ಲಾಲೂ ಬೆನ್ನು ಬಿಡದ ‘ಮೇವು’ ಭೂತ : ಬಹುಕೋಟಿ ಹಗರಣಕ್ಕೆ ಮತ್ತೆ ಬಂತು ಜೀವ

ಈ ಸುದ್ದಿಯನ್ನು ಶೇರ್ ಮಾಡಿ

lalu-Prasad-yadav

ನವದೆಹಲಿ, ಮೇ 8- ಇಡೀ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಬಿಹಾರದ ಬಹುಕೋಟಿ ರೂ.ಗಳ ಮೇವು ಹಗರಣಕ್ಕೆ ಮತ್ತೆ ಜೀವ ಬಂದಿದೆ. ಮಾಜಿ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ನತಾದಳ(ಆರ್‍ಜೆಡಿ) ಮುಖ್ಯಸ್ಥೆ ಲಾಲೂಪ್ರಸಾದ್ ಯಾದವ್ ಈ ಹಗರಣದ ಎಲ್ಲ ಪ್ರಕರಣಗಳಲ್ಲೂ ವಿಚಾರಣೆಗೆ ಹಾಜ ರಾಗುವಂತೆ ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಇದರೊಂದಿಗೆ ಲಾಲೂ ಅವರಿಗೆ ಮತ್ತೆ ದೊಡ್ಡ ಕಾನೂನು ಕಂಟಕ ಎದುರಾಗಲಿದೆ.  ಈ ಕೋಟ್ಯಂತರ ರೂ.ಗಳ ಹಗರಣದಲ್ಲಿ ಲಾಲೂ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಸಂಚು ಆರೋಪಗಳನ್ನೂ ಯಾವುದೇ ಕಾರಣಕ್ಕೂ ಕೈ ಬಿಡಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಖಡಾಖಂಡಿತವಾಗಿ ಹೇಳಿದೆ.ಮೇವು ಹಗರಣ ಪ್ರಕಣಗಳಲ್ಲಿ ಒಂದು ಪ್ರಕರಣದ ಶಿಕ್ಷೆ ನಂತರ ಲಾಲೂ ಮತ್ತು ಇತರೆ ಆರೋಪಿಗಳ ವಿಚಾರಣೆಗೆ ತಡೆ ನೀಡಿರುವ ಜಾರ್ಖಂಡ್ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಪಕ್ಕಕ್ಕಿರಿಸಿದೆ. ಅಲ್ಲದೆ ಈ ಪ್ರಕರಣದಲ್ಲಿ ಹೈಕೋರ್ಟ್ ಆದೇಶದ ವಿರುದ್ಧ ಮನವಿ ಸಲ್ಲಿಸಲು ವಿಳಂಬ ಮಾಡಿದ ಸಿಬಿಐನನ್ನು ಸಹ ಸರ್ವೋಚ್ಛ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.
ಜಾರ್ಖಂಡ್ ಹೈಕೋರ್ಟ್ ತೀರ್ಪಿನ ವಿರುದ್ಧ ಸಿಬಿಐ ಸಲ್ಲಿಸಿದ್ದ ಮೇಲ್ಮನವಿ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರನ್ನು ಒಳಗೊಂಡ ನ್ಯಾಯಪೀಠ, ಹಗರಣಕ್ಕೆ ಸಂಬಂಧಿಸಿದಂತೆ ಲಾಲೂ ಮತ್ತು ಇತರರ ವಿರುದ್ಧ ಸಿಬಿಐ ತನಿಖೆ ಮುಂದುವರೆಯಲಿದೆ ಎಂದು ತಿಳಿಸಿತು.

ಜಾರ್ಖಂಡ್ ಹೈಕೋರ್ಟ್ ತೀರ್ಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಪೀಠವು ಒಂದೇ ಆರೋಪಕ್ಕೆ ಬೇರೆ ಬೇರೆ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಈ ತೀರ್ಪಿನಲ್ಲಿ ಹೈಕೋರ್ಟ್ ಸ್ಥಿರತೆಯನ್ನು ವ್ಯಕ್ತಪಡಿಸಬೇಕಿತ್ತು. ಒಂದು ಪ್ರಕರಣದ ಆಪಾದನೆಯ ವಿವಿಧ ಆರೋಪಗಳಿಗೆ ವಿಭಿನ್ನ ನಿಲುವುಗಳನ್ನು ಹೊಂದಲು ಸಾಧ್ಯವಿಲ್ಲ ಎಂದು ಹೇಳಿದರು.  ಈ ಪ್ರಮುಖ ವಿಷಯದ ಬಗ್ಗೆ ಸಿಬಿಐ ನಿರ್ದೇಶಕರು ಗಂಭೀರ ಪರಾಮರ್ಶೆ ನಡೆಸಬೇಕು ಹಾಗೂ ಈ ಪ್ರಕರಣ ಮುಂದುವರೆಯಲು ಅಧಿಕಾರಿಯೊಬ್ಬರನ್ನು ನಿಯೋಜಿಸಬೇಕು ಎಂದು ಕೇಂದ್ರೀಯ ತನಿಖಾ ದಳಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.  9.4 ಶತಕೋಟಿ ರೂ.ಗಳ ಮೇವು ಹಗರಣ ದೇಶಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಸಂಬಂಧ ಲಾಲೂ ಪ್ರಸಾದ್ ಯಾದವ್ ಮತ್ತು ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ ಅವರನ್ನು ಬಂಧಿಸಲಾಗಿತ್ತು. ಈ ಹಗರಣ ಹಿನ್ನೆಲೆಯಲ್ಲಿ ಲಾಲೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin