ರಿಯೊ ಒಲಿಂಪಿಕ್ಸ್ ಕ್ರೀಡಾಹಬ್ಬಕ್ಕೆ ನಾಳೆ ತೆರೆ

ಈ ಸುದ್ದಿಯನ್ನು ಶೇರ್ ಮಾಡಿ

rioರಿಯೊ ಡಿ ಜನೈರೊ, ಆ.21- ಕ್ರೀಡಾ ಜಗತ್ತಿನ ಮಹೋನ್ನತ ಕ್ರೀಡಾ ಹಬ್ಬ ರಿಯೋ ಒಲಿಂಪಿಕ್ಸ್ಗೆ ನಾಳೆ ಅಂತಿಮ ತೆರೆ ಬೀಳಲಿದೆ. 17 ದಿನಗಳ ಕಾಲ ನಡೆದ ಕ್ರೀಡಾಕೂಟವು ಫೇರ್ವೇಲ್ ಟು ರಿಯೋ-ಮೀಟ್ ಯು ಅಟ್ ಜಪಾನ್ 2020 ಎಂಬ ಘೋಷಣೆಯೊಂದಿಗೆ ಆಕರ್ಷಕ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯವಾಗಲಿದೆ.   ಆಗಸ್ಟ್ 5 ರಿಂದ 21ರವರೆಗೆ ನಡೆದ ಒಲಿಂಪಿಕ್ಸ್ ಅನೇಕ ವಿಶ್ವದಾಖಲೆಗಳು ಮತ್ತು ಚಾರಿತ್ರಿಕ ಸಾಧನೆಗಳೊಂದಿಗೆ ಸಮಾರೋಪಗೊಂಡಿದೆ. ಅಮೆರಿಕದ ಮತ್ಸ್ಯಮಾನವ ಮೈಕಲ್ ಫಲ್ಸ್ಪ್ ಮತ್ತು ಶರವೇಗದ ಸರದಾರ ಉಸೇನ್ ಬೋಲ್ಟ್ ಹೊಸ ವಿಶ್ವದಾಖಲೆಗಳೊಂದಿಗೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸುವರ್ಣ ಅಧ್ಯಾಯ ಬರೆದರು. ಸೋಲು-ಗೆಲುವು, ನೋವು-ನಲಿವು, ನಿರಾಶೆ-ಅಭಿಲಾಷೆ ಇವುಗಳ ಒಟ್ಟು ಫಲಿತಾಂಶದಂತಿದ್ದ ರಿಯೋ ಉದಯೋನ್ಮುಖ ತಾರೆಯರಿಗೆ ಭರವಸೆಯ ಚಿಮ್ಮು ಹಲಗೆಯಾಯಿತು.

ಈ ಹಿಂದಿನ ಒಲಿಂಪಿಕ್ ಕ್ರೀಡಾಕೂಟಗಳಿಗೆ ಹೋಲಿಸಿದಲ್ಲಿ ಭಾರತದ ಸಾಧನೆ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ ಎಂಬ ಬೇಸರ ಒಂದೆಡೆಯಾದರೆ, ಕುಸ್ತಿಪಟು ಸಾಕ್ಷಿ ಮಲಿಕ್ ಅವರ ಕಂಚು ಮತ್ತು ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧೂ ಅವರ ಬೆಳ್ಳಿ ಸಾಧನೆ ಹೆಮ್ಮೆಪಡುವಂತದ್ಧು. ಪದಕ ಗೆಲ್ಲಲು ತಯಾರಿ ನಡೆಸಿದ್ದ ಕುಸ್ತಿಪಟು ನರಸಿಂಗ್ ಯಾದವ್ ಅಖಾಡಕ್ಕೆ ಇಳಿಯುವ ಮುನ್ನವೇ ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ನಾಲ್ಕು ವರ್ಷ ನಿಷೇಧಕ್ಕೆ ಒಳಗಾಗಿದ್ದು ಬೇಸರದ ಸಂಗತಿ.  ಪ್ರತಿ ವರ್ಷದಂತೆ ವಿಶ್ವದ ದೊಡ್ಡಣ್ಣ ಅಮೆರಿಕ ಪದಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಗ್ರೇಟ್ ಬ್ರಿಟನ್, ಚೀನಾ, ರಷ್ಯಾ ಮತ್ತು ಜರ್ಮನಿ ಅನುಕ್ರಮವಾಗಿ ನಂತರದ ಸ್ಥಾನಗಳಲ್ಲಿದೆ.

ಪದಕ ಪಟ್ಟಿ
ಪದಕ ಪಟ್ಟಿ

ಆ.5ರಂದು ವಿಶ್ವವಿಖ್ಯಾತ ಸಾಂಬಾ ನೃತ್ಯದೊಂದಿಗೆ ವಿವಿಧ ದೇಶಗಳ ಭವ್ಯ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಗಳನ್ನು ಸಾರುವ ನಯನ ಮನೋಹರ ಕಾರ್ಯಕ್ರಮಗಳೊಂದಿಗೆ ಮೋಹಕನಗರಿ ರಿಯೋದ ಮರಾಕಾನ ಕ್ರೀಡಾಂಗಣದಲ್ಲಿ 31ನೇ ಒಲಿಂಪಿಕ್ ಕ್ರೀಡಾಕೂಟಕ್ಕೆ ವಿದ್ಯುಕ್ತವಾಗಿ ಚಾಲನೆಗೊಂಡಿತ್ತು.   ಒಟ್ಟು 206 ದೇಶಗಳು ಪ್ರತಿನಿಧಿಸಿದ್ದ ರಿಯೋ ಒಲಿಂಪಿಕ್ಸ್ನಲ್ಲಿ 28 ಕ್ರೀಡೆಗಳು ನಡೆದು ಒಟ್ಟು 11,239 ಸ್ಪರ್ಧಿಗಳು ಪದಕಗಳಿಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಭಾರತದಿಂದ ಒಟ್ಟು 119 ಕ್ರೀಡಾಪಟುಗಳು ತಮ್ಮ ಶಕ್ತಿ-ಸಾಮರ್ಥ್ಯವನ್ನು ಪಣಕ್ಕೊಡ್ಡಿದ್ದರು.

ಯುರೋಪ್ ಸೇರಿದಂತೆ ವಿವಿಧ ದೇಶಗಳಲ್ಲಿ ಇತ್ತೀಚೆಗೆ ಭಯೋತ್ಪಾದಕರ ಆಕ್ರಮಣ ಪ್ರಕರಣಗಳು ಮತ್ತು ಹಿಂಸಾಚಾರ ತೀವ್ರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಿಯೋ ಸೇರಿದಂತೆ ಒಲಿಂಪಿಕ್ ಕ್ರೀಡಾಕೂಟ ನಡೆಯುವ ಬ್ರೆಜಿಲ್ನ ಐದು ಮಹಾನಗರಗಳಲ್ಲಿ ಹಿಂದೆಂದೂ ಕಂಡ ಕೇಳರಿಯಂಥ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin