ರೈತರ ಹೋರಾಟಕ್ಕೆ ಮಣಿದ ಸರ್ಕಾರ , ನಾಳೆಯೇ ಕೆರೆ,ಕಟ್ಟೆಗೆ ಜಲಾಶಯದಿಂದ ನೀರು

ಈ ಸುದ್ದಿಯನ್ನು ಶೇರ್ ಮಾಡಿ

Kaver--0124

ಬೆಂಗಳೂರು, ಆ.9- ಕಾವೇರಿ ನದಿ ಪಾತ್ರದ 4 ಜಲಾಶಯಗಳ ಆಯಾ ಅಚ್ಚುಕಟ್ಟು ಪ್ರದೇಶದಲ್ಲಿನ ಕೆರೆ ಕಟ್ಟೆಗಳಿಗೆ ನೀರು ಹರಿಸಲು ಸರ್ಕಾರ ನಿರ್ಧರಿಸಿದ್ದು, ನಾಳೆಯಿಂದ ನೀರು ಹರಿಸಲಿದೆ. ನಾಳೆಯಿಂದ ಕೆರೆಕಟ್ಟೆಗಳಿಗೆ ಬಿಡುವ ನೀರನ್ನು ಯಾವುದೇ ಕಾರಣಕ್ಕೂ ಕೃಷಿಗೆ ಬಳಸುವಂತಿಲ್ಲ ಎಂದು ಸ್ಪಷ್ಟ ಸೂಚನೆ ನೀಡಲಾಗಿದ್ದು, ಕೆರೆಕಟ್ಟೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ಹೆಚ್ಚಿಸಲು ಹಾಗೂ ಜನ, ಜಾನುವಾರುಗಳ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಕಾವೇರಿ ನೀರನ್ನು ಹರಿಸಲಾಗುತ್ತಿದೆ. ರೈತರು ಯಾವುದೇ ಕಾರಣಕ್ಕೂ ಭತ್ತ ನಾಟಿ ಮಾಡುವುದು, ಹೊಸದಾಗಿ ಕಬ್ಬು ಬೆಳೆಯುವ ಪ್ರಯತ್ನ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಕಾವೇರಿ ನದಿ ಪಾತ್ರದ ಪ್ರಮುಖ ಜಿಲ್ಲೆಯಾದ  ಮಂಡ್ಯದ ಸಂಸದರು,ಶಾಸಕರು, ವಿಧಾನಪರಿಷತ್ ಸದಸ್ಯರ ಜತೆ ಮಹತ್ವದ ಸಭೆ ನಡೆಸಿದ ಸಿದ್ದರಾಮಯ್ಯ ಸರ್ಕಾರದ ನಿರ್ಧಾರಕ್ಕೆ ಸಹಕರಿಸುವಂತೆ ಕೋರಿದರು.  ಮಂಡ್ಯ ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ಆಹಾಕಾರವಾಗಿದ್ದು, ಕೆರೆಕಟ್ಟೆಗಳಿಗೆ ಮೊದಲು ನೀರು ಹರಿಸಿ ಎಂದು ಜನಪ್ರತಿನಿಧಿಗಳು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸರ್ಕಾರ ನಾಳೆಯಿಂದಲೇ ನೀರು ಹರಿಸುವ ನಿರ್ಧಾರ ಕೈಗೊಂಡಿದೆ ಎಂದರು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಳೆದ ಕೆಲವು ದಿನಗಳಿಂದ ಮಂಡ್ಯ ಭಾಗದ ರೈತರು ಕೆರೆಕಟ್ಟೆಗಳಿಗೆ ನೀರು ಹರಿಸುವಂತೆ ಹೋರಾಟ ನಡೆಸುತ್ತಿದ್ದಾರೆ. ಅಂತರ್ಜಲ ಮಟ್ಟ ಒಂದು ಸಾವಿರ ಅಡಿಗೂ ಹೆಚ್ಚು ಆಳಕ್ಕೆ ಹೋಗಿದೆ. ಜನ ಜಾನುವಾರುಗಳಿಗೆ, ಕುಡಿಯುವ ನೀರಿಗೂ ತೊಂದರೆಯಾಗಿದೆ ಇದನ್ನು ನಿವಾರಿಸುವಂತೆ ಮನವಿ ಮಾಡಲಾಗಿತ್ತು.   ಈ ಹಿನ್ನೆಲೆಯಲ್ಲಿ ನೀರು ಬಿಡಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. 46 ವರ್ಷಗಳ ಇತಿಹಾಸದಲ್ಲಿ ಈ ವರ್ಷ ಅತ್ಯಂತ ಕಡಿಮೆ ಮಳೆ ಬಿದ್ದಿದೆ. ಕಳೆದ ವರ್ಷವೂ ಭೀಕರ ಬರ ಇತ್ತು. ಆದರೆ ಈ ದಿನದ ವೇಳೆಗೆ ಕಳೆದ ವರ್ಷ ಕಾವೇರಿ ನದಿ ಪಾತ್ರದ ಕೆಆರ್‍ಎಸ್, ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳಲ್ಲಿ 53.52 ಟಿಎಂಸಿ ನೀರಿತ್ತು. ಈ ವರ್ಷ ಕೇವಲ 45 ಟಿಎಂಸಿ ನೀರಿದ್ದು, ಕಳೆದ ವರ್ಷಕ್ಕಿಂತ ಒಟ್ಟಾರೆ 8 ಟಿಎಂಸಿ ಕಡಿಮೆ ನೀರಿದೆ.

ಒಳ ಹರಿವು ಕೂಡ ಕಡಿಮೆ ಇದೆ. ಜಲಾಶಯಗಳ ಅಚ್ಚುಕಟ್ಟು ಮತ್ತು ತಳಭಾಗದಲ್ಲೂ ನೀರಿಲ್ಲ. ಹಾಗಾಗಿ ರೈತರ ಬೇಡಿಕೆಯಂತೆ ನೀರು ಹರಿಸಲು ಸರ್ಕಾರ ಹಿಂದೆ-ಮುಂದೆ ನೋಡಿತ್ತು ಎಂದು ಸಮರ್ಥಿಸಿಕೊಂಡರು.   ಈಗ ನೀರು ಬಿಡುವ ನಿರ್ಧಾರ ತೆಗೆದುಕೊಂಡಿದ್ದೇವೆ. ನೀರು ಬಿಟ್ಟ ಕ್ಷಣ ರೈತರು ಭತ್ತ ಬಿತ್ತನೆ ಮಾಡಬಾರದು. (ಒಡ್ಲು ಹಾಕಬಾರದು) ಹೊಸದಾಗಿ ಕಬ್ಬು ಬೆಳೆಯಬಾರದು ಏಕೆಂದರೆ, ಮುಂದಿನ ದಿನಗಳಲ್ಲಿ ನೀರು ಬಿಡಲು ಸಾಧ್ಯವಾಗದಿದ್ದರ ಭತ್ತ ಒಣಗಿ ನಷ್ಟವಾಗಲಿದೆ. ಕಳೆದ ವರ್ಷ ಈ ಕಹಿ ಅನುಭವ ಅನುಭವಿಸಿದ್ದೇವೆ. ಹಾಗಾಗಿ ರೈತರು ನೀರಾವರಿ ಆಧಾರಿತ ಬೆಳೆ ಬೆಳೆಯಬಾರದು ಎಂದು ಮುಖ್ಯಮಂತ್ರಿ ಪದೇ ಪದೇ ಮನವಿ ಮಾಡಿದರು.

ಮಳೆ ಆಧಾರಿತ ಬೆಳೆ ಬೆಳೆಯಲು ನಮ್ಮ ಅಭ್ಯಂತರವಿಲ್ಲ. ಹೆಚ್ಚು ನೀರು ಬೇಕಾಗುವ ಬೆಳೆಗಳಿಗೆ ಅವಕಾಶವಿಲ್ಲ. ಈ ಬಗ್ಗೆ ನೀರಾವರಿ ಇಲಾಖೆ ಮತ್ತು ಕೃಷಿ ಇಲಾಖೆ ಭಿತ್ತಿ ಪತ್ರ ಮುದ್ರಿಸಿ ಹಂಚುವ ಮೂಲಕ ರೈತರಿಗೆ ಜಾಗೃತಿ ಮೂಡಿಸಲಿದೆ. ಇದಕ್ಕೆ ಜನಪ್ರತಿನಿಧಿಗಳು ಕೈಜೋಡಿಸಲಿದ್ದಾರೆ ಎಂದು ಹೇಳಿದರು.
ಈ ವರ್ಷದ ಮುಂಗಾರಿನ ಜೂನ್-ಜುಲೈನಲ್ಲಿ ಬರಬೇಕಾದ ಎಲ್ಲಾ ಮಳೆಗಳು ವಿಫಲವಾಗಿವೆ. ಹವಾಮಾನ ಮುನ್ಸೂಚನೆಗಳು ಸುಳ್ಳಾಗಿವೆ ಎಂದು ಅವರು ತಿಳಿಸಿದರು.

ಮೋಡ ಬಿತ್ತನೆಗೆ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಬಹುತೇಕ ಮುಂದಿನ ವಾರದಲ್ಲಿ ಈ ಕೆಲಸ ನಡೆಯಲಿದೆ ಎಂದ ಅವರು, ನಮ್ಮಲ್ಲಿ ನೀರಿನ ಕೊರತೆ ಇರುವುದರಿಂದ ತಮಿಳುನಾಡಿಗೆ ಬಿಡುವ ನೀರಿನಲ್ಲಿ ಕಡಿತ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.  ಕೆರೆ-ಕಟ್ಟೆಗಳಿಗೆ ಯಾವ ಪ್ರಮಾಣದಲ್ಲಿ ನೀರು ಹರಿಸಬೇಕೆಂಬುದನ್ನು ಕಾವೇರಿ ನದಿ ಪಾತ್ರದ ಜಲಾಶಯಗಳ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿದೆ. ಹೇಮಾವತಿ ಜಲಾಶಯದಲ್ಲಿ 715 ಕೆರೆಗಳಿದ್ದು, 7.5 ಟಿಎಂಸಿ ನೀರು ಬೇಕು. ಕೆಆರ್‍ಎಸ್ ಜಲಾಶಯದಲ್ಲಿ 215 ಕೆರೆಗಳಿದ್ದು, 2 ರಿಂದ 3 ಟಿಎಂಸಿ ನೀರು ಬೇಕು. ಹಾರಂಗಿ, ಕಬಿನಿ ಜಲಾಶಯ ವ್ಯಾಪ್ತಿಯ ಕೆರೆಗಳಿಗೆ ಸುಮಾರು ಒಂದು ಟಿಎಂಸಿ ಸೇರಿ ಸುಮಾರು 11 ಟಿಎಂಸಿ ನೀರನ್ನು ಕೆರೆಕಟ್ಟೆಗಳಿಗೆ ಹರಿಸಲು ಸರ್ಕಾರ ನಿರ್ಧರಿಸಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ಕೃಷ್ಣಭೈರೇಗೌಡ, ಮಂಡ್ಯ ಜಿಲ್ಲಾ ಉಸ್ತುವಾರಿ ಎಂ.ಕೃಷ್ಣಪ್ಪ, ಸಂಸದ ಪುಟ್ಟರಾಜು, ಶಾಸಕರಾದ ನರೇಂದ್ರಸ್ವಾಮಿ, ಪುಟ್ಟಣ್ಣಯ್ಯ, ಡಿ.ಸಿ.ತಮ್ಮಣ್ಣ, ಮರಿತಿಬ್ಬೇಗೌಡ, ರಮೇಶ್ ಬಂಡಿಸಿದ್ದನಗೌಡ, ನಾರಾಯಣಗೌಡ, ಚಲುವರಾಯಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.

Facebook Comments

Sri Raghav

Admin