‘ಲಕ್ಷ್ಮಿ’ ಹೆಬ್ಬಾಳ್ಕರ್ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಈ ಸುದ್ದಿಯನ್ನು ಶೇರ್ ಮಾಡಿ

Lakshmi-Habbalkar

ಬೆಂಗಳೂರು, ಏ.7- ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರಿಗೆ ಹಣ ಹಂಚಿರುವ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.  ಶಾಸಕ ಬಿ.ಎನ್.ವಿಜಯ್‍ಕುಮಾರ್, ಬಿಜೆಪಿ ಕಾನೂನು ರಾಷ್ಟ್ರೀಯ ಘಟಕದ ಸದಸ್ಯ ವಿವೇಕರೆಡ್ಡಿ ಸೇರಿದಂತೆ ಮತ್ತಿತರ ಮುಖಂಡರು ಇಂದು ರಾಜ್ಯ ಮುಖ್ಯಚುನಾವಣಾಧಿಕಾರಿ ಅನಿಲ್‍ಕುಮಾರ್ ಝಾ ಅವರನ್ನು ಭೇಟಿ ಮಾಡಿ ಲಿಖಿತ ದೂರನ್ನು ಸಲ್ಲಿಸಿದರು.

ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ ಮತದಾರರು ಹಣ ಹಂಚಿ ತಮ್ಮ ಅಭ್ಯರ್ಥಿಗೆ ಮತ ಹಾಕುವಂತೆ ಆಮಿಷವೊಡ್ಡುವುದು ಶಿಕ್ಷಾರ್ಹ ಅಪರಾಧ. ಲಕ್ಷ್ಮೀ ಹೆಬ್ಬಾಳ್ಕರ್ ಮಹಿಳಾ ಮತದಾರರಿಗೆ ತಲಾ 2 ಸಾವಿರ ರೂ.ಗಳನ್ನು ಹಂಚುತ್ತಿದ್ದ ವಿಡಿಯೋ ದೃಶ್ಯ ಸುದ್ದಿವಾಹಿನಿಗಳಲ್ಲಿ ಸೆರೆಯಾಗಿದೆ. ಅವರ ವಿರುದ್ಧ ಎಫ್‍ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕೆಂದು ನಿಯೋಗ ಒತ್ತಾಯಿಸಿತು.  ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಯಬೇಕೆಂಬುದು ನಮ್ಮ ಆಶಯ. ಆದರೆ ಆಡಳಿತಾರೂಢ ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಂಡು ವಾಮಮಾರ್ಗದ ಮೂಲಕ ಗೆಲ್ಲಲು ಮುಂದಾಗಿದೆ.

ಲಕ್ಷ್ಮೀ ಹೆಬ್ಬಾಳ್ಕರ್ ಬಹಿರಂಗವಾಗಿ ಹಣ ಹಂಚುತ್ತಿರುವುದು ಸಾಬೀತಾಗಿರುವುದರಿಂದ ತಕ್ಷಣವೇ ಆಯೋಗ ಎಫ್‍ಐಆರ್ ದಾಖಲಿಸಿ ಅವರನ್ನು ಬಂಧಿಸುವಂತೆ ಆಗ್ರಹಿಸಿದರು.  ಇದೇ ರೀತಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ 42 ಹೆಚ್ಚು ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಎಂದು ಘೋಷಿಸಿ ಮುಕ್ತ ಹಾಗೂ ನ್ಯಾಯಸಮ್ಮತ ಮತದಾನ ನಡೆಯಲು ಅರೆ ಮಿಲಿಟರಿ ಪಡೆ ನಿಯೋಜಿಸಬೇಕು. ಇಲ್ಲಿ ಅನ್ಯಪಕ್ಷಗಳಿಂದ ಕೆಲ ಸಮಾಜಘಾತುಕ ಶಕ್ತಿಗಳು ಮತದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ. ಕೂಡಲೆ ಇಂತಹ ಘಾತುಕರನ್ನು ಬಂಧಿಸುವಂತೆ ಒತ್ತಾಯ ಮಾಡಲಾಯಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯ್‍ಕುಮಾರ್, ಗುಂಡ್ಲುಪೇಟೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಿ ಯಂತ್ರ ದುರುಪಯೋಗಪಡಿಸಿಕೊಂಡು ಮತದಾರರಿಗೆ ಆಮಿಷವೊಡ್ಡುವ ಮೂಲಕ ಚುನಾವಣಾ ವ್ಯವಸ್ಥೆಯನ್ನೇ ಹಾಳು ಮಾಡಲು ಹೊರಟಿದೆ ಎಂದು ದೂರಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಬಹಿರಂಗವಾಗಿ  ಹಣ ಹಂಚಿದರೆ, ಇನ್ನೂ ಕೆಲವರು ಇದೇ ಕಾರ್ಯದಲ್ಲಿ ನಿರತರಾಗಿದ್ದಾರೆ. ತಕ್ಷಣವೇ ಕಾನೂನು ಬಾಹಿರ ಚಟುವಟಿಕೆ ನಡೆಸುವವರ ಮೇಲೆ ಕ್ರಮ ಜರುಗಿಸಬೇಕೆಂದು ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಪರಿಶೀಲಿಸಿ ಕಾನೂನಿನ ಪ್ರಕಾರವೇ ಕ್ರಮಕೈಗೊಳ್ಳುವ ಭರವಸೆ ಸಿಕ್ಕಿದೆ ಎಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin