ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಬಿಬಿಎಂಪಿ ಕಾರ್ಪೊರೇಟರ್ ಜಿ.ಕೃಷ್ಣಮೂರ್ತಿ
ಬೆಂಗಳೂರು, ಮಾ.31-ಕಾಮಗಾರಿಯೊಂದರ ಗುತ್ತಿಗೆ ನೀಡಲು ಲಂಚ ಪಡೆಯುತ್ತಿದ್ದ ರಾಜಾಜಿನಗರ ವಾರ್ಡ್ನ ಕಾರ್ಪೊರೇಟರ್ ಜಿ.ಕೃಷ್ಣಮೂರ್ತಿ ಹಾಗೂ ಸಹಾಯಕ ಅಭಿಯಂತರ (ಎಇಇ) ಕೃಷ್ಣ ಇಂದು ಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ಸಿಕ್ಕಿಬಿದಿದ್ದಾರೆ. ರಾಜಾಜಿನಗರ ಆರ್ಟಿಒ ಕಚೇರಿ ಬಳಿ ಕೆಲ ದುರಸ್ತಿ ಕಾಮಗಾರಿ ಟೆಂಡರ್ ಕರೆಯಲಾಗಿತ್ತು. ಇದರ ಉಸ್ತುವಾರಿ ನೀಡಲು ಗುತ್ತಿಗೆದಾರನ ಜತೆ ವ್ಯವಹಾರ ಕುದುರಿಸಿ 23 ಲಕ್ಷ ಲಂಚ ಕೇಳಲಾಗಿತ್ತು ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ಕುರುಬರಹಳ್ಳಿಯಲ್ಲಿರುವ ಕೃಷ್ಣಮೂರ್ತಿ ಅವರ ನಿವಾಸಕ್ಕೆ ಎಸಿಬಿ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿದ್ದು, ಈ ವೇಳೆ ಮೊದಲ ಕಂತಿನಲ್ಲಿ 15 ಲಕ್ಷ ರೂ.ಗಳನ್ನು ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಪಾಲಿಕೆ ಸದಸ್ಯರೊಬ್ಬರು ಎಸಿಬಿ ಬಲೆಗೆ ಬಿದ್ದಿರುವುದು ಇದೇ ಮೊದಲಾಗಿದ್ದು, ಅವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹಿರಿಯ ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಬಿಬಿಎಂಪಿ ಸದಸ್ಯರಾಗುವ ಮೊದಲು ಜಿ.ಕೃಷ್ಣಮೂರ್ತಿ ಪಾಲಿಕೆಯಲ್ಲೇ ಗುತ್ತಿಗೆದಾರರಾಗಿದ್ದರು. ಕಳೆದ ಪಾಲಿಕೆ ಚುನಾವಣೆಯಲ್ಲಿ ಪ್ರಭಾವಿ ಕಾಂಗ್ರೆಸ್ ಮುಖಂಡರೊಬ್ಬರ ಆಪ್ತ ಬಳಗದಲ್ಲಿ ಕಾಣಿಸಿಕೊಂಡು ರಾಜಾಜಿನಗರ ವಾರ್ಡ್ನಿಂದ ಸ್ಪರ್ಧಿಸಲು ಟಿಕೆಟ್ ಪಡೆದು ಜಯಸಾಧಿಸಿದ್ದರು.
ಪಾಲಿಕೆ ಸದಸ್ಯರಾದ ಮೇಲೆ ಗುತ್ತಿಗೆದಾರರಾಗಿ ಮುಂದುವರೆಯುವ ಹಾಗಿಲ್ಲ. ಹಿಂದೆ ತಾನೇ ಗುತ್ತಿಗೆದಾರನಾಗಿದ್ದರೂ ಈಗ ಕೆಲಸ ಕೊಡಿಸಲು ಇನ್ನೊಬ್ಬ ಗುತ್ತಿಗೆದಾರ ಧನಂಜಯ್ ಅವರಿಂದ ಕೃಷ್ಣಮೂರ್ತಿ ಲಂಚ ಪಡೆಯಲು ಹೋಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಎಸಿಬಿಯ ಎಡಿಜಿಪಿ ಶರತ್ಚಂದ್ರ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS