ರೌಡಿಸಂ ಮಟ್ಟ ಹಾಕದಿದ್ದರೆ ಠಾಣಾಧಿಕಾರಿಗಳೇ ಹೊಣೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಜ.9-ನಗರದಲ್ಲಿ ರೌಡಿಶಿಟರ್‍ಗಳು ರೌಡಿಸಂ ನಡೆಸುತ್ತಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಆಯಾ ಠಾಣಾಧಿಕಾರಿಗಳನ್ನೇ ಹೊಣೆ ಮಾಡಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣೇಶ್ವರ ರಾವ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ನಗರದ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೋಲ್‍ಕಾಲ್ ನೀಡಲಿಲ್ಲವೆಂದು ವ್ಯಕ್ತಿಯೊಬ್ಬರ ಮೇಲೆ ರೌಡಿಶೀಟರ್‍ವೊಬ್ಬ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಆಯುಕ್ತರು ಈ ಆದೇಶ ನೀಡಿದ್ದಾರೆ. ನಗರದಲ್ಲಿ ರೌಡಿಸಂ ಮಟ್ಟ ಹಾಕಲು ಆಯಾ ಠಾಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ತಮ್ಮ ವ್ಯಾಪ್ತಿಯಲ್ಲಿನ ರೌಡಿಶೀಟರ್‍ಗಳನ್ನು ಪ್ರತ್ಯೇಕವಾಗಿ ಕರೆಸಿ ಸಾರ್ವಜನಿಕರಿಗೆ ತೊಂದರೆ ಕೊಡದಂತೆ ಅವರಿಗೆ ಎಚ್ಚರಿಕೆ ನೀಡಬೇಕು ಎಂದು ಸೂಚಿಸಿದ್ದಾರೆ.

ಶಾಲಾ-ಕಾಲೇಜು, ಟೀ ಅಂಗಡಿಗಳು ಸೇರಿದಂತೆ ಇನ್ನಿತರ ಅಂಗಡಿಗಳ ಬಳಿ ಗುಂಪು ಗುಂಪಾಗಿ ನಿಂತುಕೊಂಡು ಯುವತಿಯರನ್ನು ಚುಡಾಯಿಸುವುದು, ರೇಗಿಸುವುದು ಸೇರಿದಂತೆ ಅನುಚಿತ ವರ್ತನೆ ಕಂಡುಬಂದಲ್ಲಿ ಮುಲಾಜಿಲ್ಲದೆ ಠಾಣಾಧಿಕಾರಿಗಳು ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಕಳೆದ ತಿಂಗಳು ಕುವೆಂಪುನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕ್ಯಾಟರಿಂಗ್ ನಡೆಸುತ್ತಿದ್ದ ಸ್ಥಳಕ್ಕೆ ರೌಡಿಗಳು ಹೋಗಿ ಅಲ್ಲಿನವರ ಮೇಲೆ ಹಲ್ಲೆ ನಡೆಸಿದ್ದರು. ಅದೇ ಘಟನೆ ನಿನ್ನೆ ನಗರದಲ್ಲಿ ನಡೆದಿರುವುದರಿಂದ ನಗರ ಪೊಲೀಸ್ ಆಯುಕ್ತರು ಠಾಣಾಧಿಕಾರಿಗಳಿಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin