ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಿಸಿದ್ದ ಸಿಬ್ಬಂದಿ ಸೇರಿ ನಾಲ್ವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Bengaluru-Crime--01

ಹುಬ್ಬಳ್ಳಿ, ಜು.25- ರೈಲ್ವೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಅನೇಕ ಯುವಕರಿಂದ ಲಕ್ಷಾಂತರ ರೂ. ವಸೂಲಿ ಮಾಡಿ ವಂಚಿಸಿದ್ದ ನಾಲ್ವರು ಖದೀಮರನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂಲತಃ ಕೊಳ್ಳೇಗಾಲದವರಾದ ಈ ವಂಚಕರಲ್ಲಿ ಇಬ್ಬರು ಸ್ವತಃ ನೈಋತ್ಯ ರೈಲ್ವೆ ವಲಯದಲ್ಲಿ ಉದ್ಯೋಗಿಗಳಾಗಿರುವುದು ವಿಶೇಷ. ಆರೋಪಿಗಳನ್ನು ರೈಲ್ವೆ ಉದ್ಯೋಗಿಗಳಾದ ಆನಂದ್ (36) ಹಾಗೂ ರಮೇಶ್ (42) ಮತ್ತು ಮನೋಜ್ (24), ಸಚಿನ್ (32) ಎಂದು ಗುರುತಿಸಲಾಗಿದ್ದು, ನಾಲ್ವರು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದವರು. ನೈಋತ್ಯ ರೈಲ್ವೆ ವಿಭಾಗದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ 16 ಮಂದಿ ಯುವಕರಿಂದ ತಲಾ 3 ಲಕ್ಷ ರೂ. ವಸೂಲು ಮಾಡಿದ್ದರು.

ಆನಂದ್ ಮತ್ತು ರಮೇಶ್ ರೈಲ್ವೆ ಉದ್ಯೋಗಿಗಳಾಗಿದ್ದರಿಂದ ಯುವಕರು ಇವರ ಮಾತನ್ನು ನಂಬಿ ಲಕ್ಷಾಂತರ ರೂ. ನೀಡಿದ್ದರು. ಈ ಖದೀಮರು ಕಳೆದ ಒಂದೆರಡು ವರ್ಷಗಳಿಂದ ಇದನ್ನೇ ಒಂದು ಉದ್ಯೋಗ ಮಾಡಿಕೊಂಡು ಸದ್ಯ ಲೆಕ್ಕಕ್ಕೆ ಸಿಕ್ಕಿರುವಂತೆ 16 ಜನರಿಂದ 48 ಲಕ್ಷ ರೂ. ವಸೂಲು ಮಾಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಇನ್ನೂ ಎಷ್ಟು ಜನಕ್ಕೆ ಈ ರೀತಿ ವಂಚನೆ ಮಾಡಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಾಗಿದೆ.

ಸಿಕ್ಕಿಬಿದ್ದಿದ್ದು ಹೀಗೆ:

ನಕಲಿ ದಾಖಲೆಗಳನ್ನು ಸೃಷ್ಟಿಸಿ ಯುವಕರಿಗೆ ಲಿಖಿತ ಪರೀಕ್ಷೆಗೆ ಕರೆಯಲಾಗಿದೆ ಎಂದು ಹೇಳಿ ನಿನ್ನೆ ಇವರನ್ನೆಲ್ಲಾ ಹುಬ್ಬಳ್ಳಿಗೆ ಕರೆಸಿದ್ದರು. ಪರೀಕ್ಷೆಗೆ ಮೊದಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕೆಂದು ಇವರನ್ನೆಲ್ಲಾ ವೈದ್ಯರ ಬಳಿ ಕರೆದೊಯ್ದಿದ್ದರು.  ಇನ್ನೇನು ತಮಗೆ ಕೆಲಸ ಸಿಕ್ಕೇ ಬಿಟ್ಟಿತು ಎಂಬ ಉತ್ಸಾಹದಲ್ಲಿ ಎಲ್ಲಾ 16 ಮಂದಿ ವೈದ್ಯಕೀಯ ಪರೀಕ್ಷೆಗಾಗಿ ತೆರಳಿದರು. ಈ ಕುರಿತಂತೆ ತಮಗೆ ದೊರೆತ ಖಚಿತ ಮಾಹಿತಿಯನ್ನಾಧರಿಸಿ ಬಲೆ ಬೀಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಈ ನಾಲ್ವರ ಪೈಕಿ ಇಬ್ಬರು ರೈಲ್ವೆ ಉದ್ಯೋಗಿಗಳಲ್ಲಿ ಒಬ್ಬನಾದ ಆನಂದ್ ಈ ವಂಚನೆಯ ಮಾಸ್ಟರ್ ಮೈಂಡ್ ಎಂದು ಪೊಲೀಸರು ತಿಳಿಸಿದ್ದಾರೆ. ನ್ಯಾಯಾಲಯದ ಎದುರು ಈ ವಂಚಕರನ್ನು ಹಾಜರುಪಡಿಸಿದಾಗ ಹೆಚ್ಚಿನ ವಿಚಾರಣೆಗಾಗಿ ಅವರನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin