ರುಬೆಲ್ಲಾ, ದಡಾರ ಲಸಿಕಾ ಅಭಿಯಾನಕ್ಕೆ ಸ್ಪಂದಿಸದ ಶಾಲೆಗಳ ವಿರುದ್ಧ ಕ್ರಮ : ತನ್ವೀರ್ ಸೇಠ್

ಈ ಸುದ್ದಿಯನ್ನು ಶೇರ್ ಮಾಡಿ

Tanveer-Sait

ಬೆಂಗಳೂರು, ಫೆ.7– ರುಬೆಲ್ಲಾ ಮತ್ತು ದಡಾರ ಲಸಿಕಾ ಅಭಿಯಾನಕ್ಕೆ ಸಹಕಾರ ನೀಡದ ಎರಡು ಖಾಸಗಿ ಶಾಲೆಗಳಿಗೂ ಈಗಾಗಲೇ ನೋಟಿಸ್ ನೀಡಿದ್ದು, ನ್ಯಾಷನಲ್ ಪಬ್ಲಿಕ್ ಶಾಲೆಗೆ ಇಂದು ನೋಟಿಸ್ ನೀಡಲಾಗುತ್ತಿದೆ. ಅಭಿಯಾನಕ್ಕೆ ಸಹಕರಿಸದ ಶಾಲೆಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಇಂದಿಲ್ಲಿ ತಿಳಿಸಿದರು.  ಸೇವಾ ದಳದ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಡಾರ ಮತ್ತು ರುಬೆಲ್ಲಾ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ದೇಶದ ಹಲವು ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಈ ಅಭಿಯಾನ ಆರಂಭಿಸಲಾಗಿದೆ.

ಕರ್ನಾಟಕದಲ್ಲೂ 100 ಜನರಲ್ಲಿ ಶೇ.36ರಷ್ಟು ಮಂದಿ ರುಬೆಲ್ಲಾ ಹಾಗೂ ದಡಾರದಿಂದ ಸಾವನ್ನಪ್ಪಿದ ವರದಿ ಇದೆ. ಇದನ್ನು ನಿಯಂತ್ರಿಸಲು ಲಸಿಕಾ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.  ಪ್ರತಿ ದಿನ ಬೆಳಗ್ಗೆ 8ರಿಂದ ಮಧ್ಯಾಹ್ನ 2ರವರೆಗೂ ಲಸಿಕಾ ಅಭಿಯಾನ ನಡೆಯಲಿದ್ದು, ಇದರ ಸದುಪಯೋಗಪಡಿಸಿಕೊಂಡು ಮಕ್ಕಳನ್ನು ರುಬೆಲ್ಲಾ ಮತ್ತು ದಡಾರದಿಂದ ಮುಕ್ತಗೊಳಿಸುವಂತೆ ಕರೆ ನೀಡಿದರು.  ಈ ಅಭಿಯಾನಕ್ಕೆ ಸಹಕಾರ ನೀಡದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಕೋರಮಂಗಲದ ಒಂದು, ಕೆ.ಜೆ.ಹಳ್ಳಿಯ ಒಂದು ಶಾಲೆಗೆ ಈ ಸಂಬಂಧ ನೋಟೀಸ್ ನೀಡಲಾಗಿದೆ. ನ್ಯಾಷನಲ್ ಪಬ್ಲಿಕ್ ಶಾಲೆಗೆ ಇಂದು ನೋಟಿಸ್ ನೀಡಲಾಗುತ್ತಿದೆ.

ಇಂದಿನಿಂದ ಆರಂಭವಾಗಿರುವ ಅಭಿಯಾನ ಇದೇ 28ರವರೆಗೆ ನಡೆಯಲಿದ್ದು, ಸರ್ಕಾರಿ, ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಸೇರಿದಂತೆ ಎಲ್ಲಾ ಶಾಲೆಗಳಲ್ಲೂ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಕೆಲವೆಡೆ ಅಪಪ್ರಚಾರ ನಡೆಯುತ್ತಿದೆ. ಆದರೆ ಇದು ಸರಿಯಲ್ಲ ಎಂದು ತಿಳಿಸಿದರು.  ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಈ ಲಸಿಕೆ ಪಡೆಯುವುದರಿಂದ ಆಗುವುದಿಲ್ಲ. ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳಲ್ಲಿ ಜ್ವರ ಅಥವಾ ವಾಂತಿ ಸಣ್ಣ ಪುಟ್ಟ ವ್ಯತ್ಯಾಸ ಕಾಣಿಸಿಕೊಳ್ಳಬಹುದು. ಇದಕ್ಕೆ ಮುಂಜಾಗ್ರತೆಯಾಗಿ ಶಾಲೆಗಳ ಬಳಿ ಆ್ಯಂಬುಲೆನ್ಸ್ , ಮಕ್ಕಳ ತಜ್ಞರು, ವೈದ್ಯರು, ತರಬೇತಿ ಪಡೆದ ನರ್ಸ್‍ಗಳು ಹಾಜರಿರುತ್ತಾರೆ. ಯಾವುದೇ ರೀತಿಯ ಅಂಜಿಕೆ ಬೇಡ ಎಂದು ಕಿವಿಮಾತು ಹೇಳಿದರು.

ಈ ಲಸಿಕೆ ಹಾಕಿಸದಿದ್ದಲ್ಲಿ ಕಾಂಜಿನೇಟಲ್ ರುಬೆಲ್ಲಾ ಸೆಂಡ್ರೋ ಎಂಬ ತೊಂದರೆಯಿಂದ ಬಳಲುತ್ತಾರೆ. ಇದು ಹೆಣ್ಣು ಮಕ್ಕಳಿಗೆ ಹೆಚ್ಚು ತೊಂದರೆಯಾಗಲಿದೆ. ಹೃದಯಾಘಾತ, ಗರ್ಭಪಾತದಂತಹ ಸಮಸ್ಯೆ ಎದುರಾಗಲಿದೆ. ಹಾಗಾಗಿ ಈ ಲಸಿಕೆ ಹಾಕಿಸಿಕೊಳ್ಳುವುದು ಮಕ್ಕಳಿಗೆ ಬಹಳಷ್ಟು ಸಹಕಾರಿ. ಆತಂಕವಿರುವ ಪೋಷಕರು ಖುದ್ದಾಗಿ ಹಾಜರಿದ್ದು, ಮಕ್ಕಳಿಗೆ ಲಸಿಕೆ ಹಾಕಿಸಬಹುದು ಎಂದು ಮಾಹಿತಿ ನೀಡಿದರು.  ರಾಜ್ಯಾದ್ಯಂತ 1.64 ಲಕ್ಷ ಮಕ್ಕಳಿಗೆ ಆಂದೋಲನದಲ್ಲಿ ಲಸಿಕೆ ಹಾಕಲಾಗುತ್ತಿದ್ದು, ಇದೇ ಸಂದರ್ಭದಲ್ಲಿ ಟ್ರ್ಯಾಕ್ ಕಾರ್ಡ್‍ನ್ನು ನೀಡಲಾಗುವುದು. ಯಾವ ಲಸಿಕೆ ಹಾಕಿದೆ, ಯಾವ ಲಸಿಕೆ ಹಾಕಬೇಕು ಎಂಬ ಬಗ್ಗೆ ಮಾಹಿತಿ ಇದರಲ್ಲಿರಲಿದೆ ಎಂದರು.  ಸೇವಾ ದಳದ ರಾಜ್ಯ ಕಾರ್ಯದರ್ಶಿ ದೇವಿ ಪ್ರಸಾದ್, ಅಧ್ಯಕ್ಷ ಗುರು ಸಿದ್ದಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin