ಲಂಕಾ ವಿರುದ್ಧ ಏಕೈಕ ಟಿ-20 ಪಂದ್ಯದಲ್ಲಿ ಭಾರತಕ್ಕೆ 7 ವಿಕೆಟ್ ಗಳ ಜಯ
ಕೊಲಂಬೊ. ಸೆ.06 : ಇಲ್ಲಿನ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಏಕೈಕ ಟಿ–20 ಪಂದ್ಯದಲ್ಲಿ ಭಾರತ ಶ್ರೀಲಂಕಾ ವಿರುದ್ಧ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಮೂರು ಪಂದ್ಯಗಳ ಟೆಸ್ಟ್ ಮತ್ತು ಐದು ಪಂದ್ಯಗಳ ಏಕದಿನ ಸರಣಿಗಳಲ್ಲಿ ‘ಕ್ಲೀನ್ ಸ್ವೀಪ್’ ಸಾಧನೆ ಮಾಡಿ ಬೀಗಿದ್ದ ಭಾರತ ಈಗ ಟಿ-20 ಯನ್ನೂ ಗೆಲ್ಲುವ ಮೂಲಕ ದಿಗ್ವಿಜಯ ಸಾಧಿಸಿ, ಸಿಂಹಳೀಯ ನಾಡಿನ ಪ್ರವಾಸವನ್ನು ಅವಿಸ್ಮರಣೀಯವಾಗಿಸಿದೆ. ಟೆಸ್ಟ್, ಏಕದಿನ ಪಂದ್ಯಗಳಲ್ಲಿ ಸತತ ಸೋಲುಗಳಿಂದ ಬೇಸತ್ತಿದ್ದ ಲಂಕಾ ತಂಡ ಇಂದು ನಡೆದ ಏಕೈಕ ಟಿ-20 ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಭಾರತದ ಗೆಲುವಿಗೆ ಬೃಹತ್ 171ರನ್ ಟಾರ್ಗೆಟ್ ನೀಡಿತ್ತು.
ಈ ಗುರಿ ಬೆನ್ನಟ್ಟಿದ ಭಾರತ ನಾಯಕ ನಾಯಕ ವಿರಾಟ್ ಕೊಹ್ಲಿ (82) ಅರ್ಧ ಶತಕ ಹಾಗೂ ಕನ್ನಡಿಗ ಮನೀಷ್ ಪಾಂಡೆ ಅವರ ಅಜೇಯ ಅರ್ಧ ಶತಕದ (51)ನೆರವಿನಿಂದ ತಂಡ ಗೆಲುವಿನ ನಗೆ ಬೀರಿದೆ. ಓಪನರ್ಗಳಾದ ರೋಹಿತ್ ಶರ್ಮಾ (9) ಹಾಗೂ ಕೆ.ಎಲ್.ರಾಹುಲ್ (24) ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಉತ್ತಮ ಆರಂಭ ಪಡೆದ ರಾಹುಲ್ 18 ಎಸೆತಗಳಲ್ಲಿ ಮೂರು ಬೌಂಡರಿಗಳಿಂದ 24 ರನ್ ಗಳಿಸಿದರೂ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಅಂತಿಮವಾಗಿ 19.2 ನೇ ಓವರ್ ನಲ್ಲಿ ಭಾರತ ಗೆಲುವಿನ ಗೆ ಬೀರುವ ಮೂಲಕ ಲಂಕಾ ಪ್ರವಾಸವನ್ನು ಅವಿಸ್ಮರಣೀಯವಾಗಿಸಿದೆ. ಭಾರತದ ಪರ ಯುಜುವೇಂದ್ರ ಚಹಾಲ್ 3ವಿಕೆಟ್, ಕುಲ್ದೀಪ್ ಯಾದವ್ 2ವಿಕೆಟ್ ಪಡೆದುಕೊಂಡರೆ, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬೂಮ್ರಾ ತಲಾ 1ವಿಕೆಟ್ ಪಡೆದುಕೊಂಡರು.
ಸ್ಕೋರ್ :
SL : 170/7 (20.0 )
IND : 174/3 (19.2 )