ರುಚಿಯ ಜೊತೆ ಆರೋಗ್ಯವನ್ನು ಹೊತ್ತು ಮತ್ತೆ ಬಂದಿದೆ ಮಾವು

ಈ ಸುದ್ದಿಯನ್ನು ಶೇರ್ ಮಾಡಿ

Mangao--01

ಮೊದಲೇ ಬಿಸಿಲು. ಹಣ್ಣುಗಳನ್ನು ನೋಡಿದೊಡನೆ ಬಾಯಲ್ಲಿ ನೀರೂರದೇ ಇರದು. ಅದಕ್ಕೆ ಸರಿಯಾಗಿ ಬೇಸಿಗೆಕಾಲ ಹಣ್ಣುಗಳ ಕಾಲವೆಂದರೂ ತಪ್ಪಾಗದು. ಹಣ್ಣುಗಳ ರಾಜ ಎಂದೇ ಕರೆಸಿಕೊಳ್ಳುವ ಮಾವು, ಹಲಸು, ಕಲ್ಲಂಗಡಿ, ಸೀಬೆ, ಕರಬೂಜ, ಸಪೋಟ, ಕಿತ್ತಳೆ ಎಲ್ಲಾ ಹಣ್ಣುಗಳು ಈ ಕಾಲದಲ್ಲೇ ಬರುವುದರಿಂದ ಉಳಿದ ದಿನಗಳಿಗೆ ಹೋಲಿಸಿದರೆ ಬೆಲೆಯೂ ಕಡಿಮೆ.  ಇಂತಹ ಹಣ್ಣುಗಳ ಕಾಲದಲ್ಲಿ ಎಲ್ಲರ ಗಮನ ಸೆಳೆದು ಕೇವಲ ವಾಸನೆ ಮಾತ್ರದಿಂದಲೇ ತನ್ನ ಇರುವಿಕೆಯನ್ನು ತಿಳಿಸುವ ಮಾವು-ಹಲಸು ವಿಶೇಷವೇ ಸರಿ.

ಮಾವಿನ ಹಣ್ಣು ಸ್ವಾದದಿಂದ ಎಷ್ಟು ಇಷ್ಟವಾಗುವುದೋ ಅಷ್ಟೆ ಆರೋಗ್ಯಕ್ಕೂ ಉತ್ತಮ.  ಮಾವಿನ ಹಣ್ಣನ್ನು ಹೆಚ್ಚು ಸೇವಿಸಿದರೆ ಆರೋಗ್ಯ ಹದಗೆಡುತ್ತದೆ ಎಂದು ಹೆದರುವ ಅಗತ್ಯ ಇಲ್ಲ. ಹಣ್ಣಿನ ಸೇವನೆ ಜತೆ ಹಾಲಿನ ಸೇವಿಸಿದರೆ ಹೆಚ್ಚು ಒಳ್ಳೆಯದು.  ಸಾವಿರಕ್ಕೂ ಹೆಚ್ಚು ಪ್ರಭೇದಗಳಿರುವ ಮಾವು ಎಲ್ಲರಿಗೂ ಅಚ್ಚುಮೆಚ್ಚು. ಕೆಂಪು ಹಾಗೂ ಹಳದಿ ಮಿಶ್ರಿತ, ಹಳದಿ ಹಾಗೂ ಹಸಿರು ಮಿಶ್ರಿತ ಹಣ್ಣಾದ ಮಾವನ್ನು ಭಾರತ ಜಗತ್ತಿಗೆ ಕೊಡುಗೆಯಾಗಿ ನೀಡಿದೆ ಎಂಬುದು ಅದೆಷ್ಟೋ ಜನರಿಗೆ ಗೊತ್ತಿಲ್ಲ. ಈ ರಸಪೂರಿತ ಹಣ್ಣನ್ನು ಭಾರತದಲ್ಲಿ ಮಾತ್ರ ಮೊದಲು ಬೆಳೆಯಲಾಗುತ್ತಿತ್ತು.

ಭಾರತದ ಅಸ್ಸೋಂನಲ್ಲಿ ಮತ್ತು ಮ್ಯಾನ್‍ಮಾರ್‍ನಲ್ಲಿ ಬೆಳೆಯಲಾಗುತ್ತಿದ್ದ ಈ ವಿಶಿಷ್ಟ ಮಾವಿನ ಹಣ್ಣು ಪೋರ್ಚುಗೀಸರ ಕಾಳಜಿಯಿಂದಾಗಿ ಜಗತ್ತಿಗೆ ಪರಿಚಯವಾಗಿದೆ.  ನೂರಾರು ವರ್ಷಗಳ ಹಿಂದೆ ಭಾರತಕ್ಕೆ ಆಗಮಿಸಿದ ಪೋರ್ಚುಗೀಸರು ಈ ಹಣ್ಣನ್ನು ವಿಶ್ವಕ್ಕೆ ಪರಿಚಯಿಸಿದರಂತೆ. ಮಾವಿನ ಹಣ್ಣು ಎಂಬ ಹೆಸರು ಬರಲು ಕಾರಣ ತಮಿಳಿನ ಮ್ಯಾನ್-ಗೆ ಎಂಬ ಪದ ಎಂದು ಹೇಳಲಾಗುತ್ತದೆ.

