ಲಾರಿ ಮಾಲೀಕರ ಮುಷ್ಕರ ಆರಂಭ, ಸಾರ್ವಜನಿಕರಿಗೆ ಬೆಲೆ ಏರಿಕೆ ಹೊಡೆತ

ಈ ಸುದ್ದಿಯನ್ನು ಶೇರ್ ಮಾಡಿ

Lorry-Strike

ಬೆಂಗಳೂರು, ಮಾ.30- ಮೂರನೆ ವ್ಯಕ್ತಿ ವಿಮೆ (ಥರ್ಡ್ ಪಾರ್ಟಿ ಇನ್ಸುರೆನ್ಸ್) ಪ್ರೀಮಿಯಂ ದರ ದುಪ್ಪಟ್ಟು , 15 ವರ್ಷಗಳ ಹಳೆಯ ವಾಹನಗಳನ್ನು ಸ್ಥಗಿತಗೊಳಿಸುವುದು ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ವಿಧಿಸುವುದು ಸೇರಿದಂತೆ ಸರ್ಕಾರಗಳ ವಿವಿಧ ಧೋರಣೆ ಖಂಡಿಸಿ ಇಂದಿನಿಂದ ಲಾರಿ ಮಾಲೀಕರು ರಾಜ್ಯದೆಲ್ಲೆಡೆ ಮುಷ್ಕರ ಪ್ರಾರಂಭಿಸಿದ್ದಾರೆ.   ಲಾರಿ ಚಾಲಕರು, ಮಾಲೀಕರ ಸಂಘ, ಸರಕು-ಸಾಗಣೆ ವಾಹನ ಮಾಲೀಕರ ಸಂಘ ಸೇರಿದಂತೆ ಹಲವಾರು ಸಂಘಗಳು ಮುಷ್ಕರಕ್ಕೆ ಕರೆ ನೀಡಿದ್ದು, ಇಂದಿನಿಂದ ಲಾರಿಗಳು, ಗೂಡ್ಸ್ ವಾಹನಗಳು ಬೀದಿಗೆ ಇಳಿದಿಲ್ಲ.

ಹೀಗಾಗಿ ಸರಕು-ಸಾಗಾಣಿಕೆ ಇರದ ಕಾರಣ ತರಕಾರಿ, ಹಣ್ಣು, ಹೂವು ಮತ್ತಿತರ ವಸ್ತುಗಳ ಬೆಲೆ ಏರಿಕೆಯಾಗುವುದು ಗ್ಯಾರಂಟಿ. ಈಗಾಗಲೇ ಎಲ್ಲೆಡೆ ತೀವ್ರ ಬರ ಕಾಡುತ್ತಿದೆ. ಎಲ್ಲ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈ ನಡುವೆ ಲಾರಿ ಮುಷ್ಕರ ಪ್ರಾರಂಭವಾಗಿರುವುದರಿಂದ ಸಾರ್ವಜನಿಕರಿಗೆ ತೀವ್ರ ಹೊಡೆತ ಬೀಳಲಿದೆ.
ನಿರ್ಮಾಣ ಕ್ಷೇತ್ರದಲ್ಲೂ ಕೂಡ ಇದರ ಬಿಸಿ ತಟ್ಟುವ ಸಾಧ್ಯತೆಯಿದ್ದು, ಈಗಾಗಲೇ ಸಾರಿಗೆ ಅಧಿಕಾರಿಗಳು ಲಾರಿ ಮಾಲೀಕರ ಸಂಘಟನೆಗಳೊಂದಿಗೆ ಚರ್ಚೆಗೆ ಮುಂದಾಗಿದ್ದಾರೆ. ಕೇಂದ್ರ ಸರ್ಕಾರ ಥರ್ಡ್ ಪಾರ್ಟಿ ಇನ್ಸುರೆನ್ಸ್ ಪ್ರೀಮಿಯಂ ಮೊತ್ತವನ್ನು 22 ಸಾವಿರದಿಂದ 50 ಸಾವಿರ ರೂ.ಗೆ ಏಕಾಏಕಿ ಏರಿಸಿರುವುದರಿಂದ ಲಾರಿ ಮಾಲೀಕರಿಗೆ ತೀವ್ರ ಹೊಡೆತ ಬೀಳಲಿದೆ ಎಂಬುದು ಲಾರಿ ಚಾಲಕರು, ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಶಣ್ಮುಗಂರ ವಾದವಾಗಿದೆ. ದೇಶದಲ್ಲಿ ಲಾರಿ, ಟ್ಯಾಕ್ಸಿ, ಟೆಂಪೋ, ಗೂಡ್ಸ್ ಗಾಡಿಗಳು ಸೇರಿದಂತೆ 1.95 ಕೋಟಿ ವಾಣಿಜ್ಯ ವಾಹನಗಳಿವೆ. ಹೀಗೆ ಏಕಾಏಕಿ ವಿಮಾ ಪ್ರೀಮಿಯಂ ದರವನ್ನು ದುಪ್ಪಟ್ಟು ಏರಿಸಿದರೆ ನಮಗೆ ತೀವ್ರ ಹೊರೆಯಾಗಲಿದೆ. ಮಾಲೀಕರು ಬೀದಿಗೆ ಬೀಳಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ನಮ್ಮ ರಾಜ್ಯದಲ್ಲಿ ಇದು ಜಾರಿಯಾದರೆ ಆರು ಸಾವಿರ ಕೋಟಿ ಪ್ರೀಮಿಯಂ ಹಣ ಹೆಚ್ಚು ಪಾವತಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.   ಮೈಸೂರು, ಹುಬ್ಬಳ್ಳಿ ಮತ್ತಿತರ ಜಿಲ್ಲೆಗಳಲ್ಲಿ ಇಂದಿನಿಂದ ಲಾರಿ ಮುಷ್ಕರ ಪ್ರಾರಂಭವಾಗಿದ್ದು, ಏ.1ರಿಂದ ರಾಜ್ಯಾದ್ಯಂತ ಲಾರಿ ಮುಷ್ಕರ ಇನ್ನೂ ತೀವ್ರಗೊಳ್ಳಲಿದೆ.
ಆಲ್ ಇಂಡಿಯಾ ಕಾನ್ಫೆಡರೇಷನ್ ಆಫ್ ಗೂಡ್ಸ್ ವೆಹಿಕಲ್ಸ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಚನ್ನಾರೆಡ್ಡಿ ಮತ್ತಿತರ ಲಾರಿ ಮಾಲೀಕರ ಸಂಘದವರು ಕೂಡ (ಟಿಪಿಪಿ) ಥರ್ಡ್ ಪಾರ್ಟಿ ಪ್ರೀಮಿಯಂ ವಾಣಿಜ್ಯ ವಾಹನ ವಿಮಾ ಮೊತ್ತವನ್ನು ಶೇ.50ರಷ್ಟು ಹೆಚ್ಚಿಸುವಂತೆ ಕೇಂದ್ರ ಸರ್ಕಾರ ಸೂಚಿಸಿರುವುದನ್ನು ತೀವ್ರವಾಗಿ ವಿರೋಧಿಸಿದ್ದಾರೆ.

ಈ ಸಂಘಗಳವರು ಏ.1ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಲಿದ್ದಾರೆ. ಒಟ್ಟಾರೆ ಸರಕು-ಸಾಗಣೆಯಲ್ಲಿ ತೀವ್ರ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ಪರದಾಡಬೇಕಾಗುತ್ತದೆ.   ಹಾಲು ಮತ್ತಿತರ ಅತ್ಯವಶ್ಯಕ ವಸ್ತುಗಳ ಸಾಗಣೆಗೆ ಮಾತ್ರ ವಿನಾಯಿತಿ ನೀಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin