ಲಂಡನ್‍ನಲ್ಲಿ ಉಗ್ರರ ಅಟ್ಟಹಾಸ : 6 ಸಾವು, ಪೊಲೀಸರ ಗುಂಡಿಗೆ 3 ಶಂಕಿತರು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

London-Attack

ಲಂಡನ್, ಜೂ.4-ಮ್ಯಾಂಚೆಸ್ಟರ್‍ನಲ್ಲಿ ಐಸಿಸ್ ಭಯೋತ್ಪಾದಕರ ಬಾಂಬ್ ದಾಳಿಗೆ 22 ಮಂದಿ ಬಲಿಯಾದ ಘಟನೆಯಿಂದ ಇಂಗ್ಲೆಂಡ್ ಆತಂಕಗೊಂಡಿರುವಾಗಲೇ ರಾಜಧಾನಿ ಲಂಡನ್‍ನಲ್ಲಿ ನಿನ್ನೆ ರಾತ್ರಿ ಉಗ್ರರು ನಡೆಸಿದ ಎರಡು ಭೀಕರ ಆಕ್ರಮಣಗಳಿಂದ ಕನಿಷ್ಠ ಆರು ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಇದೇ ವೇಳೆ ಪೊಲೀಸರು ಮೂವರು ಶಂಕಿತರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.   ಜೂನ್ 8ರಂದು ಯುನೈಟೆಡ್ ಕಿಂಗ್‍ಡಂನಲ್ಲಿ ಸಾರ್ವತ್ರಿಕ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲಿ ಭಯೋತ್ಪಾದರು ಹಿಂಸಾಚಾರದ ಪೈಶಾಚಿಕ ಕೇಕೆ ಹಾಕಿದ್ದಾರೆ. ಲಂಡನ್‍ನ ಅತ್ಯಂತ ಪ್ರಸಿದ್ಧ ಸ್ಥಳಗಳಾದ ಲಂಡನ್ ಬ್ರಿಡ್ಜ್ ಮತ್ತು ಬೋರೋ ಮಾರುಕಟ್ಟೆಯಲ್ಲಿ ಭಯೋತ್ಪಾದಕರು ಈ ಹಿಂಸಾಕೃತ್ಯಗಳನ್ನು ನಡೆಸಿದ್ದಾರೆ.ಲಂಡನ್ ಸೇತುವೆ ಮೇಲೆ ನಡೆದ ಮೊದಲ ದಾಳಿಯಲ್ಲಿ, ಉಗ್ರರು ಚಾಲನೆ ಮಾಡುತ್ತಿದ್ದ ಬಿಳಿ ವ್ಯಾನ್ ಜನರತ್ತ ರಭಸದಿಂದ ನುಗ್ಗಿತು. ಪಾದಚಾರಿ ಮಾರ್ಗದ ಮೇಲೆ ಸಂಚರಿಸುತ್ತಿದ್ದ ಜನರು ಈ ಹಠಾತ್ ಆಕ್ರಮಣದಿಂದ ಹೆದರಿ ದಿಕ್ಕಾಪಾಲಾಗಿ ಓಡಿದರು.   ಇದಾದ ಕೆಲವೇ ನಿಮಿಷಗಳ ನಂತರ ಥೇಮ್ಸ್ ನದಿಯ ದಕ್ಷಿಣ ದಂಡೆ ಮೇಲಿರುವ ಬೋರೋ ಮಾರುಕಟ್ಟೆಯಲ್ಲಿ ಎರಡನೇ ದಾಳಿ ನಡೆಯಿತು. ಮಾರಕಾಸ್ತ್ರಗಳನ್ನು ಹೊಂದಿದ್ದ ಮೂವರು ಯುವತಿ ಸೇರಿದಂತೆ ಜನರನ್ನು ಮನಸ್ಸೋ ಇಚ್ಚೆ ಇರಿದರು.

ಈ ಎರಡು ಘಟನೆಗಳಲ್ಲಿ ಆರು ಮಂದಿ ಮೃತಪಟ್ಟು 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ದಾಳಿ ನಂತರ ಲಂಡನ್ ನಾಗರಿಕರು ಭಯ-ಆತಂಕಗಳಿಂದ ದಿಗ್ಭ್ರಾಂತರಾಗಿದ್ದಾರೆ. ಎರಡು ವಾರಗಳ ಹಿಂದೆ ಮ್ಯಾಂಚೆಸ್ಟರ್‍ನಲ್ಲಿ ಸಂಗೀತಗೋಷ್ಠಿ ವೇಳೆ ನಡೆದ ಬಾಂಬ್ ದಾಳಿಯ ಹತ್ಯಾಕಾಂಡದಿಂದ ಇಂಗ್ಲೆಂಡ್ ಚೇತರಿಸಿಕೊಳ್ಳುತ್ತಿರುವಾಗಲೇ ಮತ್ತೆ ಭಯೋತ್ಪಾದಕರ ಕೌರ್ಯದಿಂದ ದೇಶ ತಲ್ಲಣಗೊಂಡಿದೆ.

ಈ ಘಟನೆ ನಂತರ ಲಂಡನ್‍ನಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಶಂಕಿತ ಉಗ್ರರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಲಂಡನ್ ಸೇರಿದಂತೆ ಇಂಗ್ಲೆಂಡ್‍ನ ಪ್ರಮುಖ ನಗರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ನುಸುಳಿರಬಹುದಾದ ಉಗ್ರರಿಗಾಗಿ ತೀವ್ರ ಶೋಧ ಮುಂದುವರಿದಿದೆ.

ಪ್ರಧಾನಿ ಖಂಡನೆ : ಲಂಡನ್‍ನಲ್ಲಿ ನಡೆದ ಎರಡು ಭಯೋತ್ಪಾದನೆ ದಾಳಿಯನ್ನು ಬ್ರಿಟನ್ ಪ್ರಧಾನಿ ಥೆರೇಸಾ ಮೇ ಖಂಡಿಸಿದ್ದಾರೆ. ಭಯೋತ್ಪಾದಕರ ಕೃತ್ಯಗಳಿಗೆ ತಕ್ಕ ಶಾಸ್ತಿ ಮಾಡುವುದಾಗಿ ಹೇಳಿದ್ದಾರೆ.  ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ದೇಶಗಳ ಮುಖಂಡರು ಈ ದಾಳಿಯನ್ನು ಖಂಡಿಸಿದ್ದಾರೆ. ಉಗ್ರರ ನಿರ್ಮೂಲನೆಗಾಗಿ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

ಮಾರ್ಚ್‍ನಿಂದ ಇಂಗ್ಲೆಂಡ್‍ನಲ್ಲಿ ನಡೆದ ಮೂರನೇ ಭಯೋತ್ಪಾದನೆ ದಾಳಿ ಇದಾಗಿದೆ. ಮೇ 22ರಂದು ಮಾಂಚೆಸ್ಟರ್‍ನಲ್ಲಿ ಐಎಸ್ ಉಗ್ರರು ನಡೆಸಿದ ಮಾನವ ಬಾಂಬ್ ದಾಳಿಯಲ್ಲಿ 22 ಮಂದಿ ಮೃತಪಟ್ಟು, 116 ಜನ ಗಾಯಗೊಂಡರು. 22 ವರ್ಷದ ಸಲ್ಮಾನ್ ಅಬೇಡಿ ಎಂಬ ಉಗ್ರ ತನ್ನನ್ನು ತಾನು ಸ್ಫೋಟಿಸಿಕೊಂಡು ಭೀಕರ ನರಮೇದ ನಡೆಸಿದ್ದ.

ಮಾರ್ಚ್ 22ರಂದು ಪಾರ್ಲಿಮೆಂಟ್ ಹೌಸ್ ಬಳಿ ನಡೆದದ ದಾಳಿಯಲ್ಲಿ ಭಯೋತ್ಪಾದಕ ಸೇರಿ ಆರು ಮಂದಿ ಮೃತಪಟ್ಟು, ಕನಿಷ್ಠ 50 ಜನ ಗಾಯಗೊಂಡರು. ಭಯೋತ್ಪಾದಕ ಖಾಲಿದ್ ಮಸೂದ್ ವೆಸ್ಟ್‍ಮಿನಿಸ್ಟರ್ ಸೇತುವೆ ಮೇಲೆ ತನ್ನ ಕಾರನ್ನು ವೇಗವಾಗಿ ಚಾಲನೆ ಮಾಡಿ ಸಾವು-ನೋವಿಗೆ ಕಾರಣನಾಗಿದ್ದ. ಪಾರ್ಲಿಮೆಂಟ್ ಬಳಿ ಇನ್ನೊಂದು ಹತ್ಯಾಕಾಂಡಕ್ಕೆ ಯತ್ನಿಸುತ್ತಿದ್ದ ಆತನನ್ನು ಪೊಲೀಸರು ಗುಂಡಿಟ್ಟು ಕೊಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin