರಾ ಕರಡು ನೀತಿಯನ್ನು ನೋಟಿಫೈ ಮಾಡಿತ್ತು. ರೆರಾ ಜಾರಿಯ 6 ತಿಂಗಳ ಒಳಗೆ ಕನಿಷ್ಠ ಶೇ. 8 ರಿಂದ 15ರಷ್ಟು ಬೆಲೆ ಏರಿಕೆ ಆಗಲಿದೆ. ಹೊಸ ಪ್ರಾಜೆಕ್ಟ್‍ಗಳ ಲಾಂಚ್ ನಲ್ಲಿ ಇಳಿಕೆ ಮತ್ತು ಬೇಗ ನಿರ್ಮಾಣ ಮುಗಿಸುವ ಉದ್ದೇಶದಿಂದಾಗಿ ಏರುವ ವೆಚ್ಚಗಳು ಬೆಲೆ ಏರಿಕೆಗೆ ಕಾರಣವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.


ವಿಳಂಬ ನೀತಿ:

ಕೆಲವು ಅಧಿಕಾರಿಗಳ ಪ್ರಕಾರ, ಸರ್ಕಾರ ರೆರಾ ಕಾಯ್ದೆ ಜಾರಿ ಮಾಡಲು ಇನ್ನೂ ತಡಮಾಡುವ ಸಾಧ್ಯತೆ ಇದೆ. ಏಕೆಂದರೆ ಕರಡು ನಿಯಮವನ್ನು ನೋಟಿಫೈ ಮಾಡುವುದು ಮತ್ತು ಅದಕ್ಕಾಗಿ ನಿಯಂತ್ರಕ ಕಮಿಟಿ ನಿಯಮಿಸುವುದರ ಬಗ್ಗೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಕೆಲವು ಸಣ್ಣ ಡೆವಲಪರ್‍ಗಳು ಸರ್ಕಾರದ ಮೇಲೆ ಹಾಕುತ್ತಿರುವ ಒತ್ತಡವೇ ಇದಕ್ಕೆ ಕಾರಣ ಎಂಬುವುದು ಕೆಲ ಅಧಿಕಾರಿಗಳ ಅಭಿಪ್ರಾಯ.

ಈ ಬಗ್ಗೆ ವೈಷ್ಣವಿ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಗೋವಿಂದರಾಜು ಹೇಳುವುದೇನೆಂದರೆ ರೆರಾ ಒಂದು ಉತ್ತಮ ಕಾಯ್ದೆ. ಇದು ರಿಯಲ್ ಎಸ್ಟೇಟ್ ಮಾರುಕಟ್ಟೆ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. ಕ್ಷೇತ್ರದಲ್ಲಿ ಯಾವುದೇ ಮೋಸ ಮಾಡದೆ ವ್ಯವಹಾರ ನಡೆಸುವ ಬಿಲ್ಡರ್‍ಗಳಿಗೆ ಇದು ಉತ್ತಮ. ಆದರೆ ಕೇವಲ ಕೆಲ ಸಮಯಕ್ಕೆ ಕಂಪೆನಿ ತೆರೆದು ಮೋಸ ಮಾಡುವ ಉದ್ದೇಶ ಇರುವ ಸಣ್ಣ ವ್ಯವಹಾರದಾರರಿಗೆ ಇದು ಸಮಸ್ಯೆ ಉಂಟುಮಾಡುತ್ತದೆ ಎಂದರು.
ಇದು ಉತ್ತಮ ಧನಾತ್ಮಕ ಬೆಳವಣಿಗೆ ತರುತ್ತದೆ. ಆದರೆ, ಈ ಹೊಸ ಕಾಯ್ದೆಯ ಬಿಲ್ಡರ್ ಮತ್ತು ಡೆವಲಪರ್‍ಗಳು ಎದುರಿಸುತ್ತಿರುವ ಕೆಲವು ಸಮಸ್ಯೆಗಳಾದ ಕಟ್ಟಡ ಅನುಮೋದನೆ, ಸರ್ಕಾರದ ನಿರ್ಬಂಧ ಇವುಗಳ ಬಗ್ಗೆ ಕೂಡಾ ಗಮನ ಹರಿಸಬೇಕು ಎನ್ನುತ್ತಾರೆ.

ಮನೆ ಕೊಳ್ಳುಗರಿಗೆ ಉಪಯೋಗ:

ಈ ಕಾಯ್ದೆಯನ್ನು ಜಾರಿಗೆ ತರುವುದರಿಂದ ಮನೆ ಖರೀದಿದಾರರಿಗೆ ಹಲವು ಉಪಯೋಗಗಳಿವೆ. ಮನೆಯನ್ನು ಗ್ರಾಹಕರಿಗೆ ನೀಡುವ ಸಮಯ, ಅಗತ್ಯ ಕಾಗದ ಪತ್ರಗಳ ವ್ಯವಹಾರಗಳು ಉತ್ತಮವಾಗಲಿದೆ. ಗುಣಮಟ್ಟದ ಬಗ್ಗೆಯೂ ಕಾಳಜಿ ವಹಿಸಲಾಗುವುದು. ದೋಷ ಹೊಣೆಗಾರಿಕೆ ಅವಧಿ ಹೆಚ್ಚಳ ಹೆಚ್ಚಿನ ಆರಾಮ ನೀಡಲಿದೆ. ಇನ್ನು ರೇರಾ ಕಾಯ್ದೆ ಪ್ರಕಾರ ಗ್ರಾಹಕರಿಂದ ಒಂದು ಪ್ರಾಜೆಕ್ಟ್‍ಗಾಗಿ ಪಡೆದ ಹಣವನ್ನು ಅದೇ ಪ್ರಾಜೆಕ್ಟ್‍ಗಾಗಿ ಖರ್ಚು ಮಾಡತಕ್ಕದ್ದು. ಉತ್ತಮವಾಗಿ ಕೆಲಸ ಮಾಡುತ್ತಿರುವ ಡೆವಲಪರ್ ಮತ್ತು ಗ್ರಾಹಕರಿಗೆ ಈ ತರಹದ ನಿಯಮಗಳು ಮತ್ತು ಈ ಕಾಯಿದೆ ಸಹಾಯ ಮಾಡಲಿದೆ. ರೆರಾ ಜಾರಿ ಕುರಿತು ಬಿಲ್ಡರ್‍ಗಳು ಸಂತಸ ವ್ಯಕ್ತಪಡಿಸಿದ್ದಾರೆ. ಇದು ಕಾನೂನು ಬಾಹಿರವಾಗಿ ರಿಯಾಲ್ಟಿ ವ್ಯವಹಾರದಲ್ಲಿ ತೊಡಗಿಕೊಂಡಿರುವವರನ್ನು ಹೊರಹಾಕಲಿದೆ ಎಂದು ಕ್ರೆಡೈ ಬೆಂಗಳೂರು ಕಾರ್ಯದರ್ಶಿ ಸುರೇಶ್ ಹರಿ ಅಭಿಪ್ರಾಯ ಪಡುತ್ತಾರೆ.ಸಾಕಷ್ಟು ಅಸಂಘಟಿತ ಬಿಲ್ಡರ್‍ಗಳನ್ನು ರೆರಾ ತಡೆಯಲಿದೆ. ಏಕೆಂದರೆ ಸೂಕ್ತ ದಾಖಲಾತಿ ಮತ್ತು ಪ್ರಮಾಣ ಪತ್ರಗಳು ಸಿಗುವವರೆಗೆ ಅವರು ಹೊಸ ಪ್ರಾಜೆಕ್ಟ್ ಆರಂಭಿಸುವಂತಿಲ್ಲ. ಕಾಯ್ದೆಯು ಮನೆ ಗ್ರಾಹಕರಲ್ಲಿ ಬಿಲ್ಡರ್‍ಗಳ ಕುರಿತು ಇನ್ನಷ್ಟು ವಿಶ್ವಾಸ ಮೂಡಿಸಲಿದೆ. ಇದೇ ವೇಳೆ, ಅನಧಿಕೃತ ಬಿಲ್ಡರ್‍ಗಳು ಹೊರ ಹೋಗುವುದರಿಂದ ಪ್ರಾಪರ್ಟಿ ಬೆಲೆಯಲ್ಲಿ ಶೇ 15-20ರಷ್ಟು ಏರಿಕೆಯಾಗುವ ನಿರೀಕ್ಷೆ ಇದೆ ಎನ್ನುತ್ತಾರೆ.

ಆತ್ಮ ವಿಶ್ವಾಸ ವೃದ್ಧಿ:
ಬ್ರಿಗೇಡ್ ಸಮೂಹದ ವಸತಿ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಓಂ ಅಹುಜಾ ಪ್ರಕಾರ, ರೆರಾ ಅನುಷ್ಠಾನದಿಂದ ಖಂಡಿತವಾಗಿಯೂ ಪ್ರಾಪರ್ಟಿ ಗ್ರಾಹಕರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಕರ್ನಾಟಕದಲ್ಲಿ ರೆರಾಜಾರಿ ಬಹು ಪರಿಣಾಮಗಳನ್ನು ಬೀರಲಿದೆ. ಮುಖ್ಯವಾಗಿ ಗ್ರಾಹಕರಲ್ಲಿ ಖರೀದಿ ಕುರಿತ ಗೊಂದಲಗಳಿಗೆ ತೆರೆ ಎಳೆದು ಅವರಲ್ಲಿ ಪ್ರಾಪರ್ಟಿ ಖರೀದಿಗೆ ಆತ್ಮವಿಶ್ವಾಸ ಹೆಚ್ಚಲಿದೆ. ಇಡೀ ಕ್ಷೇತ್ರದಲ್ಲಿ ಗಂಭೀರತೆ ತರಲಿರುವ ಇದು, ಬ್ರೋಷರ್‍ಗಳಲ್ಲಿ ನೀಡಿರುವ ಆಶ್ವಾಸನೆಯನ್ನು ಡೆವಲಪರ್‍ಗಳು ಪೂರ್ಣಗೊಳಿಸುವಂತೆ ಮಾಡಲಿದೆ. ಹೇಳಿದ ಸಮಯಕ್ಕೆ ಸರಿಯಾದ ಮನೆ ಸ್ವಾಧೀನಕ್ಕೆ ನೀಡುವ ಬದ್ಧತೆ, ಪಾರದರ್ಶಕತೆ ಇನ್ನಷ್ಟು ಹೆಚ್ಚಳಕ್ಕೆ ಇದು ನೆರವಾಗಲಿದೆ ಎನ್ನುತ್ತಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin