ಲಾರಿ ಕೆಳಗೆ ನುಗ್ಗಿದ ಬೈಕ್, ಪವಾಡ ಸದೃಶವಾಗಿ ಪಾರಾದ ದಂಪತಿ..!
ಬೇಲೂರು, ಜ.23- ವಾಹನ ದಟ್ಟಣೆಯ ಹಿನ್ನೆಲೆಯಲ್ಲಿ ಚಲಿಸುತಿದ್ದ ಲಾರಿ ಕೆಳಗೆ ಬೈಕ್ ಸವಾರರು ಬೈಕ್ ಸಮೇತ ನುಸುಳಿ ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡ ರೀತಿಯಲ್ಲಿ ಪಾರಾದ ಘಟನೆ ಪಟ್ಟಣದ ನೆಹರು ನಗರದ ವೃತ್ತದಲ್ಲಿ ನಡೆಯಿತು. ಕಳೆದೆರೆಡು ದಿನಗಳಿಂದ ಶಿರಾಡಿ ಘಾಟ್ ರಸ್ತೆ ಬಂದಾಗಿರುವ ಕಾರಣ ಧರ್ಮಸ್ಥಳ, ಮಂಗಳೂರು ಹಾಗೂ ಕುಂದಾಪುರ ಕಡೆಗೆ ತೆರಳುವ ವಾಹನಗಳು ಬೇಲೂರು ಮಾರ್ಗವಾಗಿ ಚಾರ್ಮುಡಿ ಮೂಲಕ ತೆರಳುತ್ತಿವೆ.
ಇದರಿಂದ ಬೇಲೂರು ಪಟ್ಟಣದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು ಒಂದಿಲ್ಲೊಂದು ಅಪಘಾತ ಸಂಭವಿಸುತ್ತಿದೆ. ಸೋಮವಾರ ಬೇಲೂರಿನಲ್ಲಿ ನಡೆಯುತ್ತಿದ್ದ ವೀರಶೈವ-ಲಿಂಗಾಯಿತ ಜನ ಜಾಗೃತಿ ಸಮಾವೇಶಕ್ಕೆ ಆಗಮಿಸುತ್ತಿದ್ದ ಬೇಲೂರು ತಾಲೂಕಿನ ಕೊಂಡ್ಲಿ ಗ್ರಾಮದ 35 ವರ್ಷದ ದೇವರಾಜು ಪತ್ನಿಯೊಂದಿಗೆ ಬೈಕಿನಲ್ಲಿ ಪಟ್ಟಣದ ನೆಹರು ನಗರದ ವೃತ್ತದಲ್ಲಿ ಬರುತ್ತಿದ್ದಾಗ ಏಕಾಏಕಿ ಬೈಕ್ ಲಾರಿ ಕೆಳ ಭಾಗಕ್ಕೆ ನುಸುಳಿದೆ.
ಆದರೆ ಈ ಸಂದರ್ಭದಲ್ಲಿ ಬೈಕ್ನಲ್ಲಿ ಕುಳಿತ್ತಿದ್ದ ದೇವರಾಜುವಿನ ಪತ್ನಿ ತಕ್ಷಣವೆ ತನ್ನ ಪತಿಯ ಅಂಗಿಯನ್ನಿಡಿದು ಎಳೆದಿದ್ದರಿಂದ ಚಕ್ರಕ್ಕೆ ಸಿಲುಕದೆ ಪತಿ-ಪತ್ನಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯವಾಗಿದ್ದು ಬೇಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿದ್ದಾರೆ. ವಿಶೇಷವೆಂದರೆ ಬೇಲೂರು ಪಟ್ಟಣದ ಮುಖ್ಯರಸ್ತೆ ಕಿರಿದಾಗಿರುವುದೆ ಇಂತಹ ಅವಘಡಗಳಿಗೆ ಕಾರಣವಾಗಿದ್ದು, ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಆಗ್ರಹ.