ರೆಡ್ಡಿ ಮಗಳ ಮದುವೆಗೆ ಕಪ್ಪು ಹಣವನ್ನು ಬಿಳಿ ಮಾಡಿಕೊಟ್ಟ ಭೀಮಾನಾಯ್ಕ್ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Bheema-Naik-Ramesh

ಮದ್ದೂರು, ಡಿ.11-ಗಣಿಧಣಿ ಜನಾರ್ದನ ರೆಡ್ಡಿ ಪುತ್ರಿ ವಿವಾಹಕ್ಕೆ 100 ಕೋಟಿ ಕಪ್ಪು ಹಣವನ್ನು ಬಿಳಿಯಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಶೇಷ ಭೂಸ್ವಾಧೀನಾಧಿಕಾರಿ ಭೀಮಾನಾಯ್ಕ್ ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.   ಕಲಬುರಗಿಯ ತಮ್ಮ ಸಂಬಂಧಿಕರ ನಿವಾಸದಲ್ಲಿ ತಲೆಮರೆಸಿಕೊಂಡಿದ್ದ ಭೀಮಾನಾಯ್ಕ್, ಆತನ ಕಾರು ಚಾಲಕ ಮಹಮ್ಮದ್ ಅವರನ್ನು ಬಂಧಿಸುವಲ್ಲಿ ಮಂಡ್ಯ ಹಾಗೂ ಕಲಬುರಗಿ ಪೊಲೀಸರು ಯಶಸ್ವಿಯಾಗಿದ್ದಾರೆ.  ಕಲಬುರಗಿಯಲ್ಲಿ ಭೀಮಾನಾಯ್ಕ್ ಹಾಗೂ ಆತನ ಚಾಲಕ ಮಹಮ್ಮದ್ ಅವರನ್ನು ಬಂಧಿಸುವಲ್ಲಿ ಮಳವಳ್ಳಿ ಪಿಎಸ್‍ಐ ರವಿಕುಮಾರ್ ನೇತೃತ್ವದ ತಂಡ ಯಶಸ್ವಿಯಾಗಿದೆ ಎಂದು ಮಂಡ್ಯ ಎಸ್ಪಿ ಸುಧೀರ್‍ಕುಮಾರ್ ಪತ್ರಿಕಾಗೋಷ್ಠಿಯಲ್ಲಿಂದು ದೃಢಪಡಿಸಿದರು.

ಕಲಬುರಗಿಯಲ್ಲಿ ಭೀಮಾನಾಯ್ಕ್ ತಲೆಮರೆಸಿಕೊಂಡಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಅಲ್ಲಿಗೆ ತೆರಳಿದ ರವಿಕುಮಾರ್ ನೇತೃತ್ವದ ತಂಡ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಬಂಧಿಸಿದ್ದು , ಇಂದು ರಾತ್ರಿ ಇಲ್ಲವೆ ನಾಳೆ ಮದ್ದೂರು ಠಾಣೆಗೆ ಕರೆತರಲಾಗುವುದು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದ ಅವರು ವಿವರಿಸಿದರು.

ಪ್ರಕರಣದ ಹಿನ್ನೆಲೆ:

ಗಣಿಧಣಿ ಜನಾರ್ದನ ರೆಡ್ಡಿ ಪುತ್ರಿ ವಿವಾಹದ ಖರ್ಚು ವೆಚ್ಚಕ್ಕಾಗಿ 100 ಕೋಟಿ ಕಪ್ಪು ಹಣವನ್ನು ಶೇ.20ರಷ್ಟು ಕಮೀಷನ್ ಆಧಾರದ ಮೇಲೆ ಬಿಳಿಯನ್ನಾಗಿಸುವ ಹೊಣೆಯನ್ನು ಕೆಎಎಸ್ ಅಧಿಕಾರಿಯಾಗಿರುವ ಭೀಮಾನಾಯ್ಕ್ ವಹಿಸಿಕೊಂಡಿದ್ದರು ಎನ್ನಲಾಗಿದೆ.   ಈ ಪ್ರಕರಣದಲ್ಲಿ ಪಾತ್ರಧಾರಿಯಾಗಿದ್ದ ಭೀಮಾನಾಯಕ್ ಕಾರು ಚಾಲಕ ರಮೇಶ್ ಆತ್ಮಹತ್ಯೆ ಮಾಡಿಕೊಳ್ಳವ ಮುನ್ನ ಡೆತ್‍ನೋಟ್‍ನಲ್ಲಿ 100 ಕೋಟಿ ಹಣ ಬಿಳಿಯನ್ನಾಗಿಸುವ ಕಾಳದಂಧೆಯಲ್ಲಿ ಕೆಎಎಸ್ ಅಧಿಕಾರಿ ಪಾಲ್ಗೊಂಡಿರುವುದು ಬಹಿರಂಗಪಡಿಸಿ ಸಾವನ್ನಪ್ಪಿದ್ದ.

ಈ ಪ್ರಕರಣ ರಾಜ್ಯದಲ್ಲಿ ಅಲ್ಲೋಲ್ಲ ಕಲ್ಲೋಲ್ಲ ಸೃಷ್ಟಿಸಿತ್ತು. ಇಡೀ ಪ್ರಕರಣವನ್ನು ಬೇಧಿಸಲು ಐಟಿ ಅಧಿಕಾರಿಗಳು, ಸಿಐಡಿ, ಸಿಬಿಐ ಹಾಗೂ ಸ್ಥಳೀಯ ಪೆಪೊಲೀಸರು ಹರಸಾಹಸ ನಡೆಸುತ್ತಿದ್ದ ಬೆನ್ನಲ್ಲೇ ಪ್ರಕರಣದ ಸೂತ್ರಧಾರಿ ಭೀಮಾನಾಯ್ಕ್ ತಲೆಮರೆಸಿಕೊಂಡಿದ್ದ. ಭೀಮಾನಾಯ್ಕ್ ಬಂಧನಕ್ಕೆ ನಾಲ್ಕು ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು. ರವಿಕುಮಾರ್ ನೇತೃತ್ವದ ಮಳವಳ್ಳಿ ಪೊಲೀಸರ ತಂಡ ನಾಯ್ಕ್‍ನನ್ನು ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin