`ರಿಯಲ್ ಪೊಲೀಸ್’ನ ಖದರ್

ಈ ಸುದ್ದಿಯನ್ನು ಶೇರ್ ಮಾಡಿ

reall--police

ಸಾಯಿಪ್ರಕಾಶ್ ಅವರ ನಿರ್ದೇಶನದಲ್ಲಿ ಮೂಡಿ ಬಂದಂಥ ಬಹುತೇಕ ಚಿತ್ರಗಳಲ್ಲಿ ಫ್ಯಾಮಿಲಿ ಡ್ರಾಮಾ ಪ್ರಧಾನವಾಗಿರುತ್ತದೆ. ಅದೇ ರೀತಿ ರಿಯಾಲಿಟಿಗೂ ಹೆಚ್ಚು ಒತ್ತು ಕೊಟ್ಟು ತಮ್ಮ ಸಿನಿಮಾಗಳನ್ನು ನಿರ್ದೇಶನ ಮಾಡುವ ಸಾಯಿಪ್ರಕಾಶ್ ಈಗ ರಿಯಲ್ ಪೊಲೀಸ್ ಎಂದರೆ ಹೇಗಿರಬೇಕು,ಅವರಿಗಿರುವ ಜವಾಬ್ದಾರಿಗಳೇನು ಎಂಬುದನ್ನು ತಮ್ಮ ಹೊಸ ಚಿತ್ರದ ಮೂಲಕ ಹೇಳ ಹೊರಟಿದ್ದಾರೆ. ಆ ಚಿತ್ರದ ಹೆಸರೇ ರಿಯಲ್ ಪೊಲೀಸ್.ಈಗಾಗಲೇ ಒಂದು ತಿಂಗಳ ಕಾಲ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡಿಡೆಸಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ.

ಸಾದಿಕ್‍ವುಲ್ಲಾ ಆಜಾದ್ ಹಾಗೂ ನೂರ್ ಅಹ್ಮದ್ ಸೇರಿ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿಗಳಾಗಿರುವ ನಿರ್ಮಾಪಕರು ತಮ್ಮ ವೃತ್ತಿ ಜೀವನದಲ್ಲಿ ಕಂಡ ಅನುಭವಿಸಿದ ಹಲವಾರು ಸಿಹಿಕಹಿ ಘಟನೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಕಥೆಯನ್ನು ರಚಿಸಿದ್ದಾರೆ. ಆ ಕಥೆಗೆ ರಿಯಾಲಿಟಿ ಟಚ್ ಕೊಟ್ಟು ಸ್ಕ್ರಿಪ್ಟ್ ಡೈಲಾಗ್‍ಗಳನ್ನು ನಿರ್ದೇಶಕ ಸಾಯಿಪ್ರಕಾಶ್ ಅವರು ಮಾಡಿ ನಿರ್ದೇಶಿಸಿದ್ದಾರೆ. ಅಣ್ಣತಂಗಿ, ತವರಿಗೆ ಬಾ ತಂಗಿಯಂಥ ಸೂಪರ್‍ಹಿಟ್ ಚಲನಚಿತ್ರಗಳನ್ನು ಕನ್ನಡಿಗರಿಗೆ ನೀಡಿದ ಸಾಯಿಪ್ರಕಾಶ್ ಅವರ 98ನೆ ಚಿತ್ರವಿದು. ತಪ್ಪು ಮಾಡಿದವರಿಗೆ ಶಿಕ್ಷೆ ಆಗದಿದ್ದರೂ ಪರವಾಗಿಲ್ಲ.

ಆದರೆ ತಪ್ಪನ್ನೇ ಮಾಡದವರಿಗೆ ಶಿಕ್ಷೆ ಆಗಬಾರದು ಎನ್ನುವ ಕಾನ್ಸೆಪ್ಟ್ ಇಟ್ಟುಕೊಂಡು ಮಾಡಿರುವ ಈ ಚಿತ್ರದಲ್ಲಿ ಸಾಯಿಕಿರಣ್, ಅಕ್ಷಿತ, ಸುಹಾಸ್, ಸಾಯಿಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸುಚಿತ್ರ, ಸ್ಪಂದನ, ರಂಜಿತ, ಸಾಧುಕೋಕಿಲ ಉಳಿದ ತಾರಾಗಣದಲ್ಲಿದ್ದಾರೆ. ತಮ್ಮ ಚಿತ್ರದ ಬಗ್ಗೆ ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಸಾಯಿ ಪ್ರಕಾಶ್ ಅವರು, 30 ದಿನಗಳ ಕಾಲ ನಡೆದ ಚಿತ್ರೀಕರಣದಲ್ಲಿ ಮಾತಿನ ಭಾಗ, 4 ಹಾಡುಗಳು ಆ್ಯಕ್ಷನ್ ಹಾಗೂ ಛೇಸಿಂಗ್ ದೃಶ್ಯಗಳನ್ನು ಚಿತ್ರೀಕರಿಸಿದ್ದೇವೆ. ನಟ ಸಾಯಿಕುಮಾರ್ ಅವರು ಪೊಲೀಸ್ ಆಗಿಯೇ ಜನಪ್ರಿಯರಾಗಿರುವುದರಿಂದ ಚಿತ್ರಕ್ಕೆ ರಿಯಲ್ ಪೊಲೀಸ್ ಎಂಬ ಹೆಸರಿಟ್ಟಿದ್ದೇವೆ. ಈ ಹಿಂದೆ ನಿರ್ದೇಶಿಸಿದ್ದ ಆತಂಕ ಚಿತ್ರದ ನಂತರ ಮತ್ತೆ ಮರ್ಡರ್ ಮಿಸ್ಟ್ರಿಯೊಂದರನ್ನು ಕೈಗೆತ್ತಿಕೊಂಡಿದ್ದೇನೆ. ಪೊಲೀಸ್ ಇನ್‍ವೆಸ್ಟಿಗೇಷನ್ ಹಂತಗಳನ್ನು ತೆರೆಯ ಮೇಲೆ ನಿರೂಪಿಸಿದ್ದೇನೆ ಎಂದು ಹೇಳಿಕೊಂಡರು.
ಕಿರುತೆರೆ ನಟ ಮಂಜುನಾಥ ಗೌಡ ಮಾತನಾಡಿ, ಮೊದಲಬಾರಿಗೆ ನಿರ್ದೇಶಕ ಸಾಯಿಪ್ರಕಾಶ ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ತನ್ನ ಮಗಳನ್ನು ಅತ್ಯಂತ ಪ್ರೀತಿಸುವ ತಂದೆಯಾಗಿ ನಾನು ಅಭಿನಯಿಸಿದ್ದೇನೆ ಎಂದರು.ಹಿರಿಯ ನಟ ಗಣೇಶ್ ಮಾತನಾಡಿ, ಸಾಯಿಪ್ರಕಾಶ್ ಅವರ ಜೊತೆ 5ನೆ ಚಿತ್ರ. ನನ್ನ ಮಗನಾಗಿ ಸುಹಾಸ್ ಕಾಣಿಸಿಕೊಂಡಿದ್ದು ಮಾಡದೆ ಇರುವ ಅಪವಾದಗಳು ಆತನ ಮೇಲೆ ಬಂದಾಗ ಪರಿತಪಿಸುವ ತಂದೆಯಾಗಿ ನಾನು ಅಭಿನಯಿಸಿದ್ದೇನೆ ಎಂದು ಹೇಳಿದರು.ಸಂಗೀತ ನಿರ್ದೇಶಕ ಬಲರಾಮ್ ಮಾತನಾಡಿ, ಸಾಯಿ ಪ್ರಕಾಶ್‍ರ ಜೊತೆ ಇದು 3ನೆ ಸಿನಿಮಾ. ಕಥೆಯನ್ನು ಹೇಳುವಾಗಲೇ ಟ್ಯೂನ್‍ಗಳು ಬಂದು ಬಿಡುತ್ತವೆ. ನಿರ್ಮಾಪಕ ನೂರ್ ಅಹ್ಮದ್ ಅವರು ಸಾಹಿತ್ಯ ಬರೆದಿದ್ದಾರೆ. ಚಿತ್ರದಲ್ಲಿ ಒಂದು ಕವ್ವಾಲಿ ಹಾಡನ್ನು ವಿಶೇಷವಾಗಿ ಮಾಡಿದ್ದೇವೆ ಎಂದು ಹೇಳಿದರು. ಸದ್ಯದಲ್ಲೇ ಈ ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗಲಿದ್ದು, ವರ್ಷಾಂತ್ಯಕ್ಕೆ ತರೆಯ ಮೇಲೆ ರಿಯಲ್ ಪೊಲೀಸ್ ಕಾಣಿಸಿಕೊಳ್ಳಲಿದ್ದಾನೆ.

 

► Follow us on –  Facebook / Twitter  / Google+

Facebook Comments

Sri Raghav

Admin