ಲಗ್ಗೆರೆ ರಸ್ತೆಗಳ ಅವ್ಯವಸ್ಥೆಗೆ ಮುಕ್ತಿ ಎಂದು..?
– ಕ್ಯಾತನಹಳ್ಳಿ ಚಂದ್ರಶೇಖರ್
ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿರುವ ಲಗ್ಗೆರೆ ಮತ್ತು ಕೊಟ್ಟಿಗೆಪಾಳ್ಯ ದುಃಸ್ಥಿತಿ ಹೇಳತೀರದಾಗಿದೆ. ಈ ಚಿತ್ರದಲ್ಲಿ ಕಾಣುವಂತೆ ಲಗ್ಗೆರೆ ರಿಂಗ್ ರಸ್ತೆಯ ಸೇತುವೆ ಕೆಳಗೆ ಹಾಗೂ ಸರ್ವಿಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಾರ್ವಜನಿಕರು ಮತ್ತು ವಾಹನ ಸವಾರರು ಪ್ರತಿನಿತ್ಯ ಸರ್ಕಸ್ ಮಾಡುತ್ತಾ ಸಂಚರಿಸುವಂತಾಗಿದೆ. ಲಗ್ಗರೆಯಲ್ಲಿ ಶೇಖರಣೆಯಾಗುವ ತ್ಯಾಜ್ಯವನ್ನೆಲ್ಲಾ ಇಲ್ಲಿಯೇ ತಂದು ಹಾಕಲಾಗುತ್ತದೆ. ಇನ್ನು ಮಳೆ ಬಂದರೆ ಈ ರಸ್ತೆಯ ಸ್ಥಿತಿ ಹೇಳತೀರದು. ತ್ಯಾಜ್ಯ ಕೊಳೆತು ಗಬ್ಬು ನಾರುತ್ತಿದ್ದು, ಅಲ್ಲದೆ ಮ್ಯಾನ್ ಹೋಲ್ ಒಡೆದು ಅದರ ದುರ್ನಾತ ಅಲ್ಲಿ ಓಡಾಡುವ ವಾಹನ ಸವಾರರು ಶಾಲೆಗೆ ಹೋಗುವ ಮಕ್ಕಳು ಮೂಗು ಮುಚ್ಚಿ ಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಿಂಗ್ ರಸ್ತೆಯಲ್ಲಿ ಸರ್ವಿಸ್ ರಸ್ತೆಗೆ ಸೇರುವ ಸೇತುವೆ ಕಾಮಗಾರಿಯು ಅರ್ಧಕ್ಕೆ ನಿಂತಿದ್ದು ವಾಹನ ಸವಾರರು ಪರಿತಪಿಸುವಂತಾಗಿದೆ. ಇನ್ನೊಂದು ವಿಷಯವೇನೆಂದರೆ ರಾಜಾಜಿನಗರ, ಬಸವೇಶ್ವರನಗರ, ನಗರದ ಮಧ್ಯ ಭಾಗಕ್ಕೆ ಪೀಣ್ಯ, ಹೆಗ್ಗನಹಳ್ಳಿ ಸೇರಿದಂತೆ ಇಲ್ಲಿಯ ಜನರಿಗೆ ಇದೊಂದೇ ಹತ್ತಿರವಾದ ಮಾರ್ಗವಾಗಿದ್ದರಿಂದ ಈ ಲಗ್ಗೆರೆ ರಿಂಗ್ ರಸ್ತೆಯ ಸೇತುವೆ ಮೇಲೆ ತುಂಬ ವಾಹನ ಸವಾರರು ಓಡಾಡುವುದರಿಂದ ತುಂಬಾ ಟ್ರಾಫಿಕ್ ಜಾಮ್ ಆಗಿ ಇಲ್ಲಿನ ಸಂಚಾರಿ ಪೊಲೀಸರು ವಾಹನ ಸವಾರರನ್ನು ನಿಯಂತ್ರಿಸಲು ಪರದಾಡುತ್ತಿರುತ್ತಾರೆ.
ಇದು ಇಷ್ಟಾದರೆ ಕೊಟ್ಟಿಗೆ ಪಾಳ್ಯದ ಪರಿಸ್ಥಿತೀನೂ ಹೀಗೇನೆ. ಅಲ್ಲೂ ಕೂಡ ರಿಂಗ್ ರಸ್ತೆ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದ್ದು, ಅದು ಕೂಡ ಆಮೆ ಗತಿಯಲ್ಲೆ ನಡೆಯುತ್ತಿದ್ದು, ಜನಪ್ರತಿನಿಧಿಗಳಿಗೆ ಹಾಗೂ ಪಾಲಿಕೆಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಸ್ಥಳೀಯ ಕಾರ್ಪೊರೇಟರ್ ಗಳು ಸಂಬಂಧಪಟ್ಟ ಬಿಡಿಎ ಅಧಿಕಾರಿಗಳು ಜನರ ಕಣ್ಣುಗಳಿಗೆ ಗುರಿಯಾಗದೆ ನಿಂತಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕೆಂದು ಜನರ ಒತ್ತಾಯವಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS