ಲಿಂಗಾಯತ ಧರ್ಮಕ್ಕಾಗಿ 2 ಸಚಿವ ಬಣಗಳ ಕಿತ್ತಾಟ : ಸಿಎಂ-ಪರಂ ಮುಸುಕಿನ ಗುದ್ದಾಟ

ಈ ಸುದ್ದಿಯನ್ನು ಶೇರ್ ಮಾಡಿ

Basavanna--Siddaramaiah--01

ಬೆಂಗಳೂರು, ಸೆ.15- ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಶೀತಲ ಸಮರ ಮುಂದುವರಿದಿದೆ. ನಿನ್ನೆ ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಗೈರು ಹಾಜರಾಗುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಬಿಜೆಪಿಯ ಒಳಜಗಳ ವರದಾನವಾಗಲಿದೆ ಎಂಬ ಕಾಂಗ್ರೆಸ್ ನಿರೀಕ್ಷೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳ ನಡುವಿನ ಭಿನ್ನಮತದಿಂದ ಹುಸಿಯಾಗತೊಡಗಿದೆ ಎಂದು ಹೇಳಲಾಗುತ್ತಿದೆ.

ವೀರಶೈವ ಲಿಂಗಾಯತ ಧರ್ಮ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಲಿಂಗಾಯತ ಮುಖಂಡರಲ್ಲಿ ಎರಡು ಬಣಗಳಾಗಿವೆ. ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ ಒಂದು ಬಣವಾದರೆ ಬಸವರಾಜ ರಾಯರೆಡ್ಡಿ, ಬಿ.ಆರ್.ಪಾಟೀಲ್, ಶರಣ ಪ್ರಕಾಶ್ ಪಾಟೀಲ್, ಎಂ.ಬಿ.ಪಾಟೀಲ್ ಮತ್ತೊಂದು ಬಣದಲ್ಲಿದ್ದಾರೆ. ಈ ವಿವಾದದಲ್ಲೂ ಒಡಕುಂಟಾಗಿದೆ.  ಕೆಪಿಸಿಸಿ ಪದಾಧಿಕಾರಿಗಳ ನೇಮಕ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಆಪ್ತರನ್ನು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಸಂಪೂರ್ಣವಾಗಿ ಕೈಬಿಟ್ಟಿದ್ದರು. ಇದರಿಂದ ಅತೃಪ್ತರನ್ನು ಅಸಮಾಧಾನಗೊಳಿಸಲು ಎರಡನೆ ಪಟ್ಟಿ ಸಿದ್ಧಗೊಳಿಸಲಾಗುತ್ತಿದೆ ಎಂದು ಹೇಳಲಾಗುತ್ತಿತ್ತಾದರೂ ಈವರೆಗೆ ಎರಡನೆ ಪಟ್ಟಿ ಸಿದ್ಧವಾಗಲಿಲ್ಲ. ಇದರಿಂದ ಮತ್ತಷ್ಟು ಅಸಮಾಧಾನ ಉಂಟಾಗಿದ್ದು, ಕಾಂಗ್ರೆಸ್‍ನಲ್ಲಿ ಎರಡು ಶಕ್ತಿಕೇಂದ್ರಗಳು ಉಂಟಾದಂತಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸುತ್ತಿರುವ ಸಮಾರಂಭಗಳಲ್ಲೆಲ್ಲ ಉತ್ತಮ ಅಭ್ಯರ್ಥಿಗಳನ್ನು ಗುರುತಿಸಿ, ಕಳೆದ ಬಾರಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು ಎಂಬ ಆಶ್ವಾಸನೆ ನೀಡುತ್ತಿದ್ದರೆ, ಇತ್ತ ಪರಮೇಶ್ವರ್ ಅವರು ಸರ್ವೆ, ಗೆಲುವಿನ ಮಾನದಂಡ ಮುಂತಾದವುಗಳ ವಿಶ್ಲೇಷಣೆಯಲ್ಲಿ ತೊಡಗಿದ್ದಾರೆ. 2013ರ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಸಾಕಷ್ಟು ಗೊಂದಲ, ಜಗಳ ಉಂಟಾಗಿತ್ತು. ಈ ಬಾರಿಯು ಕೂಡ ಅದಕ್ಕಿಂತ ಹೆಚ್ಚಾದ ಜಗಳ ಉಂಟಾಗುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆ.

ಈಗ ನೇಮಕವಾಗಿರುವ ಪದಾಧಿಕಾರಿಗಳು ಇನ್ನೂ ಕ್ರಿಯಾಶೀಲರಾಗಿಲ್ಲ. ಪಕ್ಷ ಸಂಘಟನೆ, ಸದಸ್ಯತ್ವ ಅಭಿಯಾನ, ಪಕ್ಷದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಯಾವ ಕಾರ್ಯವನ್ನೂ ಅಷ್ಟಾಗಿ ಮಾಡುತ್ತಿಲ್ಲ.  ಕೆಪಿಸಿಸಿ ಪದಾಧಿಕಾರಿಗಳ ನೇಮಕಾತಿ ಸಂದರ್ಭದಲ್ಲಿ ಎಲ್ಲ ಜಿಲ್ಲೆಗಳವರಿಗೆ ಆದ್ಯತೆ ನೀಡಿಲ್ಲ ಎಂಬ ಆರೋಪ ಪ್ರಬಲವಾಗಿ ಕೇಳಿಬಂದಿದೆ. ನೂರಕ್ಕೂ ಹೆಚ್ಚು ಪದಾಧಿಕಾರಿಗಳನ್ನು ನೇಮಕ ಮಾಡಿದ ಪರಮೇಶ್ವರ್ ಅವರು ಬೆಂಗಳೂರಿನವರಿಗೆ 70 ಪದಾಧಿಕಾರಿಗಳ ಸ್ಥಾನ ನೀಡಿದ್ದಾರೆ. ಅದರಲ್ಲೂ ಜಯನಗರ ಕ್ಷೇತ್ರಕ್ಕೆ 12 ಜನರಿಗೆ ಪದಾಧಿಕಾರಿಗಳ ಸ್ಥಾನ ನೀಡಿದ್ದಾರೆ. ಇದರಿಂದಲೂ ಕೂಡ ಕೆಲವರು ಅಸಮಾಧಾನಗೊಂಡಿದ್ದಾರೆ.

ಇದಲ್ಲದೆ, ಜಿಲ್ಲಾ ಉಸ್ತುವಾರಿಯಾಗಿ ನೇಮಕಗೊಳಿಸಿರುವ ಪ್ರಧಾನ ಕಾರ್ಯದರ್ಶಿಗಳು ಅಲ್ಲಿನ ಕಾಂಗ್ರೆಸ್ ಮುಖಂಡರೊಂದಿಗೆ ಬೆರೆತು ಜನರ ನಾಡಿಮಿಡಿತ ಅರಿತು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಹಲವೆಡೆ ಇನ್ನೂ ಮೀಟಿಂಗ್ ಕೂಡ ಶುರು ಮಾಡಿಲ್ಲ. ಸಾಮಾನ್ಯವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡುವಾಗ ಕೆಪಿಸಿಸಿ ಸದಸ್ಯರಾದವರನ್ನು ಪರಿಗಣಿಸಲಾಗುತ್ತಿತ್ತು. ಆದರೆ, ಈ ಬಾರಿ 50ಕ್ಕೂ ಹೆಚ್ಚು ಸದಸ್ಯರನ್ನು ಹೊರಗಿನವರಿಗೆ ಅಂದರೆ ಕೆಪಿಸಿಸಿ ಸದಸ್ಯರಲ್ಲದವರನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.

ಈ ಎಲ್ಲ ಒಳಬೇಗುತಿ ಹಿನ್ನೆಲೆಯಲ್ಲಿ ಪಕ್ಷದ ಉಸ್ತುವಾರಿ ವೇಣುಗೋಪಾಲ್ ಅವರು ಆಗಾಗ್ಗೆ ರಾಜ್ಯಕ್ಕೆ ಬಂದು ಸಭೆಗಳನ್ನು ನಡೆಸುತ್ತಿದ್ದಾರೆ. ಇಂದಿನಿಂದ ನಾಲ್ಕು ದಿನಗಳ ಕಾಲ ಎಲ್ಲ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ.  ಹಲವು ಕಾರ್ಯಕರ್ತರು, ಮುಖಂಡರು ತಮ್ಮ ಅಳಲನ್ನು ವೇಣುಗೋಪಾಲ್ ಬಳಿ ಹೇಳಿಕೊಳ್ಳುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿರುವಂತೆ ಕಾಂಗ್ರೆಸ್‍ನಲ್ಲಿ ಭಿನ್ನಮತ ಭುಗಿಲೇಳುವ ಲಕ್ಷಣಗಳು ದಟ್ಟವಾಗತೊಡಗಿವೆ.

Facebook Comments

Sri Raghav

Admin