ಲಾರಿ ಮುಷ್ಕರ 6ನೆ ದಿನಕ್ಕೆ, 30 ಲಕ್ಷ ಮಂದಿ ಅತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

Lorry---01

ಬೆಂಗಳೂರು, ಏ.4– ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸರಕು-ಸಾಗಾಣಿಕೆ ವಾಹನಗಳ ಮಾಲೀಕರು ವಾಹನಗಳ ಮುಷ್ಕರ ಆರನೆ ದಿನಕ್ಕೆ ಕಾಲಿಟ್ಟಿದ್ದು, ಚಾಲಕರು, ಕ್ಲೀನರ್, ಹಮಾಲಿಗಳು, ಜಲ್ಲಿಕಲ್ಲು ಒಡೆಯುವವರು, ಅವಲಂಬಿತ ಕುಟುಂಬಗಳು ಸೇರಿದಂತೆ 30 ಲಕ್ಷ ಜನ ಅತಂತ್ರರಾಗಿದ್ದಾರೆ.
ವಿಮಾ ಶುಲ್ಕ ಇಳಿಕೆ ಬೇಡಿಕೆಗೆ ಸ್ಪಂದಿಸದ ಕಾರಣ ಲಾರಿ ಮಾಲೀಕರು ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಸಿರುವುದರಿಂದ ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಾಲಕರು, ಕ್ಲೀನರ್‍ಗಳು ಲಾರಿ ನಿಲ್ಲಿಸಿಕೊಂಡು ತ್ರಿಶಂಕು ಸ್ಥಿತಿಯಲ್ಲಿ ಬದುಕುವಂತಾಗಿದೆ.

ಲಾರಿ ಸಂಘದವರು ಅವರಿಗೆ ತಾತ್ಕಾಲಿಕವಾಗಿ ಅಲ್ಲಿಯೇ ಊಟದ ವ್ಯವಸ್ಥೆ ಮಾಡಿದ್ದಾರೆ. ಮರಳು, ಜಲ್ಲಿ, ಸಿಮೆಂಟ್, ಇಟ್ಟಿಗೆ, ದಿನಸಿ ಪದಾರ್ಥಗಳ ಸರಬರಾಜು ಸ್ಥಗಿತಗೊಂಡಿದ್ದು, ಎಪಿಎಂಸಿ ಮಾರುಕಟ್ಟೆ, ಹೂವು-ಹಣ್ಣು, ತರಕಾರಿ ಮಾರುಕಟ್ಟೆಗಳ ಹಮಾಲಿಗಳಿಗೆ ಕೆಲಸವಿಲ್ಲದಂತಾಗಿದೆ.  ರಾಜ್ಯದಲ್ಲಿ ಪ್ರತಿದಿನ 7.5 ಸಾವಿರ ಕೋಟಿ ನಷ್ಟವುಂಟಾಗುತ್ತಿದೆ. ಹೆದ್ದಾರಿ ಟೋಲ್‍ಗಳಲ್ಲಿ ಶೇ.30ರಷ್ಟು ಶುಲ್ಕ ಸಂಗ್ರಹ ಕಡಿತವಾಗಿದೆ. ಲಾರಿ ಮಾಲೀಕರ ಬೇಡಿಕೆಗೆ ವಿಮಾ ಕಂಪೆನಿಗಳು ಒಪ್ಪದ ಹಿನ್ನೆಲೆಯಲ್ಲಿ ಮುಷ್ಕರವನ್ನು ಮುಂದುವರಿಸಿರುವ ಸಂಘಟನೆಗಳಿಗೆ ಮತ್ತಷ್ಟು ಸಂಘಟನೆಗಳು ಸಾಥ್ ನೀಡಿವೆ.

ಗೂಡ್ಸ್ ವಾಹನಗಳು, ಮ್ಯಾಕ್ಸಿಕ್ಯಾಬ್, ಪೆಟ್ರೋಲಿಯಂ ಟ್ಯಾಂಕರ್‍ಗಳು ಕೂಡ ಇಂದು ಪ್ರತಿಭಟನೆಗೆ ಇಳಿಯುವ ಸಾಧ್ಯತೆಯಿರುವುದರಿಂದ ಮುಷ್ಕರದ ತೀವ್ರತೆ ಸಾರ್ವಜನಿಕರ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ.  ನಿನ್ನೆಯವರೆಗೆ ಆಹಾರ ಪದಾರ್ಥ, ತರಕಾರಿ ಪೂರೈಕೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಇಂದು ಎಪಿಎಂಸಿ ಮಾರುಕಟ್ಟೆಗೆ ಬರಬೇಕಾಗಿದ್ದ ಬೇಳೆಕಾಳು, ಎಣ್ಣೆ ಪದಾರ್ಥ, ಆಹಾರ ಧಾನ್ಯ ಪೂರೈಕೆ ಮಾಡುವ ಸುಮಾರು 3 ಸಾವಿರ ಲಾರಿ ಲೋಡ್‍ಗಳು ಸ್ಥಗಿತಗೊಂಡಿದ್ದವು. ಇತರೆ ಪ್ರದೇಶಗಳ ಸಾಗಾಣಿಕೆಯೂ ಬಂದ್ ಆಗಿತ್ತು.

ರಾಜ್ಯಕ್ಕೆ ಬರುವ ಲಾರಿಗಳು ರಾಜ್ಯದಿಂದ ಹೊರಹೋಗುವ ಲಾರಿಗಳ ಸಂಚಾರ ಸ್ಥಗಿತವಾಗಿದ್ದರಿಂದ ಮಾರುಕಟ್ಟೆಗೆ ಬರಬೇಕಾಗಿದ್ದ ಮತ್ತು ಹೊರ ಹೋಗಬೇಕಾಗಿದ್ದ ಎಲ್ಲ ಪದಾರ್ಥಗಳೂ ಸ್ಥಗಿತಗೊಂಡಿವೆ.   ಲಾರಿ ಮಾಲೀಕರ ಹೋರಾಟಕ್ಕೆ ಮ್ಯಾಕ್ಸಿಕ್ಯಾಬ್, ಆಟೋ, ಡೀಸೆಲ್ ಟ್ಯಾಂಕ್ ಮಾಲೀಕರು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ದಕ್ಷಿಣ ವಲಯದ ಮುಷ್ಕರಕ್ಕೆ ಆಲ್ ಇಂಡಿಯಾ ಲಾರಿ ಮಾಲೀಕರ ಸಂಘ ಸಾಥ್ ನೀಡಿದ್ದು, ದಿನಬಳಕೆ ವಸ್ತುಗಳಲ್ಲಿ ಭಾರೀ ವ್ಯತ್ಯಯವಾಗತೊಡಗಿದೆ.

ಲಾರಿ ಮುಷ್ಕರದ ಹಿನ್ನೆಲೆಯಲ್ಲಿ ತರಕಾರಿ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಯಶವಂತಪುರ ಮಾರುಕಟ್ಟೆಗೆ ಬಂದ ತರಕಾರಿ ಹೊರರಾಜ್ಯಗಳಿಗೆ ಪೂರೈಕೆ ಸ್ಥಗಿತವಾದ ಹಿನ್ನೆಲೆಯಲ್ಲಿ ಟೊಮ್ಯಾಟೋ, ಮೆಣಸಿನಕಾಯಿ, ಬೀನ್ಸ್, ಬಿಳಿಬದನೆ, ಸೌತೆಕಾಯಿ ಬೆಲೆ ಇವತ್ತಿಗೆ ಕಡಿಮೆಯಾಗಿತ್ತು. ಪ್ರತಿದಿನ 500 ರಿಂದ 1000 ಲೋಡು ಹೊರರಾಜ್ಯಗಳಿಗೆ ಹೋಗುತ್ತಿತ್ತು. ಆದರೆ, ಮುಷ್ಕರದಿಂದ ಎಲ್ಲವೂ ನಿಂತಿದೆ.   ಇಂದು ಮಧ್ಯಾಹ್ನ ಮುಷ್ಕರ ಬೆಂಬಲಿಸಿ ಎಪಿಎಂಸಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಲಾರಿ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ.

ಖಾಸಗಿ ವಿಮಾ ಕಂಪೆನಿಗಳಿಗೆ ಅನುಕೂಲ ಮಾಡಿಕೊಡಲು ಥರ್ಡ್ ಪಾರ್ಟಿ ಇನ್ಸುರೆನ್ಸ್ ಪ್ರೀಮಿಯಂಅನ್ನು ಹೆಚ್ಚಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡನೀಯ. ಅದನ್ನು ಹಿಂದಕ್ಕೆ ಪಡೆಯಬೇಕು. ಅಲ್ಲಿಯವರೆಗೆ ನಾವು ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಇಂದಿನಿಂದ ಉತ್ತರ ಭಾರತ ರಾಜ್ಯಗಳ ಲಾರಿ ಮಾಲೀಕರು ಮುಷ್ಕರಕ್ಕೆ ಬೆಂಬಲ ನೀಡಲಿದ್ದಾರೆ.   ಟೋಲ್ ಶುಲ್ಕ ಕಡಿತಗೊಳಿಸುವುದು, ಅವೈಜ್ಞಾನಿಕ ರಾಜ್ಯ ಹೆದ್ದಾರಿ ಶುಲ್ಕ ಹಿಂಪಡೆಯುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದರು.  ಯಾವುದೇ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಸ್ಪಂದಿಸಿಲ್ಲ. ಅನಿವಾರ್ಯವಾಗಿ ನಾವು ಪ್ರತಿಭಟನೆ ಹಾದಿ ಹಿಡಿದಿದ್ದೇವೆ ಎಂದು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin