ಲಂಚ ಪಡೆಯುತ್ತಿದ್ದಾಗ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಎಫ್‍ಡಿಸಿ ಶಶಿಕಲಾ

ಈ ಸುದ್ದಿಯನ್ನು ಶೇರ್ ಮಾಡಿ

FDC--01

ನೆಲಮಂಗಲ, ಮಾ.22- ಅಧಿಕಾರಿಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಅನಭಿಷಿಕ್ತ ರಾಣಿಯಾಗಿ ಮೆರೆಯುತ್ತಿದ್ದ ನೆಲಮಂಗಲ ತಹಸೀಲ್ದಾರ್ ಕಚೇರಿಯ ಪ್ರಥಮ ದರ್ಜೆ ಗುಮಾಸ್ತೆ ಹಾಗೂ ಏಜೆಂಟ್ ಒಬ್ಬರು ಕಚೇರಿಯಲ್ಲೇ ರೈತರೊಬ್ಬರಿಂದ ಲಂಚ ಪಡೆಯುತ್ತಿದ್ದಾಗ ರೆಡ್‍ಹ್ಯಾಂಡ್ ಆಗಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಿಕ್ಕಿಬಿದ್ದಿದ್ದಾರೆ. ತಾಲೂಕು ಕಚೇರಿಯ ಸರ್ಕಾರಿ ಭೂಮಿ ಮತ್ತು ಗೋಮಾಳಗಳಿಗೆ ನಿರಾಪೇಕ್ಷಣಾ ಪತ್ರ ಮಂಜೂರು ಮಾಡುವ ವಿಭಾಗದಲ್ಲಿ ಪ್ರಥಮ ದರ್ಜೆ ಗುಮಾಸೆಸ್ತೇಯಾಗಿದ್ದ ಶಶಿಕಲಾ ಹಾಗೂ ಆಕೆಯ ಪರ್ಸನಲ್ ಏಜೆಂಟ್ ಮೂರ್ತಿ ಎಸಿಬಿ ಬಲೆಗೆ ಸಿಕ್ಕಿಬಿದ್ದವರು. ನಿನ್ನೆ 3.30ರ ಸಂದರ್ಭದಲ್ಲಿ ರೈತರೊಬ್ಬರಿಂದ 10 ಸಾವಿರ ಲಂಚ ಪಡೆಯುತ್ತಿದ್ದಾಗ ದಿಢೀರ್ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಶಶಿಕಲಾ ಹಾಗೂ ಏಜೆಂಟ್ ಮೂರ್ತಿಯನ್ನು ರೆಡ್‍ಹ್ಯಾಂಡ್ ಆಗಿ ಬಂಧಿಸಿದ್ದಾರೆ.

ಸಿಕ್ಕಿಬಿದ್ದಿದ್ದು ಹೇಗೆ..?
ತ್ಯಾಮಗೊಂಡ್ಲು ಹೋಬಳಿಯ ಬಿದನೂರು ಗ್ರಾಮದ ರೈತರೊಬ್ಬರು ಕಳೆದ 40 ವರ್ಷಗಳಿಂದ ಎರಡು ಎಕರೆ ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಬರುತ್ತಿದ್ದರು.  ಹೀಗಾಗಿ ಬಗರ್ ಹುಕುಂ ಯೋಜನೆಯಡಿ ನನಗೆ ಸಾಗುವಳಿ ಚೀಟಿ ನೀಡುವಂತೆ ಕಳೆದ ಮೂರ್ನಾಲ್ಕು ತಿಂಗಳಿಂದ ಆ ರೈತ ನೆಲಮಂಗಲ ತಹಸೀಲ್ದಾರ್ ಕಚೇರಿಗೆ ಅಲೆಯುತ್ತಿದ್ದರು. ಆದರೆ, ರೈತನ ಸಂಕಷ್ಟಕ್ಕೆ ಸ್ಪಂದಿಸದ ಶಶಿಕಲಾ ಅವರು ಒಂದು ಲಕ್ಷ ಲಂಚ ನೀಡಿದರೆ ನಿನ್ನ ಕೆಲಸ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಅಷ್ಟೊಂದು ಲಂಚ ನೀಡಲು ಸಾಧ್ಯವಿಲ್ಲದ ರೈತ ಕೊನೆಗೆ ತುಮಕೂರು ಮೂಲದ ವಕೀಲರೊಬ್ಬರನ್ನು ಸಂಪರ್ಕಿಸಿ ಅವರ ಸಲಹೆಯಂತೆ ಶಶಿಕಲಾ ಅವರಿಗೆ ದೂರವಾಣಿ ಕರೆ ಮಾಡಿಸಿ ಕೊನೆಗೆ 30 ಸಾವಿರಕ್ಕೆ ಸೆಟ್ಲ್‍ಮೆಂಟ್ ಆಗಿತ್ತು.

ನಿನ್ನೆ ರೈತ 30 ಸಾವಿರ ಲಂಚದ ಹಣದಲ್ಲಿ 10 ಸಾವಿರದೊಂದಿಗೆ ಕಚೇರಿಗೆ ಆಗಮಿಸಿದ್ದ. ಈ ಸಂದರ್ಭದಲ್ಲಿ ಶಶಿಕಲಾ ತನ್ನ ಆಪ್ತ ಏಜೆಂಟ್ ಮೂರ್ತಿ ಎಂಬುವವರ ಬಳಿ 10 ಸಾವಿರ ಹಣ ನೀಡುವಂತೆ ತಿಳಿಸಿದರು. ಅದರಂತೆ ರೈತರಿಂದ ಏಜೆಂಟ್ ಮೂರ್ತಿ 10 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ರೆಡ್‍ಹ್ಯಾಂಡ್ ಆಗಿ ಮೂರ್ತಿ ಹಾಗೂ ಶಶಿಕಲಾ ಅವರನ್ನು ವಶಕ್ಕೆ ಪಡೆದುಕೊಂಡು ಇಬ್ಬರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.

ಶಶಿಕಲಾ ಹಿನ್ನೆಲೆ:
ತಹಸೀಲ್ದಾರ್ ಕಚೇರಿಯ ಎಲ್ ಅಂಡ್ ಇ ವಿಭಾಗದಲ್ಲಿ ಪ್ರಥಮ ದರ್ಜೆ ಗುಮಾಸ್ತೆಯಾಗಿರುವ ಶಶಿಕಲಾ ಸರ್ವಾಧಿಕಾರಿಣಿಯಂತೆ ವರ್ತಿಸುತ್ತಿದ್ದರು. ತಮಗೆ ಎದುರಾಡುವವರ ವಿರುದ್ಧ ಸುಳ್ಳು ಆರೋಪ ಹೊರಿಸಿ ಅವರನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವಲ್ಲಿ ನಿಪುಣರಾಗಿದ್ದರು. ಕೆಲ ವರ್ಷಗಳ ಹಿಂದೆ ನೆಲಮಂಗಲ ತಹಸೀಲ್ದಾರ್ ಕಚೇರಿಗೆ ಬಂದ ದಕ್ಷ ಶಿರಸ್ತೆದಾರರೊಬ್ಬರು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಪ್ರಯತ್ನ ಪಟ್ಟಿದ್ದರು. ಆ ಸಮಯದಲ್ಲಿ ಶಶಿಕಲಾ ಶಿರಸ್ತೇದಾರ್ ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನೀಡಿದ್ದಾರೆ ಎಂದು ತಹಸೀಲ್ದಾರ್ ಅವರಿಗೆ ದೂರು ನೀಡಿದ್ದರು.  ಈ ಪ್ರಕರಣ ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲೇರಿತ್ತು. ಕೊನೆಗೆ ಈಯಮ್ಮನ ಸಹವಾಸವೇ ಬೇಡ ಎಂಬ ತೀರ್ಮಾನಕ್ಕೆ ಬಂದ ಶಿರಸ್ತೇದಾರ್ ಅವರು ಶಶಿಕಲಾ ಅವರೊಂದಿಗೆ ರಾಜಿ ಮಾಡಿಕೊಂಡು ತೆಪ್ಪಗಾಗಿದ್ದರು.

ಈ ಪ್ರಕರಣದ ನಂತರ ಶಶಿಕಲಾ ಆಟಾಟೋಪ ಮಿತಿಮೀರಿತ್ತು. ತಹಸೀಲ್ದಾರ್ ಕಚೇರಿಯಲ್ಲಿ ಈಕೆ ಹೇಳಿದ್ದೇ ವೇದವಾಕ್ಯವಾಗಿತ್ತು. ಹಿರಿ-ಕಿರಿಯ ಅಧಿಕಾರಿಗಳಲ್ಲದೆ ಸ್ವತಃ ತಹಸೀಲ್ದಾರ್ ಅವರು ಕೂಡ ಶಶಿಕಲಾ ಅವರ ಹಿಡಿತಕ್ಕೆ ಒಳಪಟ್ಟಿದ್ದರು. ಇಂತಿಪ್ಪ ಶಶಿಕಲಾ ಅವರ ವಿರುದ್ಧ ಸರ್ಕಾರಕ್ಕೆ ನೂರಾರು ದೂರು ದಾಖಲಾಗಿದ್ದವು. ವಾರದ ಹಿಂದೆ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿದ್ದ ಸರ್ಕಾರದ ಅಪರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿಜಯ್‍ಶಂಕರ್ ಅವರು ಶಶಿಕಲಾ ಅವರಿಗೆ ಎಚ್ಚರಿಕೆ ನೀಡಿ ಹೋಗಿದ್ದರು.  ವಿಜಯ್‍ಶಂಕರ್ ಎಚ್ಚರಿಕೆ ಬೆನ್ನಲ್ಲೇ ನಿನ್ನೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಶಶಿಕಲಾ ಹಾಗೂ ಆಕೆಯ ಏಜೆಂಟ್ ಮೂರ್ತಿ ಅವರನ್ನು ರೆಡ್‍ಹ್ಯಾಂಡ್ ಆಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಏಜೆಂಟರುಗಳದ್ದೇ ದರ್ಬಾರು:
ರಾಜಧಾನಿ ಸೆರಗಿನಲ್ಲಿರುವ ನೆಲಮಂಗಲದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಜೋರಾಗುತ್ತಿದ್ದಂತೆ ತಹಸೀಲ್ದಾರ್ ಕಚೇರಿಯಲ್ಲಿ ಕುರುಡು ಕಾಂಚಾಣ ಕುಣಿಯುವಂತಾಗಿತ್ತು. ಯಾವಾಗ ಕೈ ತುಂಬ ಲಂಚ ಸಿಗುತ್ತದೆ ಎಂಬ ಸೂಚನೆ ದೊರೆಯುತ್ತಿದ್ದಂತೆ ನೆಲಮಂಗಲ ತಹಸೀಲ್ದಾರ್ ಕಚೇರಿಯಲ್ಲಿ ಏಜೆಂಟರುಗಳ ದರ್ಬಾರು ಜೋರಾಯಿತು. ತಹಸೀಲ್ದಾರ್ ಕಚೇರಿಯ ಪ್ರತಿಯೊಬ್ಬ ಅಧಿಕಾರಿಯೂ ಒಬ್ಬೊಬ್ಬ ಪರ್ಸನಲ್ ಏಜೆಂಟರ್‍ಗಳನ್ನು ನಿಯೋಜಿಸಿಕೊಂಡಿದ್ದಾರೆ. ಯಾರೇ ಲಂಚ ನೀಡಬೇಕಾದರೂ ಏಜೆಂಟರುಗಳಿಗೇ ಹಣ ನೀಡಬೇಕಾಗಿತ್ತು.

ಪ್ರತಿಯೊಬ್ಬ ಏಜೆಂಟರ್‍ಗಳು ತಮ್ಮ ತಮ್ಮ ಬಾಸ್ ಕಚೇರಿಯ ಚೇರ್ ಪಕ್ಕದಲ್ಲೇ ಮತ್ತೊಂದು ಚೇರ್ ಹಾಕಿಕೊಂಡು ಸರ್ಕಾರಿ ನೌಕರರಂತೆ ಬೆಳಗ್ಗೆಯಿಂದ ಸಂಜೆವರೆಗೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ತಹಸೀಲ್ದಾರ್ ಅಥವಾ ಶಿರಸ್ತೇದಾರ್ ಬಳಿಗೆ ಯಾವುದೇ ಫೈಲ್ ತೆಗೆದುಕೊಂಡು ಹೋಗುವವರು ಇದೇ ಏಜೆಂಟರ್‍ಗಳು. ಕಚೇರಿಯ ರೆಕಾರ್ಡ್ ರೂಮ್ ಕೂಡ ಏಜೆಂಟರ್‍ಗಳ ವಶದಲ್ಲೇ ಇತ್ತು. ಏಜೆಂಟ್ ಮೂರ್ತಿ ಮತ್ತು ಶಶಿಕಲಾ ಬಂಧನದ ನಂತರವಾದರೂ ನೆಲಮಂಗಲ ತಹಸೀಲ್ದಾರ್ ಕಚೇರಿ ಏಜೆಂಟರ್‍ಗಳ ಕಾರುಬಾರಿನಿಂದ ಮುಕ್ತವಾಗುವುದೇ ಕಾದು ನೋಡಬೇಕು…

Facebook Comments

Sri Raghav

Admin