ಅದನ್ನು ಪೋರ್ಚುಗೀಸರು ಮ್ಯಾಂಗೋ ಎಂದು ಕರೆದರಂತೆ. ನಂತರದ ದಿನಗಳಲ್ಲಿ ಇದರ ಮೇಲೆ ಕೈಗೊಂಡ ಸಂಶೋಧನೆಗಳಿಂದ ವಿವಿಧ ತಳಿಯ ಮಾವಿನ ಹಣ್ಣುಗಳು ಪ್ರಚಲಿತಕ್ಕೆ ಬಂದವು. ಇವುಗಳಲ್ಲಿ ಆಲ್‍ಫ್ಯಾನ್ಸೋ, ಮಾಲ್ಗೋಬಾದಂತಹ ತಳಿಗಳು ಎಂದು ಹೇಳಲಾಗುತ್ತದೆ.  ಆದರೆ ಇನ್ನೊಂದು ಮೂಲದ ಪ್ರಕಾರ ಭಾರತೀಯರು ಈ ಹಣ್ಣನ್ನು ಮೂರು ಸಾವಿರ ವರ್ಷಗಳಿಂದ ಹಿಂದಿನಿಂದಲೂ ಸವಿಯುತ್ತಿದ್ದರೆನ್ನಲಾಗಿದೆ. ಬ್ರಹದಾರಣ್ಯಕ ಎಂಬ ಉಪನಿಷತ್ತಿನಲ್ಲಿ ಮಾವಿನ ಹಣ್ಣಿನ ವಿಚಾರ ಹೇಳಲಾಗಿದೆ. ಹಾಗಾಗಿ ಬಹಳಷ್ಟು ಹಿಂದೆಯೇ ಭಾರತದಲ್ಲಿ ಈ ಹರ್ಣಣು ಬೆಳೆಯಲಾಗುತ್ತಿತ್ತು ಎಂಬ ಬಗ್ಗೆ ಮಾಹಿತಿ ಸಿಗುತ್ತದೆ. ಹಾಗಾಗಿ ಮಾವಿನ ಹಣ್ಣಿನ ತವರು ಭಾರತ.

ಇವೆಲ್ಲ ಮಾವಿನ ಹಿನ್ನೆಲೆಯಾದರೆ ಮಾವು ಒಂದು ಪರಿಪೂರ್ಣ ಹಣ್ಣು ಎಂಬುದರಲ್ಲಿ ಎರಡು ಮಾತಿಲ್ಲ. ವಿಟಮಿನ್ ಎ, ಸಿ ಮತ್ತು ಡಿಯನ್ನು ಒಳಗೊಂಡಿರುವ ಮಾವಿನ ಸೇವನೆಯಿಂದ ದೇಹಕ್ಕೆ ಅಗತ್ಯ ಪೋಷಕಾಂಶ ದೊರೆಯಲಿದೆ. ಅದರಲ್ಲೂ ಬೇಸಿಗೆಯಲ್ಲಿ ಬಸವಳಿದಾಗ ಈ ಹಣ್ಣಿನ ಸೇವನೆ ಅಥವಾ ಹಣ್ಣಿನ ರಸ ಸ್ವೀಕರಿಸುವುದು ದೇಹಕ್ಕೆ ತಂಪಿನ ಅನುಭವ ನೀಡುವ ಜತೆಗೆ ಶಕ್ತಿಯೂ ಒದಗುತ್ತದೆ.  ಈ ಕಾರಣಕ್ಕಾಗಿಯೇ ಹಣ್ಣುಗಳ ರಾಜ ಎಂದೇ ಕರೆಸಿಕೊಳ್ಳುವ ಮಾವು ಮಾರ್ಚ್ ಅಂತ್ಯದಿಂದ ಜೂನ್ ಆರಂಭದವರೆಗೆ ಸಿಗುವ ಈ ಹಣ್ಣನ್ನು ಒಂದು ವಿಶಿಷ್ಟ ರುಚಿಯೊಂದಿಗೆ ಆಸ್ವಾದಿಸಬಹುದಾಗಿದೆ.

ಕೇವಲ ಹಣ್ಣಿನಿಂದ ಮಾತ್ರ ಇದು ನಮ್ಮ ದೇಶದಲ್ಲಿ ಪರಿಚಿತವಾಗಿಲ್ಲ. ಅದಕ್ಕೂ ಮೀರಿ ಮಾವಿನ ಮರ, ಎಲೆಗಳನ್ನು ಶುಭ ಸೂಚಕವೆಂದೇ ಭಾವಿಸಲಾಗುತ್ತದೆ. ಭಾರತದ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ಮಾವಿನ ಎಲೆಗಳನ್ನು ಮನೆಯ ಮುಂಬಾಗಿಲಿಗೆ ಹಾಕಿ ಹಬ್ಬದ ಆಚರಣೆಗಳನ್ನು ಕೈಗೊಳ್ಳುವ ವಾಡಿಕೆ ಇದೆ.
ಮಾವಿನ ಮರವನ್ನು ಪ್ರೇಮ ದೇವತೆ ಎನಿಸಿರುವ ಮನ್ಮಥರಿಗೆ ಹೋಲಿಸಲಾಗುತ್ತದೆ.  ಪ್ರತಿ ಹಬ್ಬದಲ್ಲೂ ಮಾವಿನ ಎಲೆಗಳನ್ನು ಬಾಗಿಲಿಗೆ ಕಟ್ಟಲಾಗುತ್ತದೆ. ಮಾವಿನ ಎಲೆಯಲ್ಲಿ ಹೆಚ್ಚು ಆಮ್ಲಜನಕವಿರುವ ಜತೆಗೆ ಹೆಚ್ಚು ಕಾಲ ಹಸಿರಾಗಿ ಉಳಿಯುವ ಮಾವಿನ ಎಲೆಗಳು ಬಾಗಿಲಿನಲ್ಲಿದ್ದರೆ ಮನೆಯಲ್ಲಿ ಉತ್ತಮ ಗಾಳಿ ಸುಳಿದಾಡುತ್ತದೆ ಎಂದು ವೈಜ್ಞಾನಿಕವಾಗಿ ಉಲ್ಲೇಖಿಸಲಾಗಿದೆ. ಇಷ್ಟೆಲ್ಲ ಗುಣಗಳ ಆಗರವಾದ ಮಾವಿನ ಹಣ್ಣು ಎಲೆಗಳ ಬಗ್ಗೆ ತಿಳಿದರಷ್ಟೆ ಸಾಲದು ಹಣ್ಣನ್ನು ಸೇವಿಸಿ ಎಲೆಗಳನ್ನು ಬಳಸಿ ಆರೋಗ್ಯ ಕಾಪಾಡಿಕೊಳ್ಳಬೇಕು. ಅಲ್ಲವೇ…?
ಮಾವಿನ ಹಣ್ಣಿನ ಮ್ಯಾಜಿಕ್ :

ಮಾವು ಜೀರ್ಣಕ್ರಿಯೆಯನ್ನು ಹೆಚ್ಚಿಸುವುದರೊಂದಿಗೆ ಅಸಿಡಿಟಿ, ಅಜೀರ್ಣದಂತಹ ಸಮಸ್ಯೆಗಳಿಗೆ ಒಂದು ಮೆಡಿಸಿನ್ ನಂತೆ ಕೆಲಸಮಾಡುತ್ತದೆ. ಆದ್ದರಿಂದ ಊಟದೊಂದಿಗೆ ಮಾವಿನ ಹಣ್ಣಿನ ಸೇವನೆ ಮಾಡುವುದು ಒಳ್ಳೆಯದು.   ಮಾವಿನ ಹಣ್ಣಿನಲ್ಲಿ ವಿಟಮಿನ್ ‘ಇ’ ಅಂಶವಿರುವುದರಿಂದ ಲೈಂಗಿಕ ಹಾರ್ಮೋನ್‍ಗಳನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.   ಮಾವಿನ ಕಾಯಿ ಅಥವಾ ಹಣ್ಣಿನಲ್ಲಿರುವ ಗ್ಲೂಟಾಮೈನ್ ಆಸಿಡ್ ಜ್ಞಾಪಕ ಶಕಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
ಮಾವಿನ ಹಣ್ಣನ್ನು ಕತ್ತರಿಸಿ ಅದರ ಚಿಕ್ಕ ತುಂಡನ್ನು ತೆಗೆದುಕೊಂಡು ಮುಖಕ್ಕೆ ಹಚ್ಚಿ ನಂತರ ಸ್ನಾನ ಮಾಡುವುದರಿಂದ ಮೊಡವೆ ಕಡಿಮೆಯಾಗುವುದು.

ಮಾವಿನ ಹಣ್ಣಿನಲ್ಲಿ ಅಧಿಕ ಕಬ್ಬಿಣಾಂಶವಿದೆ. ಮಹಿಳೆಯರಲ್ಲಿ 40ರ ನಂತರ ದೇಹದಲ್ಲಿ ಕಬ್ಬಿಣಾಂಶದ ಪ್ರಮಾಣ ಇಳಿಮುಖವಾಗುತ್ತಾ ಸಾಗುತ್ತದೆ. ಆದ್ದರಿಂದ 40ರ ನಂತರ ಕಬಿಣಾಂಶವಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದು ಉತ್ತಮ. ಮಾವಿನ ಮತ್ತೊಂದು ವಿಶೇಷತೆ ಏನೆಂದರೆ ಕ್ಯಾನ್ಸರ್ ಮತ್ತು ಹೃದಯಾಘಾತ ಕಾಯಿಲೆಗಳನ್ನು ದೂರವಿಡುವಲ್ಲಿ ಮಾವಿನ ಹಣ್ಣು ಸಹಕಾರಿಯಾಗಿದೆ.

ಮಾವಿನಹಣ್ಣಿನ ಸಾರ : 

ಮಾವಿನ ಹಣ್ಣು , ಹಣ್ಣುಗಳ ರಾಜ ಎಂದು ಪರಿಗಣಿಸಲ್ಪಟ್ಟಿದೆ. ಮಾವಿನ ಹಣ್ಣಿನ ಆಲ್ಫಾನ್ಸೋ ಜಾತಿಯ 100 ಗ್ರಾಂ ಹಣ್ಣಿನಲ್ಲಿ ಇರುವ (ಅಂದಾಜು) ಸಾರ ;
ನೀರು -81.6 ಗ್ರಾಂ.
ಪ್ರೋ ಟೀನ್ -0.9ಗ್ರಾಂ.
ಕೊಬ್ಬು -0.4 ಗ್ರಾಂ.
ಕಾರ್ಬೋಹೈಡ್ರೇಟ್ (ಸಕ್ಕರೆ) -16.3ಗ್ರಾಂ
ನಾರು – 0.4 ಗ್ರಾಂ.
ಸುಣ್ಣ -0.40 ಮಿ ಗ್ರಾಂ.
ರಂಜಕ -16.0ಮಿ ಗ್ರಾಂ.
ಪೊಟ್ಯಾಸಿಯಂ -2000.0ಮಿ ಗ್ರಾಂ.
ಸೋಡಿಯಂ -9.0 ಮಿಗ್ರಾಂ.
ವಿಟಮಿನ್ ಎ – 20,000 ಐ.ಯು.
ವಿಟಮಿನ್ ಬಿ 1 – 0.08ಮಿ ಗ್ರಾಂ.
ವಿಟಮಿನ್ ಬಿ 2 -0.09 ಮಿಗ್ರಾಂ
ವಿಟಮಿನ್ ಸಿ – 125.0 ಮಿ ಗ್ರಾಂ.
ನಿಯಾಚಿನ್ – 4.1 ಮಿ ಗ್ರಾಂ.
ಕ್ಯಾಲರೀಗಳು -50
ವಿಟಮಿನ್’ಎ’ ಹೆಚ್ಚು ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದೆಂದು ಹೇಳಲಾಗಿದೆ. ತೊಳೆಯದ, ಅತಿ ಗಳಿತ(ಕೊಳೆ ಆರಂಭದ) ಹಣ್ಣು, ಅರ್ಧ ಮಾಗಿದ ಹಣ್ಣು ಅತಿಸಾರಕ್ಕೆ ಕಾರಣವಾಗಬಹುದು. ಮಾಗಿದ ಹಣ್ಣು ಆರೋಗ್ಯಕ್ಕೆ ಒಳ್ಳೆಯದು.

ಲೈಂಗಿಕ ಶಕ್ತಿ ವರ್ಧನೆಗೆ ಸಹಕಾರಿ :

ಸಾಮಾನ್ಯವಾಗಿ ಲೈಂಗಿಕ ಶಕ್ತಿ ವರ್ಧನೆಗೆ ಬೇಕಾದ ವಿಟಮಿನ್ ‘ಇ’ ಮಾವಿನ ಹಣ್ಣಿನಲ್ಲಿದೆ. ಈಸ್ಟ್ರೋಜೆನ್ ಹಾರ್ಮೋನ್‍ಗಳಂತೆ ಕೆಲಸ ಮಾಡುವ ಗುಣ ಮಾವಿನ ಹಣ್ಣಿನ ಸತ್ವದಲ್ಲಿದೆ. ಹೀಗಾಗಿ ಪುರುಷರು ಮತ್ತು ಮಹಿಳೆಯರ ಸೆಕ್ಸ್‍ಲೈಫ್ ಉತ್ತಮಗೊಳಿಸಲು, ಹೆಚ್ಚಿಸಿಕೊಳ್ಳಲು ಮಾವಿನ ಹಣ್ಣು ಸಹಕಾರಿ ಎನ್ನುತ್ತಾರೆ ವೈದ್ಯರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin