ರೌಡಿ ಗಣೇಶ್ ಕೊಲೆ ಮಾಡಿ ಪರಾರಿಯಾಗಿದ್ದ 5 ಆರೋಪಿಗಳ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Ganesh-Rowdy-Murder

ಬೆಂಗಳೂರು,ಅ.24- ಕ್ಲಬ್ ಪ್ರಾರಂಭಿಸಲು ಬಿಡದ ರೌಡಿ ಗಣೇಶನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಐದು ಮಂದಿ ಆರೋಪಿಗಳನ್ನು ನಗರದ ದಕ್ಷಿಣ ವಿಭಾಗದ ಪೊಲೀಸರು ಕೇವಲ 10 ಗಂಟೆಯೊಳಗೆ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಮನಗರ ಜಿಲ್ಲೆ ಗಬ್ಬಾಡಿ ಗ್ರಾಮದ ಜಯಂತ್(29), ಹಾರೋಹಳ್ಳಿ ಹೋಬಳಿಯ ಪರುವಯ್ಯನಪಾಳ್ಯದ ಕೌಶಿಕ್(20), ಹೆಡಮಾರನಹಳ್ಳಿಯ ವಿನಯ್(22), ಬೆಂ. ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿಯ ಗಿರಿಗೌಡನದೊಡ್ಡಿ ನಿವಾಸಿ ಮಹದೇವ(24) ಮತ್ತು ಭೀಮೇಶ್ವರನಗರದ ರಾಕೇಶ್(21) ಬಂಧಿತ ಆರೋಪಿಗಳು.

Rowdy-Ganesh

ಆರೋಪಿ ಜಯಂತ್ ಒಂದೂವರೆ ವರ್ಷದ ಹಿಂದೆ ರಿಕ್ರಿಯೇಷನ್ ಕ್ಲಬ್ ಪ್ರಾರಂಭಿಸಲು ಅನುಮತಿಗಾಗಿ ಪ್ರಯತ್ನಿಸುತ್ತಿದ್ದನು. ಅಂದಿನಿಂದ ಗಣೇಶ ಜಯಂತ್ಗೆ ಯಾವುದೇ ಕಾರಣಕ್ಕೂ ಕ್ಲಬ್ ಪ್ರಾರಂಭಿಸಲು ಬಿಡಬಾರದೆಂದು ಮತ್ತು ಈತನ ಬದಲಿಗೆ ಬೇರೆಯವರಿಗೆ ಕ್ಲಬ್ ಪ್ರಾರಂಭಿಸಲು ಸಹಾಯ ಮಾಡಬೇಕೆಂದು ತೊಂದರೆ ಕೊಡುತ್ತಿದ್ದನು. ಈ ವಿಚಾರವಾಗಿ ಜಯಂತ್ ಹಾಗೂ ಗಣೇಶ್ ನಡುವೆ ಜಗಳ ನಡೆದು ಗಣೇಶ್ ಕಡೆಯವರು ಜಯಂತ್ನನ್ನು ಕೊಲೆ ಮಾಡಲು ಈ ಹಿಂದೆ ಯತ್ನಿಸಿದ್ದಾಗ ಜಯಂತ್ ಒಂದು ಲಾಂಗನ್ನು ಕಿತ್ತುಕೊಂಡು ಗಣೇಶ್ ಕಡೆಯವನಾದ ರಾಮು ಎಂಬಾತನ ಮೇಲೆ ಹಲ್ಲೆ ನಡೆಸಿದ್ದನು.

ಈ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕ್ಲಬ್ ಪ್ರಾರಂಭಿಸಲು ಬಿಡಲಿಲ್ಲ ಮತ್ತು ಆರ್ಥಿಕವಾಗಿ ನಷ್ಟ ಉಂಟು ಮಾಡಿದನೆಂದು ದ್ವೇಷ ಸಾಧಿಸುತ್ತಿದ್ದ ಜಯಂತ್ ತನ್ನ ಸಹಚರರೊಂದಿಗೆ ಸೇರಿಕೊಂಡು ರೌಡಿ ಗಣೇಶನನ್ನು ಕೊಲೆ ಮಾಡಿದರೆ ತಾನು ಕ್ಲಬ್ ಪ್ರಾರಂಭಿಸಬಹುದು, ಆರ್ಥಿಕವಾಗಿ ಚೆನ್ನಾಗಿರಬಹುದೆಂಬ ದುರುದ್ದೇಶದಿಂದ ಕೊಲೆಗೆ ಸಂಚು ರೂಪಿಸಿದ್ದ. ನಿನ್ನೆ ಬೆಳಗ್ಗೆ 9.45ರಲ್ಲಿ ರೌಡಿ ಗಣೇಶ್ ಸುಬ್ರಹ್ಮಣ್ಯಪುರ ಠಾಣೆ ವ್ಯಾಪ್ತಿಯ ಹರಿನಗರದ ವಿನಾಯಕ ಥಿಯೇಟರ್ ಬಳಿ ಬಂದಿದ್ದಾಗ ಆಟೋ ಮತ್ತು ಬೈಕ್ಗಳಲ್ಲಿ ಬಂದ ಐದಾರು ಮಂದಿ ಇದ್ದ ಗುಂಪು ಈತನ ಮೇಲೆ ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿತ್ತು.

ಕೊಲೆ ಆರೋಪಿಗಳ ಪತ್ತೆಗೆ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರು ಮೂರು ತಂಡಗಳನ್ನು ರಚಿಸಿದ್ದರು. ಈ ತಂಡ ತೀವ್ರ ಕಾರ್ಯಾಚರಣೆ ನಡೆಸಿ ಘಟನೆ ನಡೆದ ಕೇವಲ 10ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ದಕ್ಷಿಣ ವಿಭಾಗದ ಉಪ ಪೊಲೀಸ್ ಕಮೀಷನರ್ ಶರಣಪ್ಪ ಮಾರ್ಗದರ್ಶನ ದಲ್ಲಿ ಬನಶಂಕರಿ ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಮಂಜುನಾಥ್, ಇನ್ಸ್ಪೆಕ್ಟರ್ ರಾಮಪ್ಪ ಬಿ.ಗುತ್ತೇರ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin