ರೌಡಿ ರಂಗ ನಡೆದಿದ್ದೇ ಹಾದಿ…!

ಈ ಸುದ್ದಿಯನ್ನು ಶೇರ್ ಮಾಡಿ

anekAL

ಆನೇಕಲ್, ಡಿ.28- ದಟ್ಟ ಕಾನನದ ನಡುವೆ ಸ್ವಚ್ಛಂದವಾಗಿ ಓಡಾಡಿಕೊಂಡು ದಷ್ಟಪುಷ್ಟವಾಗಿದ್ದ ರೌಡಿ ರಂಗ ಇವನು ಒಂಟಿಯಾಗಿರುವುದೇ ವಿಶೇಷ. ಮನುಷ್ಯನನ್ನು ಕಂಡರೆ ಆಗುತ್ತಿರಲಿಲ್ಲ. ಈತನಿಗೆ ಇಷ್ಟವಾದ ಸ್ಥಳ ಬನ್ನೇರುಘಟ್ಟದ ಮಿರ್ಜಾಹಿಲ್ ಬೆಟ್ಟದ ತಪ್ಪಲು. ಪ್ರತಿದಿನ ನೂರಾರು ಕಿಲೋ ಮೀಟರ್ ನಡೆದಾಡುವ ರಂಗನಿಗೆ ಈಗ ಪಾಠ ಕಲಿಸಲು ಸೆರೆ ಹಿಡಿದು ಕ್ರಾಲ್‍ಗೆ ಸೇರಿಸಲಾಗಿದೆ. ಈತ ಎಲ್ಲೇ ಇದ್ದರೂ ಸಂಜೆ ಹೊತ್ತಿಗೆ ಮಿರ್ಜಾಹಿಲ್ ಬೆಟ್ಟದ ತಪ್ಪಲು ಸೇರುತ್ತಿದ್ದ. ಒಮ್ಮೆ ಭೈರಪ್ಪನಹಳ್ಳಿಯ ಯುವಕನೊಬ್ಬ ರಂಗನಿಗೆ ಹೊಡೆದದ್ದಕ್ಕೆ ಮನೆ ಹುಡುಕಿಕೊಂಡು ಹೋಗಿ ಆತನ ಶರ್ಟ್ ಚಿಂದಿ ಚಿಂದಿ ಮಾಡಿ ಹೋಗಿದ್ದ.
ಮತ್ತೆ ಇದೇ ರೀತಿ ಕೀಟಲೆ ಮಾಡಲು ಯುವಕ ಮುಂದಾದಾಗ ಯುವಕನನ್ನು ಒಡೆದು ಸಾಯಿಸಿತ್ತು. ಅಂದಿನಿಂದ ಈತನಿಗೆ ರೌಡಿ ರಂಗ ಎಂದು  ಕರೆಯಲಾಗುತ್ತಿತ್ತು.

ಇದೀಗ ಮತ್ತೊಮ್ಮೆ ರೌಡಿರಂಗ ಮತ್ತೊಂದು ಪುಂಡತನವನ್ನು ಪ್ರದರ್ಶಿಸಿದ್ದು, ನೆಲಮಂಗಲದ ಗಂಗೇಪುರದಲ್ಲಿ ತನ್ನ ಪೌರುಷ ತೋರಿಸಿ ಯುವಕನೊಬ್ಬನನ್ನು ಕೊಂದು ಹಾಕಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯಾಕಾರಿಗಳ ಮೇಲೆ ಒತ್ತಡ ಹೆಚ್ಚಾಗಿ ಕೊನೆಗೂ ರಂಗನನ್ನು ಸೆರೆ ಹಿಡಿಯಲಾಗಿದೆ.  ರಂಗ ಬನ್ನೇರುಘಟ್ಟವಲ್ಲದೆ, ಪಶ್ಚಿಮ ಘಟ್ಟದವರೆಗೂ ಒಂಟಿಯಾಗಿ ಓಡಾಡಿಕೊಂಡಿದ್ದ. ಈತನನ್ನು ಹಿಡಿಯುವವರೇ ಇಲ್ಲ. ಅತ್ಯಂತ ಸೂಕ್ಷ್ಮಬುದ್ಧಿ ಹಾಗೂ ನೆನಪಿನಶಕ್ತಿ ಹೊಂದಿರುವ ರಂಗನಿಗೆ ಬನ್ನೇರುಘಟ್ಟದ ಸಾಕಾನೆಗಳಿಗೆ ಎಲ್ಲಿಲ್ಲದ ಪ್ರೀತಿ.

ಮದವೇರಿದರೆ ಸಾಕಾನೆಗಳನ್ನು ಹುಡುಕಿಕೊಂಡೇ ಬರುತ್ತಿದ್ದ. ಆಗ ಮಾವುತರಿಗೆ ಸಾಕಾನೆ ಪೋಷಿಸುವುದೇ ಅತಿ ಕಷ್ಟದ ಕೆಲಸವಾಗಿತ್ತು. ಒಟ್ಟಿನಲ್ಲಿ ಎಲ್ಲಾ ಕಾಡುಗಳ ಮಾವುತರಿಗೆ ಮತ್ತು ಅಕಾರಿಗಳಿಗೆ ನಡುಕ ಹುಟ್ಟಿಸಿದ್ದ. ಅಂತಹವನನ್ನು ಇದೀಗ ನೆಲಮಂಗಲ ಮತ್ತು ಮಾಗಡಿ ಮಧ್ಯಭಾಗ ಬರುವ ಭಂಟರಕುಪ್ಪೆ ಅರಣ್ಯ ಪ್ರದೇಶದಲ್ಲಿ ಇದರ ಉಪಟಳ ಹೆಚ್ಚಾಗಿದ್ದರಿಂದ ಅರವಳಿಕೆ ಮದ್ದು ನೀಡಿ ಬನ್ನೇರುಘಟ್ಟಕ್ಕೆ ತರಲಾಗಿದೆ. ಇನ್ನು ರೌಡಿರಂಗನನ್ನು ಹೇಗೆ  ಸಂಭಾಳಿಸುತ್ತಾರೋ ಕಾದು ನೋಡಬೇಕಿದೆ. ಇತ್ತೀಚೆಗೆ ತಿಪ್ಪಗೊಂಡನಹಳ್ಳಿ ಬಳಿ ಕಾಲುವೆಗೆ ಬಿದ್ದು ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸಿ ಮೃತಪಟ್ಟಿದ್ದ ಸಿದ್ಧ ಮತ್ತು ರೌಡಿರಂಗನಿಗೆ ದೊಡ್ಡ ಕಾಳಗವೇ ನಡೆದಿತ್ತು. ಆಗ ರೌಡಿರಂಗನಿಗೆ ಸಿದ್ಧ ಶರಣಾಗಿದ್ದ. ಅಂದಿನಿಂದ ರಂಗ ಬರುತ್ತಿದ್ದಾನೆ ಎಂದರೆ ಸಿದ್ಧ ಬನ್ನೇರುಘಟ್ಟದಿಂದ ಪರಾರಿಯಾಗುತ್ತಿದ್ದ. ಅಷ್ಟರಮಟ್ಟಿಗೆ ಈ ಎರಡೂ ಆನೆಗಳ ನಡುವೆ ಶತ್ರುತ್ವ ಇತ್ತು.

ಈತ ನಿಂತಲ್ಲಿ ನಿಲ್ಲುತ್ತಿರಲಿಲ್ಲ. ಬನ್ನೇರುಘಟ್ಟದಲ್ಲಿ ಆರು ತಿಂಗಳಿದ್ದರೆ, ಇನ್ನಾರು ತಿಂಗಳು ಬೇರೆಡೆ ಕಳೆಯುತ್ತಿದ್ದ. ತಮಿಳುನಾಡಿನ ತಳಿ ಕೃಷ್ಣಗಿರಿಯ ಏರುಕಾಡು, ಕೇರಳದ ಮುಂತಾದೆಡೆ ಸುತ್ತಾಡಿಕೊಂಡು ನಾಗರಹೊಳೆ, ಬಂಡೀಪುರ, ಬಿಳಿಗಿರಿರಂಗನಬೆಟ್ಟ, ಮುಂತಾದೆಡೆ ಸುತ್ತಾಡುತ್ತಿದ್ದ.  ಮಾಗಡಿ ಮಾರ್ಗವಾಗಿ ನೆಲಮಂಗಲದ ಶಿವಗಂಗೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸುತ್ತಾಡುವುದೇ ಇವನ ವಿಶೇಷ. ಈ ಬಾರಿ ನೆಲಮಂಗಲ ಮತ್ತು ಮಾಗಡಿ ಭಂಟರಕುಪ್ಪೆಯ ಮಧ್ಯೆ ಬರುವ ಅರಣ್ಯ ಪ್ರದೇಶದಲ್ಲಿ ನಾಲ್ಕು ಕಾಡಾನೆಗಳ ಜೊತೆ ಸೇರಿ ಉಪಟಳ ಮಾಡುತ್ತಾ, ರೈತರಿಗೆ ಮತ್ತು ಅರಣ್ಯ ಸಿಬ್ಬಂದಿಗೆ ನಿದ್ದೆಗೆಡಿಸಿದ್ದ.  ಅಕಾರಿಗಳು ಅನಿವಾರ್ಯವಾಗಿ ಪುಂಡಾನೆ ಸೆರೆ ಹಿಡಿಯಲು ಮೈಸೂರಿನಿಂದ ದಸರಾ ಆನೆಗಳನ್ನು ಕರೆಸಿ ಎರಡು ಆನೆಗಳನ್ನು ಸೆರೆಹಿಡಿದಿದ್ದರು.

ಜನ ಸ್ವಲ್ಪ ನಿಟ್ಟುಸಿರು ಬಿಡುತ್ತಿದ್ದಂತೆ ರಂಗ ಮತ್ತೆ ತನ್ನ ಹಳೇ ಚಾಳಿ ತೋರಿಸಿಯೇ ಬಿಟ್ಟ. ಗಂಗೇನಹಳ್ಳಿಯಲ್ಲಿ ಗುರುಪ್ರಸಾದ್ ಎಂಬಾತನನ್ನು ಕೊಂದಿದ್ದ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರ ಒತ್ತಡಕ್ಕೆ ಮಣಿದ ಅರಣ್ಯಾಕಾರಿಗಳು ಆಪರೇಷನ್ ರೌಡಿರಂಗ ಆರಂಭಿಸಿಯೇ ಬಿಟ್ಟರು. ರಂಗನ ಜಾಡು ಹಿಡಿದ ಅರಣ್ಯಾಕಾರಿಗಳು ಕೊನೆಗೂ ಸಾಹಸದಿಂದಲೇ ಸೆರೆಹಿಡಿಯುವಲ್ಲಿ ಯಶಸ್ವಿಯಾದರು. ತಪ್ಪಿಸಿಕೊಳ್ಳಲು ರಂಗ ಸಾಕಷ್ಟು ಪ್ರಯಾಸಪಟ್ಟು ದಾಂಧಲೆಗಿಳಿದಾಗ ಕೊನೆಗೆ ಅರವಳಿಕೆ ನೀಡಿ ಅದನ್ನು ಶಾಂತಗೊಳಿಸಿ ಆತನನ್ನು ಮರದ ದಿಮ್ಮಿಗಳಿಂದ ನಿರ್ಮಿಸಲಾಗಿರುವ ಕೋಣೆಗೆ ದೂಡಲಾಗಿದೆ. ಕೊನೆಗೂ ಬಂಧನದಲ್ಲಿರುವ ರಂಗನನ್ನು ಪಳಗಿಸಲು ಸಿಬ್ಬಂದಿ ಹರಸಾಹಸವನ್ನೇ ಪಡುತ್ತಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin