ರೈತರ ಸಾಲ ಮನ್ನಾಕ್ಕಾಗಿ ದೆಹಲಿ ಚಲೋ ನಡೆಸಿ, ನಾವು ಜೊತೆಗೆ ಬರುತ್ತೇವೆ : ಬಿಜೆಪಿಗೆ ಸಿಎಂ ಟಾಂಗ್

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--01

ಬೆಂಗಳೂರು,ಸೆ.5- ಬಿಜೆಪಿಯವರು ಮಂಗಳೂರು ಚಲೋ ಮಾಡಿ ಸಮಾಜದ ಸಾಮರಸ್ಯ ಹಾಳು ಮಾಡುವ ಬದಲು ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ದೆಹಲಿ ಚಲೋ ಮಾಡಿದರೆ ನಾವು ಅವರ ಜೊತೆ ಬರುತ್ತೇವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ನಗರದ ಅಂಬೇಡ್ಕರ್ ಭವನದಲ್ಲಿ ಶಿಕ್ಷಕರ ದಿನಾಚರಣೆಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸಾಲ ಪಡೆದಿರುವ ರೈತರ ಸಾಲವನ್ನು ಮನ್ನಾ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಆಗ್ರಹಿಸಿ ಬಿಜೆಪಿ ದೆಹಲಿ ಚಲೋ ನಡೆಸಲಿ. ಆಗ ನಾವು ಅವರೊಂದಿಗೆ ಕೈಜೋಡಿಸುತ್ತೇವೆ. ರಾಜ್ಯದ ರೈತರಿಗೂ ನ್ಯಾಯ ದೊರಕುತ್ತದೆ. ಶಾಂತಿ ಸೌಹರ್ದತೆಯೂ ಉಳಿಯುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.

ಬಿಜೆಪಿಯವರ ರ್ಯಾಲಿಗೆ ನಮ್ಮ ಅಭ್ಯಂತರವಿಲ.್ಲ ಆದರೆ ಬೈಕ್ ರ್ಯಾಲಿಗೆ ಅವಕಾಶವಿಲ್ಲ. ದಾರಿಯುದ್ದಕ್ಕೂ ಬಾವುಟ ಹಿಡಿದುಕೊಂಡು ಘೋಷಣೆ ಕೂಗುತ್ತಾ ಹೊದರೆ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಸಾವಿರಾರು ಬೈಕ್‍ಗಳು ರಸ್ತೆಯಲ್ಲಿ ಹೊದರೆ ಸಂಚಾರ ಅಸ್ತವ್ಯಸ್ತವಾಗುತ್ತದೆ. ರಸ್ತೆ ಬ್ಲಾಕ್ ಆದರೆ ಜನರಿಗೂ ತೊಂದರೆಯಾಗುವುದರಿಂದ ಬೈಕ್ ರ್ಯಾಲಿಗೆ ಅವಕಾಶ ನೀಡಿಲ್ಲ ಎಂದು ಅವರು ಹೇಳಿದರು.

ಶಾಂತಿಯುತವಾಗಿ ಪ್ರತಿಭಟನೆ, ರ್ಯಾಲಿ, ಸಮಾವೇಶ ನಡೆಸಲು ಯಾವುದೇ ರೀತಿಯ ಅಡ್ಡಿಪಡಿಸುವುದಿಲ್ಲ. ಮಂಗಳೂರಿಗೆ ಹೋಗಿ ಪ್ರಚೋದನಾಕಾರಿ ಭಾಷಣ ಮಾಡಿ, ಅಲ್ಲಿ ಶಾಂತಿ ಕದಡುವ ಕೆಲಸ ಮಾಡಿದರೆ ಸುಮ್ಮನೆ ಕೂರಲು ಆಗುವುದಿಲ್ಲ. ಇದರ ಬದಲು ದೆಹಲಿ ಚಲೋ ಮಾಡಲಿ. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು 42 ಸಾವಿರ ಕೋಟಿ ರೂ. ಸಾಲ ಪಡೆದಿದ್ದಾರೆ. ರೈತರು ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದರು.

ಇತ್ತೀಚೆಗೆ ಬಿಜೆಪಿಯವರು ಒಂದು ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಆ ಪುಸ್ತಕದಲ್ಲಿ ಕೋಮು ಪ್ರಚೋದನೆಯ ಪದಗಳು ಸಾಕಷ್ಟಿವೆ. ಇಂತಹವರು ಶಾಂತಿ ರಕ್ಷಣೆ ಮಾಡುತ್ತಾರೆ ಎಂಬುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಯಾವುದೇ ರಾಜಕೀಯ ಪಕ್ಷಗಳು ಶಾಂತಿ ಸಾಮರಸ್ಯವನ್ನು ರಕ್ಷಣೆ ಮಾಡಬೇಕು. ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಬಾರದೆಂದು ಸಲಹೆ ನೀಡಿದರು. ಬೈಕ್ ರ್ಯಾಲಿ ಮಾಡುತ್ತೇವೆ ಎಂದು ಜಿದ್ದಿಗೆ ಬಿದ್ದವರಂತೆ ಮಾತನಾಡುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಕುರಿತು ಪ್ರತಿಕ್ರಿಯಿಸಿದ ಅವರು, ಬಿಎಸ್‍ವೈಗೆ ನೈತಿಕತೆಯಿಲ್ಲ. ಏಕವಚನ, ಕೆಟ್ಟ ಪದಗಳನ್ನು ಧಾರಾಳವಾಗಿ ಬಳಸುತ್ತಾರೆ. ನಾನು ಅವರಂತೆ ಮಾತನಾಡಲು ಬಯಸುವುದಿಲ್ಲ. ಬಿಎಸ್‍ವೈ ಅವರು ಒಂದು ವೇಳೆ ವೀರಾವೇಶದಿಂದ ಮಾತನಾಡಿ ಕಾನೂನುಭಂಗಕ್ಕೆ ಪ್ರಚೋದನೆ ನೀಡಿದರೆ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು. ಸಂಸದೆ ಶೋಭಾ ಕರಾಂದ್ಲಾಜೆ ಅವರು ಹಿಂದೂಗಳ ಪರವಾಗಿಲ್ಲ. ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಲು ಇಂತಹ ಕೆಲಸ ಮಾಡುತ್ತಿದಾರೆ ಎಂದು ಕಿಡಿಕಾರಿದರು.

Facebook Comments

Sri Raghav

Admin