ರುದ್ರೇಶ್ ಎತ್ತಲು ಒಂದು ವಾರ ಮೊದಲೇ ಸ್ಕೆಚ್ ಹಾಕಿದ್ದ ಹಂತಕರು..?

ಈ ಸುದ್ದಿಯನ್ನು ಶೇರ್ ಮಾಡಿ

Rudresh-Murderer

ಬೆಂಗಳೂರು, ಅ.22-ಕೋಮು ಗಲಭೆ ಸೃಷ್ಟಿ ಮಾಡಲೆಂದೇ ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಅವರ ಹತ್ಯೆ ನಡೆದಿದ್ದು, ಅದಕ್ಕಾಗಿ ಒಂದು ವಾರದಿಂದ ಹಂತಕರು ಅವರನ್ನು ಫಾಲೋ ಮಾಡುತ್ತಿದ್ದರು ಎನ್ನುವ ಮಾಹಿತಿ ಪೊಲೀಸ್ ಮೂಲಗಳಿಂದ ಹೊರಬಿದ್ದಿದೆ. ಪಲ್ಸರ್ ಬೈಕ್‍ನಲ್ಲಿ ಹೋದ ಹಂತಕರ ಫೋಟೋ ರಿಲೀಸ್ ಆದ ಬೆನ್ನಲ್ಲೇ ಅಲ್ಲಿ ಓಡಾಡಿರುವುದು ಒಂದು ಬೈಕ್ ಅಲ್ಲ ಬದಲಿಗೆ ಮೂರ್ನಾಲ್ಕು ಬೈಕ್ ಓಡಾಡಿದೆ ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ಒಬ್ಬರ ಹಿಂದೆ ಒಬ್ಬರು ಅಂತ ಬರೀ ಸನ್ನೆಗಳ ಮೂಲಕವೇ ಹಂತಕರು ಕೆಲಸ ಮುಗಿಸಿದ್ದಾರೆ. ಕೊಲೆ ಮಾಡಿದ ಹಂತಕರ ಬೈಕ್ ಬರುವ ಮುನ್ನ ಅಲ್ಲಿ ಮೂರು ಬೈಕ್ ಓಡಾಡಿವೆ. ಅವರ ಜೊತೆಯಲ್ಲೇ ಬಂದ ಪಕ್ಕಾ ಪ್ರೊಫೆಶನಲ್ ಕಿಲ್ಲರ್ ಒಂದೇ ಏಟಿಗೆ ಕೊಂದು ಮುಗಿಸಿದ್ದಾನೆ ಎನ್ನಲಾಗಿದೆ.
ರುದ್ರೇಶ್ ಕೊಲೆಯಾಗುವ 10 ರಿಂದ 15 ದಿನಗಳ ಅವಧಿಯಲ್ಲಿ ಅವರಿಗೆ ಐದಾರು ಮಂದಿ ಹೊಸ ಸ್ನೇಹಿತರು ಸಿಕ್ಕಿದ್ದಾರೆ. ಆದರೆ ಅವರು ಈ ಹಂತಕ್ಕೆ ಹೋಗುತ್ತಾರೆ ಎಂದು ರುದ್ರೇಶ್ ಕೂಡ ಊಹಿಸಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೊಲೆ ತನಿಖೆ ಒಂದು ಕಡೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಪೊಲೀಸರು ರುದ್ರೇಶ್ ಇತರೇ ವ್ಯವಹಾರಗಳ ಮೇಲೆ ತನಿಖೆ ನಡೆಸುತ್ತಿದ್ದಾರೆ. ರುದ್ರೇಶ್ ಬೆಳೆದ ರೀತಿ, ಕಳೆದ ಎರಡು ವರ್ಷಗಳಲ್ಲಿ ಅವರ ವ್ಯವಹಾರದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆರೋಪಿಗಳನ್ನು ಪಕ್ಕಾ ಹಿಡಿಯಬೇಕಾದರೆ ಇನ್ನು 10 ದಿನವಾದರೂ ಸಮಯ ಬೇಕು ಎನ್ನುವುದು ಪೊಲೀಸರ ವಾದ.
ಆರ್‍ಎಸ್‍ಎಸ್ ಕಾರ್ಯಕರ್ತರು ನವರಾತ್ರಿ ಹಿನ್ನೆಲೆಯಲ್ಲಿ ಅ.16ರ ಭಾನುವಾರ ಬೆಳಗ್ಗೆ ಹಲಸೂರು, ಕಾಕ್ಸ್‍ಟೌನ್, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ, ಭಾರತಿನಗರ ಸುತ್ತಮುತ್ತಲ ರಸ್ತೆಗಳಲ್ಲಿ ಪಥಸಂಚಲನ ಮಾಡಿದ್ದರು. ಪಂಥಸಂಚಲನ ಮುಗಿದ ಬಳಿಕ ಬೆಳಗ್ಗೆ 11.30ರ ಸುಮಾರಿಗೆ ರುದ್ರೇಶ್ ಅವರು ಸ್ನೇಹಿತರಾದ ಜಯರಾಂ, ಕುಮಾರ್ ಹಾಗೂ ಹರೀಶ್ ಅವರ ಜತೆ ಕಾಮರಾಜ ರಸ್ತೆಯ ಬಿಇಒ ಕಚೇರಿ ಬಳಿ ಮಾತನಾಡುತ್ತ ನಿಂತಿದ್ದಾಗ ಪಲ್ಸರ್ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ರುದ್ರೇಶ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin