ರುಂಡ-ಮುಂಡ ಬೇರ್ಪಡಿಸಿ ಜಮೀನು ಮಾಲೀಕನ ಬರ್ಬರ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

nelamangala

ನೆಲಮಂಗಲ, ಫೆ.1- ಜಮೀನಿನ ಬಾಡಿಗೆ ವಿಚಾರದಲ್ಲಿ ವ್ಯಕ್ತಿಯೊಂದಿಗೆ ಜಗಳವಾಡಿ ರುಂಡ-ಮುಂಡ ಬೇರ್ಪಡಿಸಿ ಭೀಕರವಾಗಿ ಕೊಲೆ ಮಾಡಿದ್ದ ಪ್ರಕರಣವನ್ನು ಸಿಸಿಬಿ ಪೊಲೀಸರು ಬೇಧಿಸಿದ್ದು, ಈ ಸಂಬಂಧ ತಂದೆ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಮಕ್ಕಳನ್ನು ಬಂಧಿಸಿದ್ದಾರೆ.ನೆಲಮಂಗಲದ ರಾಯನ್ ನಗರ ನಿವಾಸಿ ಮಂಜುನಾಥ್ (38) ಕೊಲೆಯಾದ ವ್ಯಕ್ತಿ. ಕುಣಿಗಲ್ ರಸ್ತೆಯ ಎಂಟಗಾನಹಳ್ಳಿ ಸಮೀಪ ಮಂಜುನಾಥ್ ಅವರಿಗೆ ಸೇರಿದ ಜಮೀನಿದ್ದು, ಆ ಜಮೀನಿನಲ್ಲಿ ಸ್ಕ್ರ್ಯಾಪ್ ಬಿಜಿನೆಸ್ ಮಾಡಲು ಅಲ್ತಾಫ್ (45) ಎಂಬುವರಿಗೆ ಬಾಡಿಗೆಗೆ ನೀಡಿದ್ದರು. ಮೊದಮೊದಲು ಸರಿಯಾಗಿ ಬಾಡಿಗೆ ನೀಡುತ್ತಿದ್ದ ಇವರು ತದನಂತರ ಬಾಡಿಗೆ ಕೊಡಲು ಸತಾಯಿಸುತ್ತಿದ್ದರು. ಈ ವಿಷಯವಾಗಿ ಮಂಜುನಾಥ್ ಹಾಗೂ ಅಲ್ತಾಫ್ ನಡುವೆ ಜಗಳವೂ ನಡೆದಿತ್ತು.

ಜ.24ರಂದು ಅಲ್ತಾಫ್ ಬಾಡಿಗೆ ಕೊಡುವುದಾಗಿ ಮಂಜುನಾಥ್ ಅವರನ್ನು ಜಮೀನಿನ ಬಳಿ ಕರೆಸಿಕೊಂಡಿದ್ದಾನೆ. ಮಂಜುನಾಥ್ ಬರುತ್ತಿದ್ದಂತೆ ಆತನೊಂದಿಗೆ ಜಗಳವಾಡಿ ತನ್ನ ಇಬ್ಬರು ಮಕ್ಕಳೊಂದಿಗೆ ಸೇರಿ ಕತ್ತನ್ನು ಕತ್ತರಿಸುವ ಮೂಲಕ ರುಂಡ-ಮುಂಡ ಬೇರ್ಪಡಿಸಿ ರುಂಡವನ್ನು ಜಮೀನಿನಲ್ಲೇ ಹೂತು ಹಾಕಿ ಮುಂಡವನ್ನು ತೆಗೆದುಕೊಂಡು ಕೆಂಗೇರಿ ಬಳಿ ಬಿಸಾಡಿ ವಾಪಸಾಗಿದ್ದರು. ಅಂದು ಮಂಜುನಾಥ್ ತಡರಾತ್ರಿಯಾದರೂ ಮನೆಗೆ ಬಾರದಿದ್ದಾಗ ಇವರ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು.

ಈ ನಡುವೆ ಬೆಂಗಳೂರು ಸಿಸಿಬಿ ಪೊಲೀಸರು ಪ್ರಕರಣವೊಂದರ ತನಿಖೆ ನಡೆಸುತ್ತಿದ್ದ ವೇಳೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಅಲ್ತಾಫ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಕೊಲೆ ರಹಸ್ಯವನ್ನು ಬಾಯಿಬಿಟ್ಟಿದ್ದಾನೆ. ಪ್ರಕರಣ ಸಂಬಂಧ ಅಲ್ತಾಫ್ ಹಾಗೂ ಈತನ ಇಬ್ಬರು ಮಕ್ಕಳೊಂದಿಗೆ (ಕಾನೂನು ಸಂಘರ್ಷಕ್ಕೆ ಒಳಗಾದವರು) ಎಂಟಗಾನಹಳ್ಳಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿ ಹೂತಿಟ್ಟಿದ್ದ ರುಂಡವನ್ನು ಹೊರತೆಗೆದು ತದನಂತರ ಕೆಂಗೇರಿ ಬಳಿ ಎಸೆಯಲಾಗಿದ್ದ ಮುಂಡಕ್ಕಾಗಿ ಶೋಧ ಕೈಗೊಂಡಿದ್ದಾರೆ. ಈ ಪ್ರಕರಣವನ್ನು ಗ್ರಾಮಾಂತರ ಠಾಣೆಗೆ ವರ್ಗಾಯಿಸಿ ಈ ಮೂವರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‍ಸಿಂಗ್, ಎಎಸ್‍ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin