ರ‍್ಯಾಗಿಂಗ್ ನಿಂದ ಮನನೊಂದು ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Suicide-Hang-Girl
ಬೆಂಗಳೂರು,ಫೆ.7-ಸಹಪಾಠಿಗಳ ಕಿರುಕುಳದಿಂದ ಮನನೊಂದಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜರಾಜೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದ್ವಾರಕನಗರದ ನಿವಾಸಿ ಮೇಘನಾ(18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ದಯಾನಂದ ಸಾಗರ ಕಾಲೇಜಿನಲ್ಲಿ ಪ್ರಥಮ ಬಿಇ ವ್ಯಾಸಂಗ ಮಾಡುತ್ತಿದ್ದ ಮೇಘನಾ ರೆಪ್ರೆಸೆಂಟಿಟಿವ್ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದಳು. ಚುನಾವಣೆಗೆ ಸ್ಪರ್ಧಿಸಿದ್ದರಿಂದ ಕೆಲ ಸಹಪಾಠಿಗಳು ಈಕೆಯೊಂದಿಗೆ ಜಗಳವಾಡಿದ್ದರು. ಸಹಪಾಠಿಗಳ ವರ್ತನೆಯಿಂದ ನೊಂದಿದ್ದ ಮೇಘನಾ ಕೆಲ ದಿನಗಳಿಂದ ಕಾಲೇಜಿಗೆ ಹೋಗದೆ ಮನೆಯಲ್ಲೇ ಇರುತ್ತಿದ್ದಳು. ಪೊೀಷಕರು ಮೇಘನಾಳಿಗೆ ಸಮಾಧಾನಪಡಿಸಿ ಪುನಃ ಕಾಲೇಜಿಗೆ ಹೋಗುವಂತೆ ಮನವೊಲಿಸಿದ್ದರು.

ಪೋಷಕರ ಒತ್ತಾಯದ ಮೇರೆಗೆ ಮೇಘನಾ ಕಾಲೇಜಿಗೆ ಹೋದಾಗ ಸಹಪಾಠಿಗಳು ನಿಂದಿಸಿ, ಅಸಭ್ಯ ಮೆಸೇಜ್‍ಗಳನ್ನು ಕಳುಹಿಸಿದ್ದರಿಂದ ಬೇಸರಗೊಂಡಿದ್ದ ಈಕೆ ನಿನ್ನೆ ಮಧ್ಯಾಹ್ನ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ದೂರು ದಾಖಲು: ಮಗಳ ಸಾವಿಗೆ ಆಕೆಯ ಸಹಪಾಠಿಗಳೇ ಕಾರಣ. ನನ್ನ ಮಗಳಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ಸಹಪಾಠಿಗಳಾದ ಸಂದೀಪ್, ನಿಖಿಲ್ ಮತ್ತಿತರರು ಮನೆ ಬಳಿ ಬಂದು ಮಗಳೊಂದಿಗೆ ಜಗಳವಾಡಿ ಮಾನಸಿಕ ಕಿರುಕುಳ ನೀಡಿದ್ದರು. ಅದರಿಂದ ಕಾಲೇಜಿಗೆ ಹೋಗದೆ ಮನೆಯಲ್ಲೇ ಇರುತ್ತಿದ್ದಳು. ನಾವು ಆಕೆಗೆ ಸಮಾಧಾನಪಡಿಸಿ ಕಾಲೇಜಿಗೆ ಕಳುಹಿಸಿದ್ದೆವು. ಆದರೂ ಸಹಪಾಠಿಗಳು ಈಕೆಗೆ ಕೆಟ್ಟ ಮಾತುಗಳಿಂದ ನಿಂದಿಸುತ್ತಿದ್ದಲ್ಲದೆ ಅಸಭ್ಯವಾಗಿ ಮೆಸೇಜ್‍ಗಳನ್ನು ಕಳಹಿಸುತ್ತಿದ್ದ ಬಗ್ಗೆ ಮೇಘನಾ ಹೇಳಿಕೊಂಡಿದ್ದಳು ಎಂದು ಆಕೆಯ ತಾಯಿ ಲತಾ ಚಂದ್ರಶೇಖರ್ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.  ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin