ರೈತರ ಪಾದಯಾತ್ರೆ : ಪೊಲೀಸರ ಸರ್ಪಗಾವಲು

ಈ ಸುದ್ದಿಯನ್ನು ಶೇರ್ ಮಾಡಿ

tumakuru7

ತುಮಕೂರು,ಆ.12-ಮಹದಾಯಿ ತೀರ್ಪಿನ ನಂತರ ಯಮನೂರಿನಲ್ಲಿ ರೈತರ ಮೇಲೆ ಪೊಲೀಸ್  ದೌರ್ಜನ್ಯ ಎಸಗಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ತಿಪಟೂರಿನಿಂದ ಬೆಂಗಳೂರಿಗೆ ಹೊರಟಿರುವ ರೈತರ ಪಾದಯಾತ್ರೆಗೆ ಪೊಲೀಸ್  ಸರ್ಪಗಾವಲು ಹಾಕಿ ಹದ್ದಿನ ಕಣ್ಣಿಟ್ಟಿದೆ.ರೈತರ ತೆಂಗು, ಅಡಿಕೆ ಬೆಳೆಗೆ ಬೆಂಬಲಿತ ಬೆಲೆ ನೀಡಬೇಕೆಂದು ಒತ್ತಾಯಿಸಿ ತಿಪಟೂರಿನಿಂದ ಸಾವಿರಾರು ರೈತರು ಬೆಂಗಳೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆ ಮೂರನೆ ದಿನಕ್ಕೆ ಕಾಲಿಟ್ಟಿದೆ.  ದು ನಿಟ್ಟೂರಿನಿಂದ ಆರಂಭವಾದ ರೈತರ ಪಾದಯಾತ್ರೆಗೆ ಜಿಲ್ಲಾಧಿಕಾರಿ ಮೋಹನ್‍ರಾಜ್, ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿ ಕಾರ್ತಿಕ್‍ರೆಡ್ಡಿ, ಡಿವೈಎಸ್‍ಪಿ ಚಿದಾನಂದಸ್ವಾಮಿ ಬಂದೋಬಸ್ತ್‍ಗೆ ನಿಯೋಜನೆಗೊಂಡಿದ್ದಾರೆ.

ಇದರ ಜತೆಗೆ 4 ಮಂದಿ ಡಿವೈಎಸ್‍ಪಿಗಳು, 7 ಮಂದಿ ಇನ್ಸ್‍ಪೆಕ್ಟರ್‍ಗಳು, 15 ಮಂದಿ ಸಬ್‍ಇನ್ಸ್‍ಪೆಕ್ಟರ್‍ಗಳು, 250 ಮಂದಿ ಪೊಲೀಸ್  ಸೇವೆಗಳು, 50 ಮಂದಿ ಮುಖ್ಯಪೇದೆಗಳು, 6 ಕೆಎಸ್‍ಆರ್‍ಪಿ ತುಕಡಿಗಳು ರೈತರ ಪಾದಯಾತ್ರೆಗೆ ಬೆಂಗಾವಲಾಗಿ ಸಾಗುತ್ತಿವೆ.  ತಿಪಟೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ಸಂಪೂರ್ಣ ಬಂದ್ ಮಾಡಲಾಗಿದ್ದು, ರೈತರ ಪಾದಯಾತ್ರೆ ಸುಗಮವಾಗಿ ಸಾಗಲು ಅನುಕೂಲ ಮಾಡಿಕೊಟ್ಟಿದ್ದಾರೆ. ಸ್ಪಷ್ಟ ಲಿಖಿತ ಆದೇಶ ಬರುವವರೆಗೂ ಪಾದಯಾತ್ರೆ ಕೈಬಿಡುವುದಿಲ್ಲ ಎಂದು ರೈತ ಸಂಘಟನೆಗಳ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದು, ಸ್ಪಷ್ಟ ಆದೇಶ ಬರಲಿ ಎಂದು ಕೋಡಿಹಳ್ಳಿ ಚಂದ್ರಶೇಖರ್ ಖಡಕ್ ಆಗಿ ರಾಜ್ಯಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ತುಮಕೂರಿನಿಂದ ಬೆಂಗಳೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ-4ರ ರಸ್ತೆಗೆ ರೈತರ ಪಾದಯಾತ್ರೆ ಬಂದರೆ ವಾಹನ ಸಂಚಾರ ನಿಯಂತ್ರಿಸುವುದು ಕಷ್ಟದ ಕೆಲಸ. ಈ ಸಂದರ್ಭದಲ್ಲಿ ರೈತರ ಪಾದಯಾತ್ರೆ ತಡೆಯಲು ಮುಂದಾದರೆ ಇಲ್ಲಿ ಆಗುವ ಅನಾಹುತಗಳಿಂದ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಕ್ಯಾತಸಂದ್ರ ಸಮೀಪವೇ ರೈತರ ಪಾದಯಾತ್ರೆ ಅಂತಿಮಗೊಳಿಸಲು ಹರಸಾಹಸ ನಡೆಸಲಾಗಿದೆ.

 

 

► Follow us on –  Facebook / Twitter  / Google+

Facebook Comments

Sri Raghav

Admin